ADVERTISEMENT

ಮೊದಲ ದಿನ ಸಲ್ಲಿಕೆಯಾಗದ ನಾಮಪತ್ರ

ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 10:47 IST
Last Updated 25 ಅಕ್ಟೋಬರ್ 2019, 10:47 IST

ದಾವಣಗೆರೆ: ಮಹಾನಗರ ಪಾಲಿಕೆಯ 45 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ. ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಗುರುವಾರವೇ ಆರಂಭಗೊಂಡಿದ್ದು, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ತಲಾ ಐದು ವಾರ್ಡ್‌ಗಳಿಗೆ ಒಬ್ಬರಂತೆ ಒಟ್ಟು 9 ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಆರಂಭಿಸಿದ್ದಾರೆ. ಮೊದಲ ದಿನ ಚುನಾವಣಾಧಿಕಾರಿ ಕಚೇರಿಯತ್ತ ಯಾವುದೇ ಅಭ್ಯರ್ಥಿಗಳು ಸುಳಿದಿಲ್ಲ.

ಸರ್ಕಾರಿ ರಜಾ ದಿನ ಹೊರತುಪಡಿಸಿ ದಿನಾಲೂ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಲ್ಕನೇ ಶನಿವಾರವಾದ ಅ. 26ರಂದು ನಾಮಪತ್ರ ಸ್ವೀಕರಿಸಲಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಅ. 31 ಕೊನೆಯ ದಿನವಾಗಿದೆ. ನ. 2ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ನ.4 ಕೊನೆಯ ದಿನವಾಗಿದೆ. ನ. 12ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಅಗತ್ಯ ಬಿದ್ದರೆ ನ. 13ರಂದು ಮರು ಮತದಾನ ನಡೆಸಲಾಗುವುದು. ನ. 14ರಂದು ಮತ ಎಣಿಕೆ ನಡೆಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಪಕ್ಷದ ವರಿಷ್ಠರ ‘ಕೃಪೆ’ಗೆ ಪಾತ್ರರಾಗಿ, ‘ಬಿ’ ಫಾರಂ ಪಡೆಯಲು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಇನ್ನೊಂದೆಡೆ ಪಕ್ಷೇತರಾಗಿ ಸ್ಪರ್ಧಿಸಲು ಬಯಸಿರುವರು ನಾಮಪತ್ರ ಸಲ್ಲಿಸಲು ಬೇಕಾಗಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಆರಂಭಿಸಿದ್ದಾರೆ.

ರಾಜಕೀಯ ಪಕ್ಷಗಳ ಮುಖಂಡರು ಸಭೆ ಮಾಡಿ ನಡೆಸಿ ‘ಗೆಲ್ಲುವ ಅಭ್ಯರ್ಥಿ’ಗಳ ಶೋಧಕ್ಕೆ ಇಳಿದಿದ್ದಾರೆ. ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿನ ಆಕಾಂಕ್ಷಿಗಳ ಬಹಿರಂಗ ಸಭೆಗಳನ್ನು ಕಾಂಗ್ರೆಸ್‌ ಈಗಾಗಲೇ ನಡೆಸಿದೆ. ಅದೇ ರೀತಿ ಬಿಜೆಪಿ ನಾಯಕರೂ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಆಕಾಂಕ್ಷಿಗಳ ಆಂತರಿಕ ಸಭೆಯನ್ನು ನಡೆಸಿದ್ದಾರೆ. ಅ. 30ರೊಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಕಾಂಗ್ರೆಸ್‌ನಿಂದ ಅರ್ಜಿ ವಿತರಣೆ

ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಪಕ್ಷದ ಕಾರ್ಯಕರ್ತರಿಗೆ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಜನಸಂಪರ್ಕ ಕಚೇರಿಯಲ್ಲಿ ಗುರುವಾರದಿಂದ ಅರ್ಜಿ ವಿತರಿಸಲು ಆರಂಭಿಸಲಾಗಿದೆ. ಹಲವು ವಾರ್ಡ್‌ಗಳಿಂದ ಕೆಲವು ಆಕಾಂಕ್ಷಿಗಳು ಬಂದು ಅರ್ಜಿ ಪಡೆದುಕೊಂಡು ಹೋಗಿದ್ದಾರೆ.

‘100ಕ್ಕೂ ಹೆಚ್ಚು ಆಕಾಂಕ್ಷಿಗಳು ಬಂದು ಅರ್ಜಿ ಪಡೆದು ಹೋಗಿದ್ದಾರೆ. ಅ. 27ರವರೆಗೂ ಅರ್ಜಿ ವಿತರಿಸಲಾಗುವುದು. ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಅ. 28 ಹಗೂ 29ರಂದು ಅರ್ಜಿ ಪರಿಶೀಲನೆ ಮಾಡಲಾಗುವುದು. 30ರಂದು ‘ಬಿ’ ಫಾರಂ ಕೊಡಲಾಗುವುದು’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ ಎ. ನಾಗರಾಜ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.