ADVERTISEMENT

‘ಫ್ಲೆಕ್ಸ್ ತೆರವು ವಿವಾದ: ರೇಣುಕಾಚಾರ್ಯ ಕ್ಷಮೆ ಕೋರಲಿ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 5:56 IST
Last Updated 12 ಸೆಪ್ಟೆಂಬರ್ 2022, 5:56 IST

ಹೊನ್ನಾಳಿ: ‘ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಈಚೆಗೆ ಅಳವಡಿಸಿದ್ದ ಕೆಲವು ಮುಖಂಡರ ಫ್ಲೆಕ್ಸ್‌ಗಳನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ತೆರವು ಮಾಡಿ ಎಂ.ಪಿ. ರೇಣುಕಾಚಾರ್ಯ ಅವರ ಫ್ಲೆಕ್ಸ್‌ಗಳನ್ನು ಅದೇ ಜಾಗದಲ್ಲಿ ಅಳವಡಿಸುವ ಮೂಲಕ ನಾಯಕರಿಗೆ ಅವಮಾನ ಮಾಡಿದ್ದಾರೆ’ ಎಂದು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಪ್ರಶಾಂತ್, ಕಸಬಾ ಸೊಸೈಟಿ ನಿರ್ದೇಶಕ ಎಚ್.ಬಿ. ಪ್ರಕಾಶ್ ಆರೋಪಿಸಿದರು.

ತಾಲ್ಲೂಕಿನ ಮಾಜಿ ಶಾಸಕರಾದ ದಿ.ಎಚ್.ಬಿ. ಕಾಡಸಿದ್ದಪ್ಪ, ದಿ. ಡಿ.ಜಿ. ಬಸವನಗೌಡ, ದಿ.ಎಚ್.ಬಿ. ಕೃಷ್ಣಮೂರ್ತಿ ಹಾಗೂ ನಟ ದಿ. ಪುನೀತ್ ರಾಜ್‍ಕುಮಾರ್ ಅವರಿಗೆ ಈ ಮೂಲಕ ಅವಮಾನ ಮಾಡಿದ್ದಾರೆ ಎಂದುಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.

‘ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್. ಮಹೇಶ್ ಅವರು ಫ್ಲೆಕ್ಸ್‌ನಲ್ಲಿ ತಮ್ಮ ಭಾವಚಿತ್ರದ ಮೇಲ್ಭಾಗದಲ್ಲಿ ಈ ನಾಯಕರ ಚಿತ್ರಗಳನ್ನು ಹಾಕಿಸಿದ್ದರು. ಇದನ್ನು ಸಹಿಸಿಕೊಳ್ಳದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ಬೆಂಬಲಿಗರ ಮೂಲಕ ಫ್ಲೆಕ್ಸ್‌‌ಗಳನ್ನು ರಾತ್ರೋ ರಾತ್ರಿ ತೆರವುಗೊಳಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ನಟ ಪುನೀತ್ ರಾಜ್‍ಕುಮಾರ್ ಬಗ್ಗೆ ಮಾತನಾಡಿ ಅನುಕಂಪ ಗಿಟ್ಟಿಸುವ ಶಾಸಕ ರೇಣುಕಾಚಾರ್ಯ ಅವರ ಫ್ಲೆಕ್ಸ್ ಅನ್ನು ಏಕೆ ತೆರವುಗೊಳಿಸಿದರು. ಇದರಿಂದಲೇ ಪುನೀತ್ ಮೇಲಿನ ಶಾಸಕರ ಪ್ರೀತಿ ಎಂಥದ್ದು ಎಂದು ತಿಳಿದುಕೊಳ್ಳಬಹುದು. ಸಾರ್ವಕರ್ ಫ್ಲೆಕ್ಸ್‌ಗೆ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ ಎಂದು ಸುಳ್ಳು ಹೇಳಿ ಪ್ರತಿಭಟನೆ ಮಾಡಿಸಿದ ರೇಣುಕಾಚಾರ್ಯ ಈಗ ಇದಕ್ಕೆ ಏನು ಉತ್ತರ ಕೊಡುತ್ತಾರೆ’ ಎಂದುರಾಜ್ಯ ಯುವ ಕಾಂಗ್ರೆಸ್ ವಕ್ತಾರ ದರ್ಶನ್ ಪ್ರಶ್ನಿಸಿದರು.

‘ರೇಣುಕಾಚಾರ್ಯ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ಫ್ಲೆಕ್ಸ್ ತೆರವುಗೊಳಿಸಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಬೇಕು’ ಎಂದು ಅವರು ಆಗ್ರಹಿಸಿದರು.

ಎಚ್.ಬಿ. ಅಶ್ವಿನ್, ಎಚ್.ಬಿ. ಸ್ವರೂಪ್, ಗ್ರಾಮ ಪಂಚಾಯಿತಿ ಸದಸ್ಯ ರೋಷನ್, ಕತ್ತಿಗೆ ನಾಗರಾಜ್, ಕೊಡತಾಳ್ ರುದ್ರೇಶ್ ಇದ್ದರು.

‘ನಾಯಕರ ಬಗ್ಗೆ ಗೌರವವಿದೆ’
‘ಡಿ.ಜಿ. ಬಸವನಗೌಡರು, ಎಚ್.ಬಿ. ಕಾಡಸಿದ್ದಪ್ಪ, ಎಚ್.ಬಿ. ಕೃಷ್ಣಮೂರ್ತಿ ಅವರ ಮೇಲೆ ನನಗೆ ಅಪಾರವಾದ ಗೌರವವಿದೆ. ನಟ ಪುನೀತ್ ರಾಜ್‍ಕುಮಾರ್ ನಿಧನ ಹೊಂದಿದಾಗ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದೆ. ಅವರಂತೆ ನೇತ್ರದಾನ ಮಾಡುವಂತೆ ಕರೆ ನೀಡಿದ್ದೇನೆ. ಫ್ಲೆಕ್ಸ್ ಮುಂದಿಟ್ಟುಕೊಂಡು ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.