ADVERTISEMENT

ಸೂಳೆಕೆರೆ ಗುಡ್ಡಕ್ಕೆ ಬೆಂಕಿ; ಅಮೂಲ್ಯ ವನಸಂಪತ್ತು ನಾಶ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 3:18 IST
Last Updated 20 ಫೆಬ್ರುವರಿ 2026, 3:18 IST
ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಗುಡ್ಡಕ್ಕೆ ಮಂಗಳವಾರ ಬೆಂಕಿ ಬಿದ್ದು, ಅಮೂಲ್ಯವಾದ ಗಿಡಮರಗಳು ಬೆಂಕಿಗೆ ಆಹುತಿಯಾದವು
ಚನ್ನಗಿರಿ ತಾಲ್ಲೂಕಿನ ಸೂಳೆಕೆರೆ ಗುಡ್ಡಕ್ಕೆ ಮಂಗಳವಾರ ಬೆಂಕಿ ಬಿದ್ದು, ಅಮೂಲ್ಯವಾದ ಗಿಡಮರಗಳು ಬೆಂಕಿಗೆ ಆಹುತಿಯಾದವು   

ಸೂಳೆಕೆರೆ (ಚನ್ನಗಿರಿ): ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಸೂಳೆಕೆರೆಯ ಗುಡ್ಡಕ್ಕೆ ಮಂಗಳವಾರ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಅಮೂಲ್ಯ ವನಸಂಪತ್ತು ಹಾಗೂ ಪ್ರಾಣಿ–ಪಕ್ಷಿಗಳಿಗೆ ಹಾನಿಯಾಗಿದೆ. 

ಸೂಳೆಕೆರೆ ಗುಡ್ಡದ ವ್ಯಾಪ್ತಿಗೆ ಸೇರಿದ ಅರಿಶಿನಘಟ್ಟ, ಮಧುರನಾಯಕನಹಳ್ಳಿ, ಸೋಮಶೆಟ್ಟಿಹಳ್ಳಿ, ರುದ್ರಾಪುರ, ಹೊಸಹಳ್ಳಿ ವ್ಯಾಪ್ತಿಯ ಗುಡ್ಡಕ್ಕೆ ಹೊಂದಿಕೊಂಡಿರುವ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಶಾಂತಿಸಾಗರ ವಲಯ ಅರಣ್ಯ ವ್ಯಾಪ್ತಿಯ 15ರಿಂದ 20 ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬುಧವಾರ ಬೆಂಕಿ ನಂದಿಸಿದ್ದಾರೆ. ಸಿಬ್ಬಂದಿ ಹಗಲುರಾತ್ರಿಯೆನ್ನದೇ ಕಾರ್ಯಾಚರಣೆ ನಡೆಸಿದ್ದಾರೆ.

ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಿರುವವರು ಇನ್ನಷ್ಟು ಜಮೀನು ಕಬಳಿಸುವ ಹುನ್ನಾರದಿಂದ ಹೀಗೆ ಮಾಡಿದ್ದಾರೆ ಎಂಬ ಆರೋಪವಿದೆ. ದನ, ಕುರಿ ಮೇಯಿಸುವವರು ಬೀಡಿ ಎಸೆದಿರುವುದರಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿರಬಹುದು ಎಂಬುದಾಗಿಯೂ ಚರ್ಚೆಯಾಗುತ್ತಿದೆ.

ADVERTISEMENT

‘ಬೇಸಿಗೆ ಸಮಯದಲ್ಲಿ ಪ್ರತಿ ವರ್ಷ ಸೂಳೆಕೆರೆ ಗುಡ್ಡಕ್ಕೆ ಬೆಂಕಿ ಬೀಳುವುದು ಸಾಮಾನ್ಯವಾಗಿದೆ. ಕಾಡಿನಲ್ಲಿ ಹುಲ್ಲುಗಾವಲು ಹೆಚ್ಚಾಗಿದ್ದರಿಂದ ಬೆಂಕಿ ಬಿದ್ದ ತಕ್ಷಣವೇ ಎಲ್ಲ ಕಡೆ ವ್ಯಾಪಿಸಿದೆ. ಕಾಡಿನ ರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ ಅಗ್ನಿ ಅವಘಡ ಸಂಭವಿಸುತ್ತಿದೆ. ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕಾಡಿನ ರಕ್ಷಣೆಗೆ ಕೈ ಜೋಡಿಸಬೇಕು’ ಎಂದು ಶಾಂತಿಸಾಗರ ವಲಯ ಅರಣ್ಯಾಧಿಕಾರಿ ಉಷಾ ಮನವಿ ಮಾಡಿದ್ದಾರೆ.

‘ಕಳೆದ 8 ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಸೂಳೆಕೆರೆ ಗುಡ್ಡಕ್ಕೆ ಬೆಂಕಿ ಬೀಳುತ್ತಿದೆ. ಅರಣ್ಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಿರುವುದರಿಂದ ಈ ಘಟನೆ ಮರುಕಳಿಸುತ್ತಿದೆ. ಗುಡ್ಡಕ್ಕೆ ನಾಕಾಬಂದಿ ಹಾಕಬೇಕು’ ಎಂದು ಅರಿಶಿನಘಟ್ಟ ಗ್ರಾಮದ ವಾಸಿ ರಂಗನಾಥ್ ಒತ್ತಾಯಿಸಿದರು.

ಸೂಳೆಕೆರೆ ಗುಡ್ಡಕ್ಕೆ ಬಿದ್ದ ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.