ADVERTISEMENT

ಎಸ್.ಎಸ್.ಕೇರ್ ಟ್ರಸ್ಟ್‌ನಿಂದ ಉಚಿತ ಡಯಾಲಿಸಿಸ್ ಚಿಕಿತ್ಸೆ

₹ 10 ಕೋಟಿ ಠೇವಣಿಯ ಬಡ್ಡಿಯಲ್ಲಿ ಬರುವ ಹಣದಿಂದ ಬಡವರಿಗೆ ನೆರವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 4:13 IST
Last Updated 31 ಜನವರಿ 2021, 4:13 IST
ದಾವಣಗೆರೆಯ ಎಸ್.ಎಸ್.ಜನರಲ್ ಆಸ್ಪತ್ರೆಯಲ್ಲಿ ಆರಂಭವಾಗಿರುವ ಉಚಿತ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್‌.ಎಸ್.ಮಲ್ಲಿಕಾರ್ಜುನ ಶನಿವಾರ ಉದ್ಘಾಟಿಸಿದರು.
ದಾವಣಗೆರೆಯ ಎಸ್.ಎಸ್.ಜನರಲ್ ಆಸ್ಪತ್ರೆಯಲ್ಲಿ ಆರಂಭವಾಗಿರುವ ಉಚಿತ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್‌.ಎಸ್.ಮಲ್ಲಿಕಾರ್ಜುನ ಶನಿವಾರ ಉದ್ಘಾಟಿಸಿದರು.   

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರು ಆರೋಗ್ಯ ಕ್ಷೇತ್ರದಲ್ಲಿ ಉಚಿತ ಸೇವೆಗೆ ಮುಂದಾಗಿದ್ದು, ಎಸ್.ಎಸ್.ಕೇರ್ ಟ್ರಸ್ಟ್ ಅಡಿಯಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಿದರು.

ಕಿಡ್ನಿ ಸಮಸ್ಯೆ ಹೊಂದಿರುವ ಡಯಾಲಿಸಿಸ್ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ದಾವಣಗೆರೆ ಹಳೇ ಭಾಗದ ಕೆ.ಆರ್.ರಸ್ತೆಯಲ್ಲಿರುವ ಎಸ್.ಎಸ್.ಜನರಲ್ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಿದ್ದು, ಇದಕ್ಕಾಗಿ ಟ್ರಸ್ಟ್ ಸ್ಥಾಪಿಸಿ ₹ 10 ಕೋಟಿ ಠೇವಣಿ ಇರಿಸಿ ಅದರ ಬಡ್ಡಿಯಲ್ಲಿ ಬರುವ ಹಣದಿಂದ ಬಡವರಿಗೆ ನೆರವಾಗುವ ಈ ಮಹತ್ವಾಕಾಂಕ್ಷೆ ಯೋಜನೆಗೆ ಟ್ರಸ್ಟ್ ಸ್ಥಾಪಕ ಶಾಮನೂರು ಶಿವಶಂಕರಪ್ಪ ಅವರು ಶನಿವಾರ ಚಾಲನೆ ನೀಡಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ನಗರದಲ್ಲಿ ಡಯಾಲಿಸಿಸ್ ರೋಗಿಗಳು ಹೆಚ್ಚಿದ್ದು, ಹಲವರಿಗೆ ಡಯಾಲಿಸಿಸ್ ಮಾಡಿಸಲು ಹಣ ಇಲ್ಲ. ಇದನ್ನು ಮನಗಂಡು ಈ ಕೇಂದ್ರ ಸ್ಥಾಪಿಸಬೇಕೆಂಬ ಹಲವು ವರ್ಷಗಳ ಹಿಂದೆಯೇ ಮಹಾತ್ವಾಕಾಂಕ್ಷೆ ಇತ್ತು. ಆದರೆ ಅದು ಇದೀಗ ಕಾಲ ಕೂಡಿ ಬಂದಿದೆ’ ಎಂದರು.

ADVERTISEMENT

‘ಈ ಭಾಗದಲ್ಲೇ ಹೆಚ್ಚು ಡಯಾಲಿಸಿಸ್ ರೋಗಿಗಳು ಇರುವ ಕಾರಣ ಈ ಆಸ್ಪತ್ರೆಯಲ್ಲಿ ಆರಂಭಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ರೋಗಿಗಳು ಪಡೆಯಲಿ ಎಂದು ಆಶಿಸಿದ ಎಸ್ಸೆಸ್ ಅವರು ವೈದ್ಯರೂ ರೋಗಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿ ಚಿಕಿತ್ಸೆ ನೀಡಬೇಕು’ ಎಂದರು.

ಬಾಪೂಜಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ‘ಈ ಹಿಂದೆ ಸರ್ಕಾರದ ಯಶಸ್ವಿನಿ ಯೋಜನೆಯಡಿ ಡಯಾಲಿಸಿಸ್ ಚಿಕಿತ್ಸೆಗೆ ಮಾನ್ಯತೆ ನೀಡಲಾಗಿತ್ತು. ಆದರೆ ಯಶಸ್ವಿನಿ ಯೋಜನೆ ರದ್ದಾದ ನಂತರ ಆಯುಷ್ಮಾನ್ ಭಾರತ್ ಯೋಜನೆಯಡಿ ಕಿಡ್ನಿ ಸಮಸ್ಯೆ ಚಿಕಿತ್ಸೆಗೆ ಅವಕಾಶ ನೀಡದಿರುವುದರಿಂದ ಲಕ್ಷಾಂತರ ರೋಗಿಗಳಿಗೆ ತೊಂದರೆ ಆಗುವುದನ್ನು ಮನಗಂಡು ನಮ್ಮ ತಂದೆಯವರ ಆಶಯದಂತೆ ಉಚಿತ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದೆ’ ಎಂದರು.

ಬಾಪೂಜಿ ವಿದ್ಯಾಸಂಸ್ಥೆಯಡಿ ದಾವಣಗೆರೆಯ ಬಾಪೂಜಿ ಆಸ್ಪತ್ರೆ ಮತ್ತು ಎಸ್.ಎಸ್.ಆಸ್ಪತ್ರೆಗಳಲ್ಲಿ ತಲಾ 20 ಡಯಾಲಿಸಿಸ್ ಯಂತ್ರಗಳಿವೆ ಜೊತೆಗೆ ಈ ಭಾಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಆರಂಭಿಕ ಹಂತದಲ್ಲಿ 5 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗುವುದು ಎಂದರು.

ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕರಾದ ಎಸ್.ಎಸ್.ಜಯಣ್ಣ, ಅಥಣಿ ವೀರಣ್ಣ, ಸಂಪನ್ನ ಮುತಾಲಿಕ್, ಖಜಾಂಚಿ ಎ.ಎಸ್.ನಿರಂಜನ್, ಆಡಳಿತ ನಿರ್ದೇಶಕ ಎಂ.ಜಿ.ರಾಜಶೇಖರಪ್ಪ, ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ.ಈಶ್ವರಪ್ಪ, ಜೆಜೆಎಂಎಂಸಿ ಪ್ರಾಂಶುಪಾಲ ಡಾ. ಎಸ್.ಬಿ.ಮುರುಗೇಶ್, ಆಡಳಿತಾಧಿಕಾರಿ ಸತ್ಯನಾರಾಯಣ, ಬಾಪೂಜಿ ಆಸ್ಪತ್ರೆ ನಿರ್ದೇಶಕ ಡಾ.ಡಿ.ಎಸ್.ಕುಮಾರ್, ಎಸ್.ಎಸ್.ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಎನ್.ಕೆ.ಕಾಳಪ್ಪನವರ್, ಪ್ರಾಂಶುಪಾಲ ಡಾ. ಬಿ.ಎಸ್.ಪ್ರಸಾದ್, ಡಾ.ಸುಬ್ಬಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.