ADVERTISEMENT

ಕುಂದೂರಿನಲ್ಲಿ ಚಂದ್ರಶೇಖರ್ ಅಂತ್ಯಕ್ರಿಯೆ: ಬಿಎಸ್‌ವೈ, ಈಶ್ವರಪ್ಪ ಅಂತಿಮ ದರ್ಶನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 6:09 IST
Last Updated 5 ನವೆಂಬರ್ 2022, 6:09 IST
ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಹೊನ್ನಾಳಿಯಲ್ಲಿ ಚಂದ್ರಶೇಖರ್ ಅವರ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಂದ್ರಶೇಖರ್‌ ಅವರ ತಂದೆ ಎಂ.ಪಿ. ರಮೇಶ್ ಇದ್ದರು.
ಶಾಸಕ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಹೊನ್ನಾಳಿಯಲ್ಲಿ ಚಂದ್ರಶೇಖರ್ ಅವರ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಂದ್ರಶೇಖರ್‌ ಅವರ ತಂದೆ ಎಂ.ಪಿ. ರಮೇಶ್ ಇದ್ದರು.   

ಹೊನ್ನಾಳಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಕುಂದೂರು ಗ್ರಾಮದ ಅವರ ಹುಟ್ಟೂರಿನಲ್ಲಿ ಶುಕ್ರವಾರ ಸಂಜೆ ನಡೆಯಿತು.

ಅಂತಿಮ ದರ್ಶನಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಪೂರ್ವವಲಯದ ಎಡಿಜಿಪಿ, ದಾವಣಗೆರೆ ಜಿಲ್ಲಾಧಿಕಾರಿ, ಎಸ್‍ಪಿ, ಡಿವೈಎಸ್‍ಪಿ, ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹೊಟ್ಯಾಪುರದ ಗಿರಿಸಿದ್ದೇಶ್ವರ ಸ್ವಾಮೀಜಿ, ವಿವಿಧ ಅಧಿಕಾರಿಗಳು ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಎಂ.ಪಿ. ರೇಣುಕಾಚಾರ್ಯ, ಎಂ.ಪಿ. ರಮೇಶ್ ಹಾಗೂ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ‘ಚಂದ್ರಶೇಖರ್ ಅವರು ನಾಪತ್ತೆಯಾಗಿ 5 ದಿನಗಳಾದ ಮೇಲೆ ಅವರ ಮೃತದೇಹ ಸಿಕ್ಕಿದೆ. ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೂಡಲೇ ಈ ಪ್ರಕರಣವನ್ನು ಭೇದಿಸಿ ಸತ್ಯವನ್ನು ರಾಜ್ಯದ ಜನತೆಗೆ ತಿಳಿಸಬೇಕು’ ಎಂದು ಮುಖ್ಯಮಂತ್ರಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಸೂಚಿಸುತ್ತೇನೆ ಎಂದು ತಿಳಿಸಿದರು.

ADVERTISEMENT

ಅಂತ್ಯ ಸಂಸ್ಕಾರ: ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದ ಚಂದ್ರಶೇಖರ್ ಅವರ ಮೃತದೇಹವನ್ನು ಶುಕ್ರವಾದ ಮಧ್ಯಾಹ್ನದ ಬಳಿಕ ಕುಂದೂರು ಗ್ರಾಮಕ್ಕೆ ಕೊಂಡೊಯ್ಯಲು ಶವಯಾತ್ರೆ ನಡೆಯಿತು. ಕುಂದೂರಿನಲ್ಲಿರುವ ಅವರ ತೋಟದಲ್ಲಿ ಚಂದ್ರು ಅವರ ಅಜ್ಜ–ಅಜ್ಜಿಯ ಸಮಾಧಿಯ ಮಧ್ಯದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನಗಳ ಮೂಲಕ ಅಂತಿಮ ಸಂಸ್ಕಾರ ನಡೆಸಲಾಯಿತು.

ಶವಯಾತ್ರೆಯ ಉದ್ದಕ್ಕೂ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಂದ್ರಶೇಖರ್ ಅವರ ತಂದೆ ಎಂ.ಪಿ. ರಮೇಶ್ ಸೇರಿದಂತೆ ಅವರ ಕುಟುಂಬದ ಸದಸ್ಯರು, ಅವರ ಅಭಿಮಾನಿಗಳು, ಸಾರ್ವಜನಿಕರು ಸಾಗರೋಪಾದಿಯಲ್ಲಿ ಸಾಗಿ ಬಂದರು. ಚಂದ್ರಶೇಖರ್ ಅವರ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿತ್ತು.

ಕಾನೂನು ಕ್ರಮಕ್ಕೆ ಆಗ್ರಹ
ಹೊನ್ನಾಳಿ: ‘ಐದು ದಿನಗಳ ಹಿಂದೆ ಕಾಣೆಯಾಗಿದ್ದ ನನ್ನ ಮಗನನ್ನು ಯಾರೋ ದುಷ್ಕರ್ಮಿಗಳು ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮೃತ ಚಂದ್ರಶೇಖರ್ ಅವರ ತಂದೆ ಎಂ.ಪಿ. ರಮೇಶ್ ನ. 3 ರಂದು ತಡರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ನನ್ನ ಮಗನ ಮೃತದೇಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವನ ಕೈ–ಕಾಲುಗಳನ್ನು ಬಟ್ಟೆಯಿಂದ ಕಟ್ಟಿ ಹಾಕಿದ ಗುರುತುಗಳು, ಕಿವಿಗೆ ಹೊಡೆದಿರುವ ಗುರುತು, ನೆತ್ತಿ ಮೇಲೆ ಆಯುಧದಿಂದ ಹೊಡೆದ ಗುರುತುಗಳು ಕಂಡು ಬಂದಿರುತ್ತವೆ. ಯಾರೋ ದುಷ್ಕರ್ಮಿಗಳು ಮಗನನ್ನು ಕೊಲೆ ಮಾಡಿ ಅಪಘಾತವಾಗಿರುವ ರೀತಿಯಲ್ಲಿ ಬಿಂಬಿಸಿ ಕಾರನ್ನು ಜಖಂಗೊಳಿಸಿ ಮೃತದೇಹವನ್ನು ಕಾರಿನಲ್ಲಿ ಇರಿಸಿ, ಕಾರಿನ ಸಮೇತ ಚಾನಲ್‌ಗೆ ತಳ್ಳಿರುವುದು ಕಂಡು ಬಂದಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.