ADVERTISEMENT

ಸರ್ವೋದಯ ತತ್ವ, ಗ್ರಾಮ ಸ್ವರಾಜ್‌ ಮಾದರಿ

ಗಾಂಧಿ ಜಯಂತಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:55 IST
Last Updated 3 ಅಕ್ಟೋಬರ್ 2025, 5:55 IST
ದಾವಣಗೆರೆಯ ರಾಮನಗರದ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಚರಕದಿಂದ ನೂಲು ತೆಗೆದರು
ದಾವಣಗೆರೆಯ ರಾಮನಗರದ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅವರು ಚರಕದಿಂದ ನೂಲು ತೆಗೆದರು   

ದಾವಣಗೆರೆ: ಹಳ್ಳಿಗಳು ಬೆಳವಣಿಗೆ ಹೊಂದಿದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬುದು ಮಹಾತ್ಮ ಗಾಂಧೀಜಿ ಅವರ ಬಲವಾದ ನಂಬಿಕೆಯಾಗಿತ್ತು. ಗಾಂಧೀಜಿ ಅವರ ಸರ್ವೋದಯ ತತ್ವ ಹಾಗೂ ಗ್ರಾಮ ಸ್ವರಾಜ್‌ ಪರಿಕಲ್ಪನೆಯನ್ನು ಸರ್ಕಾರಗಳು ಅಳವಡಿಸಿಕೊಳ್ಳುತ್ತಿವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಭಿಪ್ರಾಯಪಟ್ಟರು.

ಇಲ್ಲಿನ ರಾಮನಗರದ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಾತ್ಮ ಗಾಂಧೀಜಿ ಅವರ ನಡೆ ಮತ್ತು ನುಡಿ ಒಂದೇ ಆಗಿತ್ತು. ಸರಳ ಜೀವನ ತತ್ವವನ್ನು ಮೈಗೂಡಿಸಿಕೊಂಡಿದ್ದರು. ರೈತರೇ ದೇಶದ ಬೆನ್ನೆಲುಬು ಎಂಬುದನ್ನು ಅರಿತಿದ್ದರು. ಹೀಗಾಗಿ, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಅವರು ಚಂಪಾರಣ್ಯ ಚಳುವಳಿಯಲ್ಲಿ ಪಾಲ್ಗೊಂಡರು. ರೈತರ ಮೇಲೆ ಬ್ರಿಟಿಷರು ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿರೋಧಿಸಿದರು’ ಎಂದು ಹೇಳಿದರು.

ADVERTISEMENT

‘ಸ್ವರಾಜ್ ನಮ್ಮ ಜನ್ಮ ಸಿದ್ದ ಹಕ್ಕು’ ಎಂಬುದನ್ನು ಮಹಾತ್ಮ ಗಾಂಧೀಜಿ ನಿರಂತರವಾಗಿ ಪ್ರತಿಪಾದಿಸಿದರು. ಉಪ್ಪಿನ ಸತ್ಯಾಗ್ರಹ ನಡೆಸಿ ದೊಡ್ಡ ಮಟ್ಟದ ಚಳವಳಿಯಾಗಿ ಮಾರ್ಪಡಿಸಿದರು. ಸಮಾಜದಲ್ಲಿ ಬದಲಾವಣೆ ನಿರೀಕ್ಷಿಸುವ ಪ್ರತಿಯೊಬ್ಬರು ಬದಲಾಗಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸ್ವಾತಂತ್ರ್ಯಾನಂತರ ದೇಶ ಎದುರಿಸುತ್ತಿದ್ದ ಆಹಾರದ ಕೊರತೆಯನ್ನು ಎದುರಿಸಲು ಲಾಲ್‌ ಬಹದ್ದೂರ್‌ ಶಾಸ್ತ್ರಿ ಕೃಷಿಗೆ ಒತ್ತು ನೀಡಿದರು. ಹಸಿರು ಕ್ರಾಂತಿಗೆ ಮುನ್ನುಡಿ ಬರೆದು ಕೃಷಿ ಕ್ಷೇತ್ರದ ಉತ್ಪಾದನೆಗೆ ಗಮನ ಹರಿಸಿದರು. ವೇತನದಲ್ಲಿ ಉಳಿತಾಯ ಮಾಡಿ ಬಡವರ ಸೇವೆಗೆ ಮುಡಿಪಾಗಿಡುತ್ತಿದ್ದರು. ಅತ್ಯಂತ ಸರಳವಾಗಿ ಬದುಕಿ ಮಾದರಿಯಾಗಿದ್ದಾರೆ’ ಎಂದು ಹೇಳಿದರು.

‘ವೈಷ್ಣವ ಜನತೋ’ ಮತ್ತು ‘ರಘುಪತಿ ರಾಘವ ರಾಜಾರಾಂ’ ಭಜನಾ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಸಂದೇಶಗಳನ್ನು ಮಂಡಿಸಲಾಯಿತು. ಮಹಾತ್ಮ ಗಾಂಧೀಜಿ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ) ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯ ಎ. ನಾಗರಾಜ್‌, ರವಿಕುಮಾರ್, ಅವರೆಗೆರೆ ರುದ್ರಮುನಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.