ADVERTISEMENT

ದಾವಣಗೆರೆ: ವಿಘ್ನನಿವಾರಕನ ಆರಾಧನೆಗೆ ಸಜ್ಜಾದ ಭಕ್ತರು

ಜಿಲ್ಲೆಯಲ್ಲಿ 2,329 ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 5:01 IST
Last Updated 27 ಆಗಸ್ಟ್ 2025, 5:01 IST
<div class="paragraphs"><p>ದಾವಣಗೆರೆಯ ಚಾಮರಾಜಪೇಟೆಯಲ್ಲಿ ಹಬ್ಬದ ಅಂಗವಾಗಿ ಭಕ್ತರು ಮಂಗಳವಾರ ಗಣೇಶ ಮೂರ್ತಿ ಖರೀದಿಸಿದರು </p></div>

ದಾವಣಗೆರೆಯ ಚಾಮರಾಜಪೇಟೆಯಲ್ಲಿ ಹಬ್ಬದ ಅಂಗವಾಗಿ ಭಕ್ತರು ಮಂಗಳವಾರ ಗಣೇಶ ಮೂರ್ತಿ ಖರೀದಿಸಿದರು

   

ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ದಾವಣಗೆರೆ: ಜಿಲ್ಲೆಯಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಸ್ವರ್ಣಗೌರಿಯನ್ನು ಮನೆತುಂಬಿಸಿಕೊಂಡ ಭಕ್ತರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಂಗಳವಾರ ಭರದ ಸಿದ್ಧತೆ ನಡೆಸಿದರು. ಮಂಟಪ ನಿರ್ಮಿಸಿ, ವಿದ್ಯುತ್‌ ದೀಪ, ವಸ್ತ್ರಗಳಿಂದ ಸಿಂಗರಿಸಿ ಗಣೇಶನನ್ನು ತರಲು ಸಜ್ಜಾದರು.

ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ವಾರದಿಂದ ನಡೆಯುತ್ತಿದ್ದ ಸಿದ್ಧತೆಗಳಿಗೆ ಮಂಗಳವಾರ ಅಂತಿಮ ರೂಪ ಸಿಕ್ಕಿತು. ಬೀದಿ–ಬೀದಿಗಳಲ್ಲಿ ಗಣೇಶ ಮಂಟಪಗಳು ನಿರ್ಮಾಣವಾಗಿದ್ದು, ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಸಾರ್ವತ್ರಿಕ ರೂಪ ಪಡೆದುಕೊಂಡಿರುವ ಗಣೇಶ ಚತುರ್ಥಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿಯನ್ನು ಕಡ್ಡಾಯಗೊಳಿಸಲಾಗಿದೆ. ಪೊಲೀಸ್‌, ಅಗ್ನಿಶಾಮಕ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ ಹಾಗೂ ‘ಬೆಸ್ಕಾಂ’ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ. ಇದಕ್ಕೆ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ರೂಪಿಸಲಾಗಿದೆ. ಜಿಲ್ಲೆಯಾದ್ಯಂತ 2,329 ಸಾರ್ವಜನಿಕ ಗಣೇಶಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿವೆ.

ಮಣ್ಣಿನ ಮೂರ್ತಿಗೆ ಒಲವು:

ತಿಂಗಳುಗಳ ಕಾಲ ಶ್ರಮಿಸಿ ಗಣೇಶಮೂರ್ತಿ ತಯಾರಿಸಿದ ಕಲಾವಿದರು ಬಣ್ಣದ ಲೇಪನ ಮಾಡಿ ಮಾರುಕಟ್ಟೆಗೆ ತಂದಿದ್ದರು. ಹಬ್ಬಕ್ಕೂ ಎರಡು ದಿನಗಳ ಮೊದಲೇ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದವು. ಪಿ.ಬಿ. ರಸ್ತೆ, ಪಿಸಾಳೆ ಕಾಂಪೌಂಡ್‌, ಕಾಯಿಪೇಟೆ, ಶಾವಿಗೇರ ಪೇಟೆ, ಭಾರತ್‌ ಕಾಲೊನಿ ಸೇರಿ ನಗರದ ಹಲವೆಡೆ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಪಶ್ಚಿಮ ಬಂಗಾಳದ ಕಲಾವಿದರ ಕೈಯಲ್ಲಿ ಅರಳಿರುವ ಹಾಗೂ ಮಹಾರಾಷ್ಟ್ರದಿಂದ ಬಂದಿರುವ ಮೂರ್ತಿಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇತ್ತು.

ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪನಿಗೆ ಗ್ರಾಹಕರು ಒಲವು ತೋರಿದ್ದರು. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವ ಉತ್ಸವ ಸಮಿತಿಗಳು ಮೊದಲೇ ಸೂಚನೆ ನೀಡಿ ಮೂರ್ತಿ ತಯಾರಿಸಿಕೊಂಡಿವೆ. ಇನ್ನೂ ಕೆಲ ಸಮಿತಿಯ ಪದಾಧಿಕಾರಿಗಳು ಮೂರ್ತಿ ತಯಾರಿಕರ ಬಳಿಗೆ ತೆರಳಿ ಆಯ್ಕೆ ಮಾಡಿಕೊಂಡಿದ್ದಾರೆ. ಮುಂಗಡ ಹಣ ಪಾವತಿಸಲಾಗಿದ್ದು, ಗಣಪತಿ ಬುಧವಾರ ಬೆಳಿಗ್ಗೆ ಮಂಟಪ ಸೇರಲಿದೆ.

ಗಾತ್ರ, ವಿನ್ಯಾಸ ಹಾಗೂ ಬಣ್ಣದ ಆಧಾರದ ಮೇರೆಗೆ ಗಣೇಶ ಮೂರ್ತಿಗಳಿಗೆ ಬೆಲೆ ನಿಗದಿಪಡಿಸಲಾಗಿತ್ತು. ಗಣೇಶ ಮೂರ್ತಿಗಳಿಗೆ ಅಂದಾಜು ₹ 500ರಿಂದ ₹ 1 ಲಕ್ಷದವರೆಗೆ ಬೆಲೆ ಇತ್ತು. ಮನೆಗಳಲ್ಲಿ ಪ್ರತಿಷ್ಠಾಪಿಸಲು ಚಿಕ್ಕ ಗಾತ್ರದ ಮೂರ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಕಂಡುಬಂದಿತು.

ತರಹೇವಾರಿ ಮಂಟಪ:

ನಗರದ ಹೈಸ್ಕೂಲ್‌ ಮೈದಾನದಲ್ಲಿ ಗಣಪತಿಗೆ ಬದರಿನಾಥ ದೇಗುಲದ ಮಾದರಿಯ ಮಂಟಪ ನಿರ್ಮಿಸಲಾಗಿದೆ. ಹಿಂದೂ ಮಹಾಗಣಪತಿ ಟ್ರಸ್ಟ್‌ ಪ್ರತಿಷ್ಠಾಪಿಸುವ ಈ ಗಣಪತಿಯ ಮಂಟಪ ನಿರ್ಮಾಣ ಕಾರ್ಯದಲ್ಲಿ ಪಶ್ಚಿಮ ಬಂಗಾಳದ 30ಕ್ಕೂ ಹೆಚ್ಚು ಕಲಾವಿದರು ತಲ್ಲೀನರಾಗಿದ್ದಾರೆ.

ಶತಮಾನದ ಇತಿಹಾಸ ಹೊಂದಿರುವ ದೊಡ್ಡಪೇಟೆಯ ವಿನಾಯಕ ದೇವಸ್ಥಾನ ಸೇವಾ ಟ್ರಸ್ಟ್‌ 3 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಕೂರಿಸುತ್ತಿದೆ. ಕಾಲ ಮೇಲೆ ಕಾಲು ಹಾಕಿ ಕುಳಿತ ಈ ಮೂರ್ತಿಯನ್ನು ಹಾವೇರಿ ಜಿಲ್ಲೆಯಿಂದ ತರಲಾಗುತ್ತಿದೆ. ಹಿಂದೂ ಯುವಶಕ್ತಿ ಸಂಘಟನೆ ವತಿಯಿಂದ ಎಂಸಿಸಿ ‘ಎ’ ಬ್ಲಾಕ್‌ನ ತೊಗಟವೀರ ಕಲ್ಯಾಣ ಮಂಟಪದಲ್ಲಿ 13 ಅಡಿ ಎತ್ತರದ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಗೋವಿನ ಕೊರಳಿಗೆ ಕಟ್ಟುವ ಗೆಜ್ಜೆಗಳನ್ನು ಬಳಸಿ ಮೂರ್ತಿ ನಿರ್ಮಿಸಿರುವುದು ವಿಶೇಷವಾಗಿದೆ. ಬಂಬೂಬಜಾರಿನ ಮೇದಾರ ಗಿರಿಜನ ಅಭ್ಯುದಯ ಸೇವಾ ಸಂಘ ಬಿದಿರಿನಿಂದ ನಿರ್ಮಿಸಿದ ಕಮಲದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಿದೆ.

ಗಣೇಶ ಮಂಟಪಗಳಿಗೆ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಧಾರ್ಮಿಕ ಭಾವನೆ ಕೆರಳಿಸುವ ಗೀತೆಗಳನ್ನು ಹಾಕದಂತೆ ತಾಕೀತು ಮಾಡಿದ್ದಾರೆ. ಕರ್ಕಶ ಧ್ವನಿವರ್ಧಕ ಬಳಸದಂತೆ, ಪ್ರಸಾದ ವಿತರಿಸಿದ ಬಳಿಕ ಸ್ವಚ್ಛತೆ ಕಾಪಾಡುವಂತೆ ತಿಳಿವಳಿಕೆ ನೀಡಲಾಗಿದೆ. ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ದಾವಣಗೆರೆಯ ಚಾಮರಾಜಪೇಟೆಯಲ್ಲಿ ಹಬ್ಬದ ಅಂಗವಾಗಿ ಭಕ್ತರು ಮಂಗಳವಾರ ಗಣೇಶ ಮೂರ್ತಿ ಖರೀದಿಸಿದರು

ದಾವಣಗೆರೆಯ ಚಾಮರಾಜಪೇಟೆಯಲ್ಲಿ ಮಂಗಳವಾರ ಭಕ್ತರೊಬ್ಬರು ಗಣೇಶ ಮೂರ್ತಿಯನ್ನು ಮನೆಗೆ ಕೊಂಡೊಯ್ದರು

ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಬೃಹತ್‌ ಗಾತ್ರದ ಗಣೇಶ ಮೂರ್ತಿಯನ್ನು ಪಿ.ಬಿ ರಸ್ತೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ತಂದ ದೃಶ್ಯ

ದಾವಣಗೆರೆ ಹೊರವಲಯದ ಬಾತಿ ಕೆರೆಯ ಸಮೀಪದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಮಹಾನಗರ ಪಾಲಿಕೆ ವತಿಯಿಂದ ಸಿದ್ಧಪಡಿಸಿದ ಕೊಳ

ವಿಸರ್ಜನೆಗೆ ಸ್ಥಳ ನಿಗದಿ:

ದಾವಣಗೆರೆ ನಗರದಲ್ಲಿ ಗಣೇಶಮೂರ್ತಿಗಳ ವಿಸರ್ಜನೆಗೆ ಮಹಾನಗರ ಪಾಲಿಕ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಆ.27 29 ಹಾಗೂ ಆ.31ರಂದು ಪಾಲಿಕೆ ನಿಗದಿಪಡಿಸಿದ ಸ್ಥಳಗಳಲ್ಲಿನ ಸಂಚಾರಿ ವಾಹನಗಳಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ಮಾಡಬಹುದಾಗಿದೆ. ಹಗೆದಿಬ್ಬ ವೃತ್ತ ಕುರುಬರ ಕೇರಿ ಹೊಂಡದ ವೃತ್ತ ಕೊಂಡಜ್ಜಿ ರಸ್ತೆ ದೇವರಾಜ ಅರಸು ಬಡಾವಣೆ ಶಿವಾಜಿ ವೃತ್ತ ವೆಂಕಟೇಶ್ವರ ವೃತ್ತ ಮಹಾರಾಜ ಪೇಟೆ ಹಾಸಬಾವಿ ವೃತ್ತ ವಿನೋಬ ನಗರ ಉದ್ಯಾನ ರಾಮ್ ಅಂಡ್ ಕೋ ವೃತ್ತ ಬಸವೇಶ್ವರ ವೃತ್ತ ಬಂಬೂ ಬಜಾರ್ ಎಸ್.ಎಸ್. ಬಡಾವಣೆಯ ಬನ್ನಿಮರ ಬಕ್ಕೇಶ್ವರ ಶಾಲೆ ಜಯದೇವ ವೃತ್ತ ಡಿಸಿಎಂ ಬಡಾವಣೆ ಸರಸ್ವತಿ ಬಡಾವಣೆ ಸಂಜೀವಿನಿ ಆಂಜನೇಯ ದೇವಸ್ಥಾನ ನಿಟುವಳ್ಳಿ ಎಚ್.ಕೆ.ಆರ್. ವೃತ್ತ ಡಾಂಗೆ ಉದ್ಯಾನದ ಬಳಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಾಪೂಜಿ ಶಾಲೆ ಗುಂಡಿ ಮಹಾದೇವಪ್ಪ ವೃತ್ತ ವಿದ್ಯಾನಗರದ ಈಶ್ವರ ಪಾರ್ವತಿ ದೇವಸ್ಥಾನ ಆಂಜನೇಯ ಬಡಾವಣೆ ಬಾಪೂಜಿ ಬ್ಯಾಂಕ್ ಶಾಮನೂರು ಬಡಾವಣೆಯ ಶ್ರೀರಾಮ ಮಂದಿರ ಕೊಂಡಜ್ಜಿ ರಸ್ತೆಯ ಆರ್‌ಟಿಒ ಕಚೇರಿ ಬಳಿ ಸಂಚಾರಿ ವಾಹನಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದಾಗಿದೆ.

18400 ಸಿ.ಸಿ.ಟಿವಿ ಕ್ಯಾಮೆರಾ:

ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳಲ್ಲಿ ಪೊಲೀಸ್ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ. ಅಪರಾಧ ಕೃತ್ಯಗಳನ್ನು ತಡೆಗಟ್ಟಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ 18400 ಸಿ.ಸಿ.ಟಿವಿ ಕ್ಯಾಮೆರಾ ಹಾಗೂ ಡ್ರೋಣ್‌ ಕ್ಯಾಮೆರಾದ ನಿಗಾ ಇಡಲಾಗುತ್ತಿದೆ. ಜಿಲ್ಲೆಯ ಪ್ರಮುಖ 35 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಜಿಲ್ಲೆಯನ್ನು ಪ್ರವೇಶಿಸುವ ಹಾಗೂ ಹೊರ ಹೋಗುವ ವ್ಯಕ್ತಿ ಹಾಗೂ ವಾಹನಗಳ ಮೇಲೆ ನಿಗಾವಹಿಸಲಾಗುತ್ತಿದೆ. ಸಾಮಾಜಿಕ ಸ್ವಾಸ್ಥ್ಯ ಕದಡುವ ಸಾಧ್ಯತೆ ಇರುವ 25 ಮತೀಯ ಗೂಂಡಾ ಹಾಗೂ ರೌಡಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.

ಡಿ.ಜೆ: ಒತ್ತಡಕ್ಕೆ ಮಣಿಯದ ಡಿಸಿ:

ಆ.27ರಿಂದ ಸೆ.16ರವರೆಗೆ ಜಿಲ್ಲೆಯಲ್ಲಿ ಡಿ.ಜೆ. ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಡಿ.ಜೆ.ಗೆ ಅನುಮತಿ ನೀಡಬೇಕು ಎಂಬ ಒತ್ತಡಕ್ಕೆ ಜಿಲ್ಲಾಡಳಿತ ಮಣಿದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಗಣೇಶೋತ್ಸವ ಹಾಗೂ ಈದ್‌ ಮಿಲಾದ್‌ ಹಬ್ಬಗಳಲ್ಲಿ ಡಿ.ಜೆ. ನಿಷೇಧಿಸುವಂತೆ ಕೋರಿ ಪೊಲೀಸ್‌ ಇಲಾಖೆ ಸಲ್ಲಿಸಿದ್ದ ಪ್ರಸ್ತಾವ ಪರಿಗಣಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶ ಹೊರಡಿಸಿದ್ದರು. ಡಿ.ಜೆ.ಗೆ ಅನುಮತಿ ನೀಡುವಂತೆ ಕೋರಿ ಶಾಮಿಯಾನ ಡೆಕೊರೇಷನ್‌ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಿಜೆಪಿ ಮುಖಂಡರ ನಿಯೋಗ ಒತ್ತಡ ಹೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.