ADVERTISEMENT

ಕೋವಿಡ್ ತೊಲಗಿ, ರೈತರ ಕಷ್ಟ ನಿವಾರಣೆಯಾಗಲಿ

ಮೈಸೂರು ಪೇಟ ತೊಟ್ಟು ಅಂಬು ಛೇದನ ಮಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:15 IST
Last Updated 27 ಅಕ್ಟೋಬರ್ 2020, 4:15 IST
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಂಬು ಛೇದನ ಮಾಡಿದರು. ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮೇಯರ್ ಬಿ.ಜಿ. ಅಜಯ್‌ಕುಮಾರ್ ಇದ್ದರು (ಎಡಚಿತ್ರ) ದಾವಲ್‍ಪೇಟೆಯಲ್ಲಿರುವ ತೊಗಟವೀರ ಸಮಾಜದ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಗೆ ನೋಟಿನ ಅಲಂಕಾರ ಮಾಡಲಾಗಿತ್ತು. –ಪ್ರಜಾವಾಣಿ ಚಿತ್ರ
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಂಬು ಛೇದನ ಮಾಡಿದರು. ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮೇಯರ್ ಬಿ.ಜಿ. ಅಜಯ್‌ಕುಮಾರ್ ಇದ್ದರು (ಎಡಚಿತ್ರ) ದಾವಲ್‍ಪೇಟೆಯಲ್ಲಿರುವ ತೊಗಟವೀರ ಸಮಾಜದ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಗೆ ನೋಟಿನ ಅಲಂಕಾರ ಮಾಡಲಾಗಿತ್ತು. –ಪ್ರಜಾವಾಣಿ ಚಿತ್ರ   

ದಾವಣಗೆರೆ:ವಿಜಯದಶಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯನಗರ ಉತ್ಸವ ಸಮಿತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಂಬು ಛೇದನ ಮಾಡಿದರು.

ನಗರದ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಮೈಸೂರು ಪೇಟ ತೊಟ್ಟು ಅಂಬು ಛೇದನ ಮಾಡಿ ದೇಶದ ಎಲ್ಲಾ ಸಮುದಾಯದ ಜನರಿಗೂ ಒಳಿತನ್ನು ಬಯಸಿದರು.

‘ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯ‌ಲ್ಲಿ ಜಿಲ್ಲೆ ನಡೆಯುತ್ತಿದೆ. ಒಂದು ಕಡೆ ಕೋವಿಡ್ ಮತ್ತೊಂದು ಕಡೆ ಚುನಾವಣಾ ನೀತಿ ಸಂಹಿತೆ ಇದೆ. ನಾನು ಎರಡನೇ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಇದೊಂದು ರಾಜಕೀಯೇತರ ಕಾರ್ಯಕ್ರಮವಾಗಿದ್ದು, ಯಾವುದೇ ಧಾರ್ಮಿಕ ರಾಜಕೀಯ ಭಿನ್ನಾಭಿಪ್ರಾಯವಿಲ್ಲ’ ಎಂದರು.

ADVERTISEMENT

ಆವರಗೊಳ್ಳ ಪುರವರ್ಗದ ಓಂಕಾರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಕೋವಿಡ್ ನಿರ್ಮೂಲನೆಗಾಗಿ, ನಡೆ– ನುಡಿ, ಆಚಾರ–ವಿಚಾರ ಸಂಪನ್ನಗೊಳ್ಳಲು ಹಾಗೂಆಂತರ್ಯದಲ್ಲಿನ ಇರುವ ಅರಿಷಡ್ವರ್ಗಗಳನ್ನು, ದ್ವೇಷ, ಅಸೂಯೆಗಳನ್ನು ಸುಟ್ಟು ಹಾಕಲು ಪ್ರತಿ ಮನೆ, ಮಠಗಳಲ್ಲಿ ದುರ್ಗೆಯನ್ನು ಪ್ರಾರ್ಥಿಸೋಣ.ದಿನಕ್ಕೆ ಒಂದು ಗಂಟೆ ರಾಷ್ಟ್ರಪ್ರೇಮದ ಬಗ್ಗೆ ಚಿಂತನೆ ಮಾಡುವ ಜೊತೆಗೆ ಮುಂದಿನ ಪೀಳಿಗಾಗಿ ದೇಶದ ಅಂತಸತ್ವ ಉಳಿಸಲು ಸಂಕಲ್ಪ ಮಾಡೋಣ’ ಎಂದರು.

‘ನಾಲ್ಕು ವರ್ಷಗಳಿಂದ ರೈತ ಅತಿವೃಷ್ಟಿಗೆ ಒಳಗಾಗಿ ನಷ್ಟ ಅನುಭವಿಸಿದ್ದು, ದೇಶಕ್ಕೆ ಅನ್ನನೀಡುವ ರೈತನಿಗೆ ಇಂದು ಅನ್ನವಿಲ್ಲದಂತಾಗಿದೆ. ಹಗಲು ರಾತ್ರಿ ಎನ್ನದೇ ದೇಶವನ್ನು ರಕ್ಷಿಸುವ ಸೈನಿಕರು ಹಾಗೂ ರೈತರಿಗೆ ಆ ದೇವಿ ಶಕ್ತಿ ತುಂಬಲಿ ಎಂದು ಪ್ರಾರ್ಥಿಸೋಣ’ ಎಂದು ಹೇಳಿದರು.

‘ಪೌರಾಣಿಕ ಕಾಲದಲ್ಲಿ ರಾಕ್ಷಸರು ದೇವತೆಗಳಿಗೆ ಹಿಂಸೆ ಕೊಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಭಯೋತ್ಪಾದನೆ, ಮತಾಂತರಗಳು ಹಿಂದೂ ಧರ್ಮದ ಮೇಲೆ ಪರಿಣಾಮ ಬೀರುತ್ತಿದ್ದು, ಅವುಗಳನ್ನು ದೂರ ಮಾಡಿ ದೇಶದ ಬಗ್ಗೆ ಚಿಂತನೆ ಮಾಡೋಣ’ ಎಂದು ಹೇಳಿದರು.

ಆರ್‌ಎಸ್ಎಸ್‌ ಶಿವಮೊಗ್ಗ ವಿಭಾಗದ ಸಹವಿಭಾಗದ ಪ್ರಚಾರಕ ನವೀನ ಸುಬ್ರಹ್ಮಣ್ಯ ಮಾತನಾಡಿ, ‘ಈ ಬಾರಿ ಕೋವಿಡ್‌ನಿಂದ ಶೋಭಾಯಾತ್ರೆ ನಡೆಯದೇ ಇರಬಹುದು. ಆದರೆ ವಿಜಯೋತ್ಸಾಹ ಕಡಿಮೆಯಾಗಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾ‍ಪನೆ ನೆರವೇರಿದ್ದು, ಸಮಸ್ತ ಹಿಂದೂಗಳಿಗೆ ಸಂತೋಷ ತಂದಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮೇಯರ್ ಬಿ.ಜಿ. ಅಜಯ್‌ಕುಮಾರ್ ಇದ್ದರು. ಸಾರ್ವಜನಿಕ ವಿಜಯದಶಮಿ ಉತ್ಸವ ಸಮಿತಿ ಅಧ್ಯಕ್ಷ ಸಿ.ಎಸ್. ರಾಜು ಪ್ರಾರ್ಥಿಸಿದರು. ಅರುಣ್ ವಂದಿಸಿದರು.

ಸರಳ ದಸರಾ

ದಾವಣಗೆರೆ: ನವರಾತ್ರಿ ಉತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಆಯುಧ ಪೂಜೆ ಹಾಗೂ ಭಾನುವಾರ ವಿಜಯದಶಮಿ ಹಬ್ಬವನ್ನು ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಲಾಯಿತು.

ನಗರದ ಬಹುತೇಕ ಕಚೇರಿ, ಮಳಿಗೆ ಹಾಗೂ ಅಂಗಡಿಗಳನ್ನು ಬಾಳೆ ದಿಂಡು, ಹೂವಿನ ಅಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಜೊತೆಗೆ ವಾಹನಗಳಿಗೂ ಪೂಜೆ ನೆರವೇರಿಸಲಾಯಿತು.

ನಗರದ ವಿವಿಧ ದೇವಾಲಯಗಳಲ್ಲಿ ಬನ್ನಿಪೂಜೆ ನಡೆಯಿತು. ವಿನೋಬನಗರ, ಎಸ್.ಎಸ್. ಬಡಾವಣೆ, ನಿಟುವಳ್ಳಿ, ಪಿ.ಜೆ.ಬಡಾವಣೆ, ಎಂಸಿಸಿ ‘ಬಿ’ ಬ್ಲಾಕ್, ವಿದ್ಯಾನಗರ, ಆಂಜನೇಯ ನಗರ, ವಿವೇಕಾನಂದ ಬಡಾವಣೆ, ಜಯ ನಗರ, ಸರಸ್ವತಿ ನಗರ, ಕೆಟಿಜೆ ನಗರ, ಭಗತ್‌ಸಿಂಗ್ ನಗರ ಸೇರಿ ಹಲವು ಕಡೆ ಮಹಿಳೆಯರು, ಯುವತಿಯರು ಬನ್ನಿ ಮರಕ್ಕೆಪೂಜೆ ಸಲ್ಲಿಸಿ ಉಡಿ ತುಂಬಿಸಿದರು. ನಗರದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ಆಯುಧಪೂಜೆ ಪ್ರಯುಕ್ತದೇವಿಗೆ ಮೋಹಿನಿ ಅಲಂಕಾರ ಮಾಡಲಾಗಿತ್ತು. ಪ್ರತಿ ವರ್ಷ 101 ಮಹಿಳೆಯರು ಕುಂಭಾಭಿಷೇಕದಲ್ಲಿ ಪಾಲ್ಗೊಳ್ಳುತ್ತಿದ್ದರು. ಕೊರೊನಾ ಕಾರಣದಿಂದ ಈ ಬಾರಿ 9 ಕುಂಭಗಳಿಗೆ ಸೀಮಿತಗೊಳಿಸಲಾಗಿತ್ತು. ದೇವಸ್ಥಾನದ ಸುತ್ತ ಮೂರು ಸುತ್ತು ಹಾಕಿ ಕಾರ್ಯಕ್ರಮ ನೆರವೇರಿಸಲಾಯಿತು.

ವಿಜಯದಶಮಿ ಅಂಗವಾಗಿ ಭಾನುವಾರ ದುರ್ಗಾಂಬಿಕಾ ದೇವಿಗೆದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.ತಂಡೋಪ ತಂಡವಾಗಿ ಬಂದ ಮಹಿಳೆಯರು ನಿವೇದನೆ ಮಾಡಿಕೊಂಡರು. ದವಸ ಧಾನ್ಯಗಳನ್ನು ಅಮ್ಮನ ಸನ್ನಿಧಿಗೆ ಅರ್ಪಿಸಿದರು. ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.

ಕಾಳಿಕಾದೇವಿ ದೇಗುಲ, ಪಾತಾಳಲಿಂಗೇಶ್ವರ ದೇವಸ್ಥಾನದ ಬನ್ನಿ ವೃಕ್ಷದ ಸುತ್ತ ಮಹಿಳೆಯರು ಪೂಜೆ ಸಲ್ಲಿಸಿದರು. ಭಗತ್‌ಸಿಂಗ್ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನದ ಅಮ್ಮನವರನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಸಾಂಕೇತಿಕ ಮೆರವಣಿಗೆ ನಡೆಸಲಾಯಿತು.

ಶಂಕರ ಮಠ: ಜಯದೇವ ವೃತ್ತದಲ್ಲಿ ಇರುವ ಕೂಡಲಿ ಶೃಂಗೇರಿ ಶಂಕರ ಮಠದಲ್ಲಿ ವಿಜಯದಶಮಿ ನಿಮಿತ್ತ ದುರ್ಗಾ ದೀಪ ನಮಸ್ಕಾರ ನೆರವೇರಿಸಲಾಯಿತು. ಪಾಡ್ಯದಿಂದ ದಶಮಿಯವರೆಗೆ ಪ್ರತಿ ‌ದಿನ‌ಚಂಡಿಕಾ ಹೋಮ ನೆರವೇರಿತು. ದುರ್ಗಾದೀಪ ನಮಸ್ಕಾರ. ಸುಮಂಗಲಿ, ಕನ್ನಿಕಾ ಪೂಜೆ ಸೇವೆಯನ್ನು ಪುರೋಹಿತ ಪವನ್ ಕುಮಾರ್ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.