ಬಂಧನ
(ಪ್ರಾತಿನಿಧಿಕ ಚಿತ್ರ)
ದಾವಣಗೆರೆ: ಅನುಮತಿ ಇಲ್ಲದೆ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪದ ಮೇರೆಗೆ ರಾಜ್ಯದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 26 ಜನರನ್ನು ಆಫ್ರಿಕಾದ ಘಾನಾದಲ್ಲಿ ಬಂಧಿಸಲಾಗಿದೆ.
ಬಂಧಿತರಲ್ಲಿ 12 ಜನ ಮಹಿಳೆಯರು ಮತ್ತು 14 ಜನ ಪುರುಷರಿದ್ದಾರೆ. ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಇವರು ಬಿಸಿನೆಸ್ ವೀಸಾದ ಮೇಲೆ ಆಫ್ರಿಕಾದ ಪುಟ್ಟ ರಾಷ್ಟ್ರ ಘಾನಾದ ಟುಮು ನಗರಕ್ಕೆ ತೆರಳಿದ್ದರು.
‘ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಸೇರಿದ 26 ಜನರಲ್ಲಿ 24 ಜನರು ಆರು ತಿಂಗಳ ಹಿಂದೆ ಹಾಗೂ ಇಬ್ಬರು ಎರಡು ತಿಂಗಳ ಹಿಂದೆ ಘಾನಾಗೆ ತೆರಳಿದ್ದರು. ಇವರನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದೆ ಎಂಬುದಾಗಿ ಘಾನಾದಲ್ಲಿರುವ ಸಮುದಾಯದ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಕುರಿತು ಘಾನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ’ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಆರ್. ಪುನೀತ್ ಕುಮಾರ್ ತಿಳಿಸಿದ್ದಾರೆ.
‘ಘಾನಾ ಸರ್ಕಾರದ ಅನುಮತಿ ಪಡೆಯದೇ ಗಿಡಮೂಲಿಕೆಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಮೊದಲು ನಾಲ್ವರನ್ನು ಬಂಧಿಸಿದ್ದರು. ಬಳಿಕ ವಾಸಸ್ಥಳವನ್ನು ಪತ್ತೆ ಮಾಡಿ ಉಳಿದವರನ್ನು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಸಮುದಾಯದ ಜನರು ಪ್ರತಿ ವರ್ಷ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಆಫ್ರಿಕಾದ ವಿವಿಧ ದೇಶಗಳಿಗೆ ತೆರಳುತ್ತಾರೆ. ಈ ಉತ್ಪನ್ನಗಳು ನೈಸರ್ಗಿಕವಾಗಿರುವುದರಿಂದ ಆಫ್ರಿಕನ್ ದೇಶಗಳಲ್ಲಿ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಘಾನಾದಲ್ಲಿ ನಿಯಮಗಳು ಭಿನ್ನವಾಗಿವೆ. ಈ ಬಗ್ಗೆ ಅರಿವಿರದೇ ತೊಂದರೆ ಆಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಕ್ಷಣ ಮಧ್ಯಪ್ರವೇಶಿಸಿ ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸ್ವದೇಶಕ್ಕೆ ಕರೆತರಲು ಸಹಾಯ ನೀಡಬೇಕು’ ಎಂದು ಮನವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.