ADVERTISEMENT

ನಿಮ್ಮ ಸಾಧನೆಯ ಪಟ್ಟಿ ಕೊಡಿ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 17:24 IST
Last Updated 14 ಅಕ್ಟೋಬರ್ 2020, 17:24 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ದಾವಣಗೆರೆ: ಕಾಂಗ್ರೆಸ್‌ ಮಾಡಿದ ಕೆಲಸದ ಕೂಲಿಯನ್ನು ಕೇಳುತ್ತಿದೆ. ಆಗ್ನೇಯ ಪದವೀಧರ ಕ್ಷೇತ್ರದ ಮತದಾರರು ಮತ ನೀಡುವ ಮೂಲಕ ಕೂಲಿ ನೀಡಬೇಕು. ಹಾಗೆಯೇ ಹಿಂದೆ ಈ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾದವರು ಮಾಡಿದ ಸಾಧನೆಯ ಪಟ್ಟಿ ಕೊಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜಾತ್ಯತೀತ ಮನಸ್ಸಿನ, ಬುದ್ಧಿವಂತರಾಗಿರುವ ರಮೇಶಬಾಬು ಅವರನ್ನು ಈ ಬಾರಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ’ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನವನ್ನು ಶೇ 30ರಷ್ಟು ಏರಿಸಿದ್ದರು. ಬಿಜೆಪಿ, ಜೆಡಿಎಸ್‌ ಸುಳ್ಳುಗಳನ್ನೇ ಹೇಳಿಕೊಂಡು ತಿರುಗಾಡುತ್ತಿವೆ. ಅವರ ಸುಳ್ಳುಗಳಿಗೆ ಮಾರುಹೋಗದೇ, ಯಾವುದೇ ಆಮಿಷ, ಜಾತಿ ಪ್ರಭಾವಕ್ಕೆ ಒಳಗಾಗದೇ ಮತ ಚಲಾಯಿಸಿ ಎಂದು ತಿಳಿಸಿದರು.

ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಶಿಕ್ಷಕರು ಮತ್ತು ಪದವೀಧರರಿಗೆ ಸಂಬಂಧಿಸಿದಂತೆ 15 ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

6 ವರ್ಷದ ಹಿಂದೆ ಈ ಕ್ಷೇತ್ರದಿಂದ ಗೆದ್ದು ಹೋದವರು ಈ ಜಿಲ್ಲೆಗೆ ಎಷ್ಟು ಬಾರಿ ಬಂದಿದ್ದಾರೆ. ಏನು ಕೊಡುಗೆ ನೀಡಿದ್ದಾರೆ ಎಂದು ಹಿಂದಿನ ಬಾರಿಯ ಪರಾಜಿತ ಅಭ್ಯರ್ಥಿ ರಾಮಪ್ಪ ಪ್ರಶ್ನಿಸಿದರು.

ರಿಯಲ್‌ ಎಸ್ಟೇಟ್ ವ್ಯವಹಾರದವರು, ಲಿಕ್ಕರ್‌ ಮಾರಾಟಗಾರರು, ಗಣಿಗಾರಿಕೆಯವರು ಮೇಲ್ಮನೆಗೆ ಬಂದರೆ ಅದು ಚಿಂತಕರ ಚಾವಡಿಯಾಗಿ ಉಳಿಯದು. ಚಿಂತಕರ ಚಾವಡಿಯಾಗಿ ಉಳಿಯಲು ರಮೇಶ್‌ಬಾಬು ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್‌ನಲ್ಲಿ ಬಂಡಾಯವಿಲ್ಲ. ಎಲ್ಲರೂ ಒಮ್ಮತದಿಂದ ರಮೇಶ್‌ ಬಾಬು ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಬಿಜೆಪಿಯಿಂದ ಇಬ್ಬರು ಬಂಡಾಯವಾಗಿ ನಿಂತಿದ್ದಾರೆ. ಜೆಡಿಎಸ್‌ನಲ್ಲಿ ದಾವಣಗೆರೆಯಲ್ಲೇ ಗೊಂದಲ ಇರುವುದು ವರ ಅಭ್ಯರ್ಥಿ ಬಂದಾಗ ಬಹಿರಂಗಗೊಂಡಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌ ತಿಳಿಸಿದರು.

ಕಾಂಗ್ರೆಸ್‌ ನಾಯಕರಾದ ಎಂ.ಟಿ. ಸುಭಾಶ್ಚಂದ್ರ, ಸೈಯದ್‌ ಸೈಫುಲ್ಲಾ, ಕೆ.ಎಚ್‌. ಓಬಳಪ್ಪ, ನಂಜ್ಯಾನಾಯ್ಕ್‌, ಫುಟ್‌ಬಾಲ್‌ ಗಿರೀಶ್‌, ಕೆ. ಚಮನ್‌ಸಾಬ್‌, ಕೆ.ಎಂ. ಮಂಜುನಾಥ್‌, ನಾಗರಾಜ್‌, ಪ್ರವೀಣ್ ಅವರೂ ಇದ್ದರು.

ನನ್ನ ಮೇಲೆ ಎಫ್‌ಐಆರ್‌: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡದಂತೆ 15 ಮಾಧ್ಯಮಗಳು ಮತ್ತು ನನ್ನ ಮೇಲೆ ಇಂಜೆಕ್ಷನ್‌ ತಂದಿದ್ದಾರೆ. ಅದನ್ನು ತೆರವುಗೊಳಿಸಲು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ನನ್ನ ಮೇಲೆ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಮೂರು ಎಫ್‌ಐಆರ್‌ ದಾಖಲಿಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಎಂ. ಲಕ್ಷ್ಮಣ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.