ADVERTISEMENT

5 ವರ್ಷಗಳಾದರೂ ಉಗ್ರಾಣಕ್ಕಿಲ್ಲ ಉದ್ಘಾಟನೆ ಭಾಗ್ಯ

ರಾಜ್ಯ ಉಗ್ರಾಣ ನಿಗಮದಿಂದ ಹೊಸಳ್ಳಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 5:40 IST
Last Updated 18 ಸೆಪ್ಟೆಂಬರ್ 2020, 5:40 IST
ಬಸವಾಪಟ್ಟಣ ಸಮೀಪದ ಹೊಸಳ್ಳಿಯಲ್ಲಿ ರಾಜ್ಯ ಉಗ್ರಾಣ ನಿಗಮ ನಿರ್ಮಿಸಿರುವ ಉಗ್ರಾಣ
ಬಸವಾಪಟ್ಟಣ ಸಮೀಪದ ಹೊಸಳ್ಳಿಯಲ್ಲಿ ರಾಜ್ಯ ಉಗ್ರಾಣ ನಿಗಮ ನಿರ್ಮಿಸಿರುವ ಉಗ್ರಾಣ   

ಬಸವಾಪಟ್ಟಣ: ಸಮೀಪದ ಹೊಸಳ್ಳಿಯಲ್ಲಿ ಐದು ವರ್ಷಗಳ ಹಿಂದೆ ರಾಜ್ಯ ಉಗ್ರಾಣ ನಿಗಮದಿಂದ ನಿರ್ಮಾಣವಾಗಿರುವ 13 ಸಾವಿರ ಟನ್‌ ಸಾಮರ್ಥ್ಯದ ಎರಡು ಉಗ್ರಾಣಗಳಿಗೆ ಈವರೆಗೂ ಉದ್ಘಾಟನೆಯ ಭಾಗ್ಯ ಬಂದಿಲ್ಲ.

ಚನ್ನಗಿರಿ ತಾಲ್ಲೂಕಿನ ರೈತರ ಕೃಷಿ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಹಾಗೂ ಖರೀದಿ ಕೇಂದ್ರಗಳಿಗಾಗಿ ರಾಜ್ಯ ಉಗ್ರಾಣ ನಿಗಮವು ₹2 ಕೋಟಿ ವೆಚ್ಚದಲ್ಲಿ ಈ ಉಗ್ರಾಣಗಳನ್ನು ನಿರ್ಮಿಸಿದೆ. ಕೃಷಿ ಇಲಾಖೆಗೆ ಸೇರಿದ ವಿಶಾಲವಾದ ನಿವೇಶನದಲ್ಲಿ ಆಧುನಿಕ ತಂತ್ರಜ್ಞಾನದಿಂದ ಈ ಉಗ್ರಾಣಗಳನ್ನು ನಿರ್ಮಿಸಲಾಗಿದೆ.

‘ಭತ್ತ, ರಾಗಿ, ಜೋಳ, ಮೆಕ್ಕೆಜೋಳ ಮುಂತಾದ ಕೃಷಿ ಉತ್ಪನ್ನಗಳನ್ನು ರೈತರು ಬಾಡಿಗೆ ಆಧಾರದಲ್ಲಿ ಇಲ್ಲಿ ದಾಸ್ತಾನು ಮಾಡಲು ಅವಕಾಶವಿದೆ. ಆದರೆ ಈ ಉಗ್ರಾಣಗಳ ಉದ್ಘಾಟನೆಗೆ ಕೆಲವು ತಾತ್ರಿಕ ದೋಷಗಳಿದ್ದು, ಶೀಘ್ರ ಉದ್ಘಾಟಿಸಲಾಗುವುದು’ ಎಂದು ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ‌ನಟರಾಜ ಜವಳಿ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ರೈತರ ಅನುಕೂಲಕ್ಕಾಗಿ ಹೊಸಳ್ಳಿಯಲ್ಲಿ ಮತ್ತೆ ಎರಡು ಉಗ್ರಾಣಗಳನ್ನು ನಿರ್ಮಿಸಿ ಐದು ವರ್ಷಗಳೇ ಕಳೆದಿದ್ದರೂ ಹಿರಿಯ ಅಧಿಕಾರಿಗಳಾಗಲೀ ಸಚಿವರಾಗಲೀ ಉದ್ಘಾಟನೆ ಮಾಡುತ್ತಿಲ್ಲ. ಸೆಪ್ಟೆಂಬರ್ 30ರೊಳಗೆ ಉಗ್ರಾಣಗಳನ್ನು ಆರಂಭ ಮಾಡಬೇಕು. ಇಲ್ಲದಿದ್ದಲ್ಲಿ ಅಕ್ಟೋಬರ್‌ 1ರಂದು ರೈತ ಸಂಘದ ಮೂಲಕ ನಾವೇ ಉದ್ಘಾಟಿಸುತ್ತೇವೆ‘ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಎಚ್ಚರಿಕೆ ನೀಡಿದ್ದಾರೆ.

‘ನಮ್ಮ ಗ್ರಾಮದಲ್ಲಿ ಇಂತಹ ಬೃಹತ್‌ ಉಗ್ರಾಣಗಳನ್ನು ರೈತರಿಗಾಗಿ ನಿರ್ಮಿಸಲಾಗಿದ್ದು, ಶೀಘ್ರ ಇವುಗಳ ಆರಂಭಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ‘ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಫಕೀರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.