ADVERTISEMENT

ಸರ್ಕಾರಿ ಕ್ರೀಡಾಕೂಟ: ಶಿವಮೊಗ್ಗಕ್ಕೆ ಸಮಗ್ರ ಪ್ರಶಸ್ತಿ

ರಾಜ್ಯಮಟ್ಟ ಕ್ರೀಡಾಕೂಟ ಸಮಾರೋಪ: ದಕ್ಷಿಣ ಕನ್ನಡ ದ್ವಿತೀಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 4:12 IST
Last Updated 25 ಅಕ್ಟೋಬರ್ 2021, 4:12 IST
ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆಯಿತು
ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆಯಿತು   

ದಾವಣಗೆರೆ: ಮೂರುದಿನಗಳಿಂದ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಭಾನುವಾರ ಕೊನೆಗೊಂಡಿವೆ. ಶಿವಮೊಗ್ಗ ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸಮಗ್ರ ಪ್ರಶಸ್ತಿ ಗಳಿಸಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣ ಮತ್ತು ಯುಬಿಡಿಟಿ ಕಾಲೇಜಿನ ಆವರಣದಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಯಾವುದೇ ರೀತಿಯಲ್ಲಿ ಅವ್ಯವಸ್ಥೆ ಉಂಟಾಗದೇ ಸುಗಮವಾಗಿ ನೆರವೇರಿದೆ. 10 ಸಾವಿರ ಸರ್ಕಾರಿ ನೌಕರರು ಭಾಗವಹಿಸಿದ್ದರು. ಎಲ್ಲರಿಗೆ ಮೂಲ ಸೌಕರ್ಯಗಳೊಂದಿಗೆ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲಾಯಿತು. ಅರ್ಥಪೂರ್ಣವಾಗಿ ಕೊನೆಗೊಂಡಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ಸಂತಸ ವ್ಯಕ್ತಪಡಿಸಿದರು.

ADVERTISEMENT

4 ತಿಂಗಳ ನಂತರ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ‘ಸರ್ಕಾರಿ ನೌಕರರು 365 ದಿನಗಳ ಒತ್ತಡದ ಬದುಕಿನಲ್ಲಿ ಮುಳುಗಿರುತ್ತಾರೆ. ಅಂತಹವರಿಗೆ ಒತ್ತಡ ಕಳೆಯಲು ಇದೊಂದು ಉತ್ತಮ ಕಾರ್ಯಕ್ರಮ. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾನಸಿಕ ನೆಮ್ಮದಿಯನ್ನು ನೀಡುತ್ತವೆ’ ಎಂದು ಹೇಳಿದರು.

ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ, ‘3 ದಿನಗಳ ಕಾಲ ಈ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಉತ್ತಮ ರೀತಿಯಲ್ಲಿ ಮೂಡಿಬಂದಿದೆ’ ಎಂದು ಶ್ಲಾಘಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಫಾಲಾಕ್ಷಿ, ತಹಶೀಲ್ದಾರ್ ಬಿ.ಎನ್‌. ಗಿರೀಶ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.