ದಾವಣಗೆರೆ: ಜಿಲ್ಲೆಯ ಹಲವೆಡೆ ದಾನಿಗಳ ನೆರವಿನಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ವಿವಿಧ ಕಾರ್ಪೊರೇಟ್ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ವತಃ ಶಿಕ್ಷಕರೂ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಹಲವು ಶಾಲೆಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣ ಆಗಿರುವುದರಿಂದ ಪ್ರಸ್ತುತ ಶಿಥಿಲಾವಸ್ಥೆ ತಲುಪಿವೆ. ಮಳೆಗಾಲದಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಕೂರಲಾಗದ ಸ್ಥಿತಿ ಇದೆ. ಬಹುತೇಕ ಶಾಲೆಗಳು ಸುಣ್ಣ–ಬಣ್ಣ ಕಾಣದ ಕಾರಣ ಕಳೆಗುಂದಿದ್ದು, ಕಲಿಕಾ ವಾತಾವರಣವೇ ಇಲ್ಲದಂತಾಗಿದೆ. ಮೂಲ ಸೌರ್ಕರ್ಯಗಳ ಕೊರತೆಯೂ ಗಂಭೀರವಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುವಂತಹ ಸ್ಥಿತಿ ಇದೆ.
ಆದರೆ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಬಡವರು, ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಈ ಶಾಲೆಗಳೇ ಆಸರೆಯಾಗಿವೆ. ಇದನ್ನು ಮನಗಂಡ ದಾನಿಗಳು ಇಲಾಖೆ ಹಾಗೂ ಶಿಕ್ಷಕರು ‘ನಮ್ಮ ಶಾಲೆ ನಮ್ಮ ಹೆಮ್ಮೆ’, ‘ಶಾಲೆಗಾಗಿ ನಾವು ನೀವು’, ಕಾರ್ಯಕ್ರಮಗಳ ಅಡಿ ಮಾಡಿದ ಮನವಿಗೆ ಶಾಲೆಗಳ ಅಭಿವೃದ್ಧಿಗೆ ಧಾವಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನ ಕಂದನಕೋವಿ ಸರ್ಕಾರಿ ಪ್ರೌಢಶಾಲೆ ಕಟ್ಟಡ 15 ವರ್ಷಗಳಿಂದ ಸುಣ್ಣ–ಬಣ್ಣ ಕಾಣದೆ ಸಂಪೂರ್ಣ ಕಳೆಗುಂದಿತ್ತು. ಮುಖ್ಯಶಿಕ್ಷಕಿ ಸವಿತಾ ಎಸ್.ಟಿ ತೋರಿದ ಕಾಳಜಿಯಿಂದಾಗಿ ಶಾಲೆಗೆ ಮತ್ತ ಕಳೆಬಂದಿದೆ. ಇವರು ಬಾಪೂಜಿ ಶಾಲೆಯ ಅಲಮ್ನಿ ಟ್ರಸ್ಟ್‌ನಲ್ಲಿರುವ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಿವಣ್ಣ ಮತ್ತು ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್ ಅವರಿಗೆ ಶಾಲೆಯ ದುಃಸ್ಥಿತಿ ಬಗ್ಗೆ ವಿವರಿಸಿದ್ದರು. ಅವರ ಮನವಿಗೆ ಸ್ಪಂದಿಸಿ, ಶಾಲೆಗೆ ಭೇಟಿ ನೀಡಿದ್ದ ಟ್ರಸ್ಟ್ ಸದಸ್ಯರು ಕಟ್ಟಡ ಸ್ವಚ್ಛಗೊಳಿಸಿ, ಬಣ್ಣ ಬಳಿಸಿದ್ದಾರೆ. ಗೋಡೆಗಳ ಮೇಲೆ ರಾಷ್ಟ್ರನಾಯಕರ ಚಿತ್ರಗಳು ಹಾಗೂ ಗೋಡೆಬರಹಗಳು ಗಮನ ಸೆಳೆಯುತ್ತಿವೆ.
ಶಾಲೆಯ ಆರು ಜನ ಶಿಕ್ಷಕರು ₹ 60,000 ಠೇವಣಿ ಇರಿಸಿ, ಅದರ ಬಡ್ಡಿ ಹಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಷಯವಾರು ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಶಾಲೆಯಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ. ಗ್ರಾಮ ಪಂಚಾಯಿತಿ ಸಹಕಾರದಿಂದ ಸಮಸ್ಯೆ ಪರಿಹಾರವಾಗಿದೆ. 11 ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಟ್ಟಿದ್ದಾರೆ. ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ಸಾಗಿದೆ ಎನ್ನುತ್ತಾರೆ ಮುಖ್ಯಶಿಕ್ಷಕಿ.
ಹೊಸ ಬುಳ್ಳಾಪುರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸುಸ್ಥಿತಿಯಲ್ಲಿದೆ. ಆದರೆ, ವಿದ್ಯಾರ್ಥಿಗಳು ಕೂರಲು ಬೆಂಚ್ ಇರಲಿಲ್ಲ. ಶಿಕ್ಷಕ ಬಿ.ಟಿ. ಅರುಣ ಮಾಡಿದ ಮನವಿಗೆ ಸ್ಪಂದಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ 7 ಡೆಸ್ಕ್, ರೋಟರಿ ಕ್ಲಬ್ 12 ಡೆಸ್ಕ್ ನೀಡಿದೆ. ತಮಿಳುನಾಡಿನ ಸ್ವಯಂ ಸೇವಾ ಸಂಸ್ಥೆ ‘ಗ್ರಾಮಾಲಯ’ವು ಎಲ್‌ಐಸಿಎಚ್‌ಎಫ್‌ಎಲ್ ಸಹಯೋಗದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಟ್ಟಿದ್ದು, ಈ ಶಾಲೆಗೂ ಸೌಲಭ್ಯ ಲಭ್ಯವಾಗಿದೆ.
ಕವಿ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜಯದೇವ ಅವರ ಚಾಮರಾಜನಗರದ ‘ದೀನ ಬಂಧು’ ಸಂಪನ್ಮೂಲ ಕೇಂದ್ರವು ಪ್ರಯೋಗಾಲಯ ಸ್ಥಾಪನೆಗೆ ಅಗತ್ಯ ಸಾಮಗ್ರಿಗಳು ಹಾಗೂ 4 ಟೇಬಲ್ ಒದಗಿಸಿದೆ. ಶಿಕ್ಷಕ ಅರುಣ ಅವರು ಸ್ವತಃ ಟಿ.ವಿ. ಹಾಗೂ ಧ್ವನಿವರ್ಧಕದ ವ್ಯವಸ್ಥೆ ಮಾಡಿದ್ದಾರೆ.
ಕುಗ್ರಾಮ ಹೊಸಕೆರೆಯಾಗಳಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿದೆ. ಹಳೆಯ ವಿದ್ಯಾರ್ಥಿಗಳು 2021–22ರಲ್ಲಿ ಶಾಲೆಗೆ ರೈಲಿನ ಚಿತ್ರದ ಮಾದರಿಯಲ್ಲಿ ಬಣ್ಣ ಬಳಿಸಿದ್ದರು. ದೇಣಿಗೆ ಸಂಗ್ರಹಿಸಿ ಅದ್ದೂರಿಯಾಗಿ ವಾರ್ಷಿಕೋತ್ಸವ ಆಚರಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಅವರು ಶಾರದಾ ಪ್ರತಿಮೆ ಮಾಡಿಸಿಕೊಟ್ಟಿದ್ದಾರೆ. ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕೃಷಿ ಪರಿಕರಗಳ ವ್ಯಾಪಾರಿ ಎ.ಬಿ. ಸೋಮಶೇಖರ್ ಅವರು ₹ 4 ಲಕ್ಷ ವೆಚ್ಚದಲ್ಲಿ ಎಲ್ಲ ಕೊಠಡಿಗಳಿಗೂ ಫ್ಯಾನ್, ಎಲ್‌ಇಡಿ ಟ್ಯೂಬ್ ಲೈಟ್, ಡೆಸ್ಕ್, 6 ಗ್ರೀನ್ ಬೋರ್ಡ್, 1 ಲ್ಯಾಪ್‌ಟಾಪ್, ಯುಪಿಎಸ್, ಪ್ರಿಂಟರ್, ನಲಿಕಲಿ ಕೊಠಡಿಗೆ ಕ್ಲಿಪ್‌ಬೋರ್ಡ್ ನೀಡಿದ್ದಾರೆ.
ದಾನಿಗಳ ನೆರವಿನಿಂದ ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ ಸೃಷ್ಟಿಸಲು ಸಾಧ್ಯವಾಗಿದೆ. ಜೊತೆಗೆ ಗುಣಾತ್ಮಕ ಶಿಕ್ಷಣವನ್ನು ನೀಡಲು ಸಾಧ್ಯವಾಗಿದೆ. ಶಾಲೆಯಲ್ಲಿ ಟಿ.ವಿ ವ್ಯವಸ್ಥೆ ಇದ್ದು, ಆ ಮೂಲಕ ಕಲಿಕೆಯನ್ನು ಸುಲಭಗೊಳಿಸಿದ್ದೇವೆ ಎನ್ನುತ್ತಾರೆ ಪ್ರಭಾರ ಮುಖ್ಯಶಿಕ್ಷಕಿ ಪಿ.ವಿ.ಶೋಭಾ.
ಹಳೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಸಂಘ– ಸಂಸ್ಥೆಯವರು ಜಿಲ್ಲೆಯ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.ಜಿ.ಕೊಟ್ರೇಶ್ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.