ADVERTISEMENT

ದಾವಣಗೆರೆ | ಗ್ರಾ.ಪಂ. ಕಂದಾಯ ಸಂಗ್ರಹ: 3 ಪಟ್ಟು ಹೆಚ್ಚಳ

ವಸೂಲಾತಿಗೆ ನಡೆದ ವಿಶೇಷ ಆಂದೋಲನಕ್ಕೆ ಸಿಕ್ಕ ಪ್ರತಿಫಲ, ₹ 28.29 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 8:13 IST
Last Updated 10 ಏಪ್ರಿಲ್ 2025, 8:13 IST
ಸುರೇಶ್‌ ಇಟ್ನಾಳ್‌
ಸುರೇಶ್‌ ಇಟ್ನಾಳ್‌   

ದಾವಣಗೆರೆ: ವಸೂಲಾತಿಗೆ ನಡೆಸಿದ ವಿಶೇಷ ಆಂದೋಲನದ ಪರಿಣಾಮವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಿಗೆ ಸಂಗ್ರಹ 2024–25ನೇ ಆರ್ಥಿಕ ವರ್ಷದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ₹ 34 ಕೋಟಿ ತೆರಿಗೆ ಸಂಗ್ರಹ ಗುರಿಯಲ್ಲಿ ₹ 28.29 ಕೋಟಿ ವಸೂಲಿಯಾಗಿದೆ.

ಗ್ರಾಮ ಪಂಚಾಯಿತಿ ವರಮಾನದಲ್ಲಿ ಆಗಿರುವ ಹೆಚ್ಚಳ ಹಳ್ಳಿ ಅಭಿವೃದ್ಧಿಗೆ ಪ್ರೇರಣೆ ನೀಡಿದೆ. 2022–23ರಲ್ಲಿ ₹ 9.75 ಕೋಟಿ ಹಾಗೂ 2023–24ರಲ್ಲಿ ₹ 10.38 ಕೋಟಿ ತೆರಿಗೆ ಸಂಗ್ರಹವಾಗಿತ್ತು. 2024–25ನೇ ಆರ್ಥಿಕ ವರ್ಷದಲ್ಲಿ ಶೇ 84.13ರಷ್ಟು ತೆರಿಗೆ ವಸೂಲಿಯಾಗಿದೆ.

2024–25ನೇ ಆರ್ಥಿಕ ವರ್ಷದಲ್ಲಿ ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳಿಂದ ₹ 34 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿತ್ತು. ಇದರಲ್ಲಿ ಇನ್ನೂ ₹ 6 ಕೋಟಿಯಷ್ಟು ತೆರಿಗೆ ಸಂಗ್ರಹ ಬಾಕಿ ಉಳಿದಿದೆ. ಆರ್ಥಿಕ ವರ್ಷ ಪೂರ್ಣಗೊಂಡರೂ ತೆರಿಗೆ ವಸೂಲಿಗೆ ಪಂಚಾಯಿತಿಗಳು ಕ್ರಮಗಳು ಮುಂದುವರಿದಿವೆ.

ADVERTISEMENT

2022–23ನೇ ಆರ್ಥಿಕ ವರ್ಷಕ್ಕೂ ಮುನ್ನ ಗ್ರಾಮ ಪಂಚಾಯಿತಿ ತೆರಿಗೆಯ ಪರಿಷ್ಕರಣೆ ಆಗಿರಲಿಲ್ಲ. ಇದರಿಂದ ತೆರಿಗೆ ಸಂಗ್ರಹದ ಗುರಿ ಕೂಡ ₹ 10 ಕೋಟಿ ದಾಟಿರಲಿಲ್ಲ. ಪಂಚಾಯಿತಿ ಮಟ್ಟದಲ್ಲಿ ಆಸ್ತಿಗಳ ಸಮೀಕ್ಷೆ ಮಾಡಿದ ಬಳಿಕ ತೆರಿಗೆಯ ಗುರಿಯಲ್ಲಿ ಭಾರಿ ಏರಿಕೆ ಕಂಡಿತು. 2023–24ರಲ್ಲಿ ₹ 25 ಕೋಟಿಯಷ್ಟು ಕಂದಾಯವನ್ನು ಸಂಗ್ರಹಿಸಬೇಕಿತ್ತು. ಆದರೆ, ಅರ್ಧದಷ್ಟು ಕೂಡ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.

ಇದನ್ನು ಅರಿತ ಜಿಲ್ಲಾ ಪಂಚಾಯಿತಿ ಕಳೆದ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹಕ್ಕೆ ವಿಶೇಷ ಆಂದೋಲನವೊಂದನ್ನು ರೂಪಿಸಿತು. ಪ್ರತಿ ತಿಂಗಳು 3 ದಿನವನ್ನು ತೆರಿಗೆ ವಸೂಲಾತಿಗೆ ಮೀಸಲಿಟ್ಟಿತು. ನಿಗದಿತ ದಿನ ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಆಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದರು. ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡ ಮನೆ, ವಾಣಿಜ್ಯ ಮಳಿಗೆಗಳ ಪಟ್ಟಿಯನ್ನು ಹಿಡಿದುಕೊಂಡು ವಸೂಲಿಗೆ ಮುಂದಾದರು. ಈ ಪ್ರಯತ್ನಕ್ಕೆ ಅಭೂತಪೂರ್ವ ಸ್ಪಂದನೆಯೂ ವ್ಯಕ್ತವಾಯಿತು.

‘ತೆರಿಗೆ ಸಂಗ್ರಹದಿಂದ ಪಂಚಾಯಿತಿಗಳ ಸಶಕ್ತೀಕರಣಕ್ಕೆ ಅನುಕೂಲವಾಗಲಿದೆ. ಹೆಚ್ಚಾಗಿರುವ ಆದಾಯವನ್ನು ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸಲು ಅನುಕೂಲವಾಗುತ್ತದೆ. ಕುಡಿಯುವ ನೀರು, ಚರಂಡಿ, ಸ್ಮಶಾನ ಅಭಿವೃದ್ಧಿ, ಉದ್ಯಾನ, ಗ್ರಂಥಾಲಯ ಸೇರಿ ಹಲವು ಉದ್ದೇಶಗಳಿಗೆ ಬಳಸಲು ‍ಪಂಚಾಯಿತಿಗಳು ಉತ್ಸುಕವಾಗಿವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್‌ ಇಟ್ನಾಳ್‌ ವಿವರಿಸಿದರು.

ದೂರಸಂಪರ್ಕ ಕಂಪೆನಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಸಿದ ಟವರ್‌ಗಳಿಂದ ಅಂದಾಜು ₹ 2 ಕೋಟಿಯಷ್ಟು ತೆರಿಗೆ ಬಾಕಿ ಇದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ತೆರಿಗೆಯಿಂದ ವಿನಾಯಿತಿ ನೀಡುವಂತೆ ಕಂಪೆನಿಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಇನ್ನು ದಾವಣಗೆರೆ ಹಾಗೂ ಹರಿಹರ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿರುವ ವಾಣಿಜ್ಯ ಸಂಸ್ಥೆಗಳು ಕೂಡ ತೆರಿಗೆ ಬಾಕಿ ಉಳಿಸಿಕೊಂಡಿವೆ.

ದೂರ ಸಂಪರ್ಕ ಕಂಪೆನಿ ಕೈಗಾರಿಕಾ ಪ್ರದೇಶ ಹೊರತುಪಡಿಸಿ ಉಳಿಧೆಡೆಯಿಂದ ಉತ್ತಮ ತೆರಿಗೆ ಸಂಗ್ರಹವಾಗಿದೆ. ವಸೂಲಾತಿ ಕ್ರಮ ಮುಂದುವರಿದಿದೆ.
–ಸುರೇಶ್‌ ಇಟ್ನಾಳ್‌, ಸಿಇಒ ಜಿಲ್ಲಾ ಪಂಚಾಯಿತಿ

ತಾಲ್ಲೂಕುವಾರು ಮಾಹಿತಿ

ತಾಲ್ಲೂಕು ಗ್ರಾ.ಪಂ. ; ತೆರಿಗೆ ಸಂಗ್ರಹ;

ಚನ್ನಗಿರಿ; 61; ₹ 9.57 ಕೋಟಿ

ದಾವಣಗೆರೆ; 42; ₹ 6.97 ಕೋಟಿ

ಹರಿಹರ; 23; ₹ 3.31 ಕೋಟಿ

ಹೊನ್ನಾಳಿ; 29; ₹ 3.90 ಕೋಟಿ

ಜಗಳೂರು; 22; ₹ 1.90 ಕೋಟಿ

ನ್ಯಾಮತಿ; 17; ₹ 2.61 ಕೋಟಿ

37 ಗ್ರಾ.ಪಂ. ಶೇ 100 ಸಾಧನೆ

ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳಲ್ಲಿ 37 ಪಂಚಾಯಿತಿಗಳು ಶೇ 100ರಷ್ಟು ತೆರಿಗೆ ಸಂಗ್ರಹ ಮಾಡಿವೆ. 33 ಪಂಚಾಯಿತಿಗಳು ನಿಗದಿತ ಗುರಿಗಿಂತ ಹೆಚ್ಚು ತೆರಿಗೆ ವಸೂಲಿ ಮಾಡಿವೆ. ಹರಿಹರ ತಾಲ್ಲೂಕಿನ ಸಾಲಕಟ್ಟೆ ಪಂಚಾಯಿತಿ ಶೇ 157ರಷ್ಟು ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದೆ.

‘ಬಹುತೇಕ ಪಂಚಾಯಿತಿಯಲ್ಲಿ ತೆರಿಗೆ ವಸೂಲಿಗೆ ಸರಿಯಾದ ಕ್ರಮ ಕೈಗೊಂಡಿರಲಿಲ್ಲ. ಪಂಚಾಯಿತಿ ಸಿಬ್ಬಂದಿ ಜನರ ಬಳಿಗೆ ಹೋಗಿ ತೆರಿಗೆ ಕೇಳಿರಲಿಲ್ಲ. ಕಂದಾಯ ಪಾವತಿ ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ಫಲವಾಗಿ ಹೆಚ್ಚು ಪ್ರತಿಸ್ಪಂದನೆ ಸಿಕ್ಕಿತು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್‌ ಇಟ್ನಾಳ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.