ADVERTISEMENT

ಅನುದಾನ ತಾರತಮ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 7:27 IST
Last Updated 28 ಅಕ್ಟೋಬರ್ 2022, 7:27 IST
ಎಸ್‌. ರಾಮಪ್ಪ
ಎಸ್‌. ರಾಮಪ್ಪ   

ಮಲೇಬೆನ್ನೂರು: ಮುಖ್ಯಮಂತ್ರಿಗೆ ಹರಿಹರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಅನುದಾನ ನೀಡುವಂತೆ ಮಾಡಿ
ರುವ ಮನವಿಗಳ ಕುರಿತು ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ಶಾಸಕ ಎಸ್. ರಾಮಪ್ಪ ಹೇಳಿದರು.

‘ಅಭಿವೃದ್ದಿ ಕೆಲಸಕ್ಕೆ ಎಲ್ಲ ಕ್ಷೇತ್ರಗಳಿಗೆ ನೀಡಿದಂತೆ ಹರಿಹರಕ್ಕೂ ಹಂಚಿಕೆ ಮಾಡುತ್ತಾರೆ. ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಕ್ಕೆ ನೀಡಿದಂತೆ ನಮಗೆ ಸಮರ್ಪಕ ಅನುದಾನ ನೀಡಿಲ್ಲ. ತಾರತಮ್ಯ ಮುಂದುವರಿದಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪರ್ಸೆಂಟೇಜ್ ನೀಡದೆ ಯಾವುದೆ ಕೆಲಸ ಆಗುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

ಭೈರನಪಾದ ಅಭಿವೃದ್ಧಿಗಾಗಿ ₹ 58 ಕೋಟಿ ವೆಚ್ಚದ ಯೋಜನೆ ಪ್ರಸ್ತಾವ ಕಳುಹಿಸಿದ್ದು, ಶೀಘ್ರ ಮಂಜೂರಾತಿ ದೊರೆಯುವ ವಿಶ್ವಾಸವಿದೆ ಎಂದರು.

‘ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರಿಗೆ ಹರಿಹರ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದು ನಿಜ. ಮುಂಬರುವ ಚುನಾವಣೆಯಲ್ಲಿ ಪಕ್ಷ ನನಗೆ ಟಿಕೆಟ್ ನೀಡಲಿದೆ. ನಾನು ಗೆಲ್ಲುವುದು ಸತ್ಯ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್‌ನದ್ದು. ಅಲ್ಪಸಂಖ್ಯಾತರರನ್ನು ಕಾಂಗ್ರೆಸ್ ಪಕ್ಷ ಕೈ ಬಿಟ್ಟಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿಂದೆ ಸಾಕಷ್ಟು ಬಾರಿ ಅನುದಾನ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಕೂಡ ಸಿದ್ದರಾಮಯ್ಯ ಅವರಿಗೆ ಹರಿಹರ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿರಲಿಲ್ಲವೇ ಎಂದು ಪ್ರಶ್ನಿಸಿದರು.

ಪಟ್ಟಣದ 22ನೇ ವಾರ್ಡ್‌ ಉಪಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಪ್ರಚಾರ ನಡೆಸಿದರೂ ಕಾಂಗ್ರೆಸ್ ಗೆಲುವು ನಿಶ್ಚಿತ. ಎಚ್.ಎಸ್. ಶಿವಶಂಕರ್ ಹತಾಶೆಯಿಂದ ಪಕ್ಷದ ಮುಖಂಡರನ್ನು ಪ್ರಚಾರಕ್ಕೆ ಕರೆಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೋಮಾರನಹಳ್ಳಿ ಕೆರೆ 18 ಕೆರೆ ನೀರು ತುಂಬಿಸುವ ಯೋಜನೆಯಲ್ಲಿ ಸೇರಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಪಟೇಲ್ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಂ. ಅಬಿದ್, ಅಲಿಕುಣಿಬೆಳೆಕೆರೆ ದೇವೇಂದ್ರಪ್ಪ, ವಿರೂಪಾಕ್ಷಪ್ಪ, ಜಿಗಳಿ ಆನಂದಪ್ಪ, ಸನಾವುಲ್ಲಾ, ಪುರಸಭೆ ಸದಸ್ಯ ನಯಾಜ್, ಫೈಜ್ ಮೊಹಿಯುದ್ದೀನ್, ಬೋವಿ ಕುಮಾರ್, ಮಾಗಾನಹಳ್ಳಿ ಹಾಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.