ADVERTISEMENT

ಸಂಪೂರ್ಣ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 22 ಮೇ 2021, 3:37 IST
Last Updated 22 ಮೇ 2021, 3:37 IST
ದಾವಣಗೆರೆಯ ಕೆ.ಆರ್. ಮಾರುಕಟ್ಟೆಯಲ್ಲಿ ಬೆಳಿಗ್ಗೆ ಜನಸಂದಣಿ ಕಂಡುಬಂತು ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಕೆ.ಆರ್. ಮಾರುಕಟ್ಟೆಯಲ್ಲಿ ಬೆಳಿಗ್ಗೆ ಜನಸಂದಣಿ ಕಂಡುಬಂತು ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ಗೆ ಶುಕ್ರವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ 10 ಗಂಟೆಯವರೆಗೆ ಖರೀದಿಗೆ ಅವಕಾಶ ನೀಡಿದ್ದರಿಂದ ದಿನಸಿ, ತರಕಾರಿ ಅಂಗಡಿಗಳಲ್ಲಿ ಜನಜಂಗುಳಿ ಇತ್ತು.

ಮೂರು ದಿವಸ ಲಾಕ್‌ಡೌನ್ ವಿಧಿಸಿರುವುದರಿಂದ ಜನರು ಮುಗಿಬಿದ್ದು ಅಗತ್ಯ ವಸ್ತುಗಳನ್ನು ಖರೀದಿಸಿದರು. ಮೂರು ದಿನ ತರಕಾರಿ ದೊರೆಯುವುದಿಲ್ಲ ಎಂದು ಜನರು ಖರೀದಿಗೆ ಮುಗಿಬಿದ್ದಿದ್ದರಿಂದ ಕೆಲ ಹೊತ್ತಿನಲ್ಲೇ ತರಕಾರಿ ಖಾಲಿಯಾದವು. ಕೆಲವು ಕಡೆ ಹಾಲು ಬೇಗನೆ ಖಾಲಿಯಾಗಿತ್ತು.

ಕೆ.ಆರ್. ಮಾರ್ಕೆಟ್, ಗಡಿಯಾರ ಕಂಬದ ರಸ್ತೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ, ಮಂಡಿಪೇಟೆ, ವಿನೋಬ ನಗರ 2 ಮತ್ತು 3ನೇ ಮುಖ್ಯ ರಸ್ತೆ, ನಿಟುವಳ್ಳಿ, ವಿದ್ಯಾನಗರ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನಸಂದಣಿ ಇದ್ದು, ವಾಹನ ಸಂಚಾರ ಹೆಚ್ಚಾಗಿತ್ತು.

ADVERTISEMENT

ಸೋಮವಾರದವರೆಗೆ ಮಾಂಸ, ಮೀನು ಮಾರಾಟಕ್ಕೆ ಅವಕಾಶ ಇಲ್ಲದ ಕಾರಣಕ್ಕೆ ವಿನೋಬನಗರದ 2ನೇ ಮುಖ್ಯರಸ್ತೆ, ಕೆಟಿಜೆ ನಗರ, ಡಾಂಗೆ ಪಾರ್ಕ್, ಭಾರತ್ ಕಾಲೊನಿ, ಹೊಂಡದ ವೃತ್ತಗಳಲ್ಲಿ ಮಾಂಸದ ಅಂಗಡಿಗಳ ಮುಂದೆ ಜನಸಂದಣಿ ಕಂಡುಬಂತು.

ಜನರು ಮನೆಯಿಂದ ಹೊರ ಬರಲಿಲ್ಲ. ಆಸ್ಪತ್ರೆ, ಬ್ಯಾಂಕ್‌ಗೆ ಹೋಗುವವರು, ಲಸಿಕೆ ಪಡೆಯಲು ಬಂದವರು ರಸ್ತೆಗಳಲ್ಲಿ ಕಾಣಿಸಿಕೊಂಡರು. ಪೊಲೀಸರು ಅಂಥವರಿಂದ ಅಗತ್ಯ ದಾಖಲೆ ಕೇಳಿದರು. ಸಂಪೂರ್ಣ ಲಾಕ್‌ಡೌನ್ ಇದ್ದರೂ ವಾಹನಗಳ ಸಂಚಾರ ಅಲ್ಲಲ್ಲಿ ಕಂಡುಬಂತು. ನಿಯಮ ಉಲ್ಲಂಘಿಸಿ ಹೊರ ಬಂದ ಬೈಕ್‌ಗಳನ್ನು ವಶಕ್ಕೆ ಪಡೆಯಲಾಯಿತು. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಜನಸಂಚಾರ ನಿಯಂತ್ರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.