
ಜಗಳೂರು: ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದ್ದರಿಂದ ತೇವಾಂಶದ ಕೊರತೆ ಎದುರಾಗಿ ಕಡಲೆ ಬಿತ್ತನೆಗೆ ಹಿನ್ನಡೆಯಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.
ಫಲವತ್ತಾದ ಕಪ್ಪು ಎರೆಭೂಮಿಯನ್ನು ಹೊಂದಿರುವ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಪ್ರಮುಖ ಹಿಂಗಾರು ಬೆಳೆಯಾಗಿರುವ ಕಡಲೆ ಬಿತ್ತನೆ ಪ್ರದೇಶ ಈ ವರ್ಷ 5,000 ಎಕರೆಯಷ್ಟು ಕಡಿಮೆಯಾಗಿದೆ. ಮುಂಗಾರು ಹಂಗಾಮಿನ ಬೆಳೆಯಾದ ಮೆಕ್ಕೆಜೋಳವು ಇಳುವರಿ ಕುಂಠಿತವಾಗಿದೆ. ಮೆಕ್ಕೆಜೋಳದ ಬೆಲೆ ಕುಸಿತವಾಗಿ ಬಿತ್ತನೆ ಬೀಜ, ಗೊಬ್ಬರ, ಬೇಸಾಯದ ಖರ್ಚು ಮೈಮೇಲೆ ಬಂದಿತ್ತು. ಇದೀಗ ಹಿಂಗಾರು ಬೆಳೆ ಬೆಳೆಯಲೂ ಮಳೆ ಕೈಕೊಟ್ಟ ಪರಿಣಾಮ, ರೈತರು ಸಾಲದ ಬಲೆಯಲ್ಲಿ ಸಿಲುಕುವಂತಾಗಿದೆ.
ಕಸಬಾ ಹೋಬಳಿಯ ಜಮ್ಮಾಪುರ, ಭರಮಸಮುದ್ರ, ಉದ್ದಗಟ್ಟ, ಮರೇನಹಳ್ಳಿ, ಜಗಳೂರು ಗೊಲ್ಲರಹಟ್ಟಿ, ಕಲ್ಲೇದೇವರಪುರ, ರಂಗಾಪುರ ಹಾಗೂ ತೊರೆಸಾಲು ಪ್ರದೇಶದ ಹಳ್ಳಿಗಳಲ್ಲಿ ಕಪ್ಪು ಎರೆಭೂಮಿ ಸಮೃದ್ಧವಾಗಿದೆ. ಈ ಭಾಗದಲ್ಲಿ ಪ್ರತಿವರ್ಷ ಯಥೇಚ್ಛವಾಗಿ ಹಿಂಗಾರು ಹಂಗಾಮಿನಲ್ಲಿ ಕಡಲೆಯನ್ನು ಬೆಳೆಯಲಾಗುತ್ತದೆ. ಮೆಕ್ಕೆಜೋಳ ಕಟಾವಿನ ನಂತರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕಡಲೆ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಭೂಮಿಯಲ್ಲಿ ತೇವಾಂಶದ ಕೊರತೆಯಾಗಿದೆ. ಬಹುತೇಕ ರೈತರು ದರ ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿ ಸ್ವಲ್ಪ ತಡವಾಗಿ ಮೆಕ್ಕೆಜೋಳವನ್ನು ಕಟಾವು ಮಾಡುತ್ತಿರುವುದು ಕಡಲೆ ಬಿತ್ತನೆ ಪ್ರದೇಶ ಕಡಿಮೆಯಾಗಲು ಕಾರಣವಾಗಿದೆ.
‘ಪ್ರತಿ ವರ್ಷ ನಾನು ಮುಂಗಾರಿನಲ್ಲಿ ಮೆಕ್ಕೆಜೋಳ ಬೆಳೆದು, ಕಟಾವು ಮಾಡಿ, ಅಕ್ಟೋಬರ್ ವೇಳೆಗೆ ಹಿಂಗಾರಿನಲ್ಲಿ ಕಡಲೆಯನ್ನು ಬಿತ್ತನೆ ಮಾಡಿ ಎರಡು ಬೆಳೆ ತೆಗೆಯುತ್ತಿದ್ದೆ. ಇದರಿಂದ ಲಾಭವಾಗುತ್ತಿತ್ತು. ಆದರೆ, ಈ ಬಾರಿ ಮೆಕ್ಕೆಜೋಳ ಇಳುವರಿ ಕುಸಿತವಾಗಿದೆ. ಜೊತೆಗೆ ದರ ಕಡಿಮೆಯಾಗಿ ಸಾಲ ಹೆಚ್ಚಿದೆ. ಕಡಲೆಯನ್ನಾದರೂ ಬೆಳೆದು ಸಾಲ ತೀರಿಸೋಣ ಎಂದರೆ ಭೂಮಿಯಲ್ಲಿ ತೇವಾಂಶ ಇಲ್ಲ. ಹೀಗಾಗಿ ಕಡಲೆ ಬೀಜ ಖರೀದಿಸಿ ತಂದಿದ್ದರೂ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ’ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ಪಿ.ತಿಪ್ಪೇಸ್ವಾಮಿ ನೋವು ತೋಡಿಕೊಂಡರು.
‘ತಾಲ್ಲೂಕಿನ ಪೂರ್ವ ಭಾಗದ ನಮ್ಮ ತೊರೆಸಾಲು ಪ್ರದೇಶದಲ್ಲಿ ಈ ವರ್ಷ ಮುಂಗಾರು ಪೂರ್ಣ ಕೈಕೊಟ್ಟ ಕಾರಣ ಸಾವಿರಾರು ಎಕರೆಯಲ್ಲಿ ಮೆಕ್ಕೆಜೋಳ ಒಣಗಿ ನಷ್ಟವಾಗಿದೆ. ಹಿಂಗಾರಿನಲ್ಲೂ ಮಳೆಯಾಗಿಲ್ಲ. ಕಡಲೆ ಬಿತ್ತನೆ ಸಾಧ್ಯವಾಗಿಲ್ಲ. ಈ ವರ್ಷ ಬರಗಾಲದ ಅನುಭವವಾಗಿದ್ದು, ಬಿತ್ತನೆ, ಬೀಜ, ಗೊಬ್ಬರಕ್ಕೆ ಸಾಕಷ್ಟು ಖರ್ಚು ಮಾಡಿದ್ದೇವೆ’ ಎಂದು ತೊರೆಸಾಲು ಭಾಗದ ತಾಯಿಟೊಣೆ ಗ್ರಾಮದ ಅರವಿಂದ ಪಟೇಲ್ ಸಂಕಷ್ಟ ಬಿಚ್ಚಿಟ್ಟರು.
ಕಡಲೆ ಬಿತ್ತನೆ ಬೀಜ ಮಾರಾಟ ಕುಸಿತ:
‘ಇದುವರೆಗೆ 3266 ಕ್ವಿಂಟಲ್ ಕಡಲೆ ಬಿತ್ತನೆಬೀಜ ಮಾರಾಟವಾಗಿದೆ. ಕಳೆದ ವರ್ಷ ಈ ವೇಳೆಗೆ 5998 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿತ್ತು. ಕಳೆದ ವರ್ಷ 4779 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆಯಾಗಿತ್ತು. ಈ ಬಾರಿ ಕೇವಲ 2700 ಹೆಕ್ಟೇರ್‌ನಲ್ಲಿ ಕಡಲೆ ಇದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ಅವರು ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು. ನವೆಂಬರ್‌ನಲ್ಲಿ 25 ಮಿ.ಮೀ. ನಷ್ಟು ಮಳೆಯಾಗಬೇಕಿತ್ತು. ಆದರೆ ಕೇವಲ 3 ಮಿ.ಮೀ. ಸುರಿದಿದೆ. ಒಟ್ಟಾರೆ ತೇವಾಂಶದ ಕೊರತೆಯಿಂದ ತಾಲ್ಲೂಕಿನ ಪ್ರಮುಖ ಹಿಂಗಾರು ಬೆಳೆ ಕಡಲೆ ಬಿತ್ತನೆ ಪ್ರದೇಶ ಕಡಿಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.