ADVERTISEMENT

ದಾವಣಗೆರೆ | ಸಕಾಲಕ್ಕೆ ಬಾರದ ಗೌರವಧನ: ಬೀದಿ ವ್ಯಾಪಾರಿಗಳಾದ ಅತಿಥಿ ಉಪನ್ಯಾಸಕರು

ಪ್ರಜಾವಾಣಿ ವಿಶೇಷ
Published 25 ಜುಲೈ 2020, 5:24 IST
Last Updated 25 ಜುಲೈ 2020, 5:24 IST
ಹರಿಹರದಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡುತ್ತಿರುವ ಎ.ಎಂ. ಮಾಲತೇಶ್
ಹರಿಹರದಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡುತ್ತಿರುವ ಎ.ಎಂ. ಮಾಲತೇಶ್   

ದಾವಣಗೆರೆ: ಸಕಾಲದಲ್ಲಿ ಗೌರವಧನ ಬಿಡುಗಡೆಯಾಗದೇ ನೂರಾರು ಉಪನ್ಯಾಸಕರು ಕಂಗಾಲಾಗಿದ್ದು, ಜೀವನ ನಿರ್ವಹಣೆಗಾಗಿ ಹಲವು ಉದ್ಯೋಗಗಳನ್ನು ಮಾಡುತ್ತಿದ್ದಾರೆ.

ದಾವಣಗೆರೆಯ ವಿದ್ಯಾನಗರದ ಕೊನೆಯ ಬಸ್ ನಿಲ್ದಾಣದ ಬಳಿ ಒಬ್ಬರು ತರಕಾರಿ ಮಾರಾಟ ಮಾಡುತ್ತಿದ್ದರೆ, ಇನ್ನೊಬ್ಬರು ಹರಿಹರದಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಅತಿಥಿ ಉಪನ್ಯಾಸಕರು ವಡೆಕಟ್ಟುವ ಕೆಲಸ, ಮಾವಿನ ಹಣ್ಣು, ಕಾಳುಕಡ್ಡಿ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಮದುವೆಯಾದ ಅತಿಥಿ ಉಪನ್ಯಾಸಕರೊಬ್ಬರು ಬೀದಿ ಬದಿ ಸೊಪ್ಪು ಮಾರಾಟ ಮಾಡಿದರೆ, ಮತ್ತೊಬ್ಬರು ಎಗ್‌ರೈಸ್ ಗಾಡಿ ನಡೆಸುತ್ತಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ಬಾರ್‌ನಲ್ಲಿ ವೇಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲವು ಅತಿಥಿ ಉಪನ್ಯಾಸಕರು ತಾವು ಮಾಡುವ ಕೆಲಸವನ್ನು ಹೇಳಿಕೊಳ್ಳುತ್ತಿಲ್ಲ.

ADVERTISEMENT

ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಕರಾಗಿರುವ ಎ.ಎಂ. ಮಾಲತೇಶ್ ಅವರು ತೆಂಗಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಹೊನ್ನಾಳಿಯಲ್ಲಿ ಆರು ವರ್ಷ ಕೆಲಸ ಮಾಡಿ ಹರಿಹರದಲ್ಲಿ ಏಳು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಂ.ಕಾಂ, ಎಂ.ಎಂಫಿಲ್, ಬಿ.ಇಡಿ ಪದವೀಧರರಾಗಿರುವ ಇವರಿಗೆ ತಂದೆ–ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಾಕುವ ಹೊಣೆ ಇದೆ. ಹಳ್ಳಿಹಳ್ಳಿಗಳಲ್ಲಿ ಸುತ್ತಿ ತೆಂಗಿನಕಾಯಿ ತಂದು, ಬೀದಿ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಾಮೂಲಿ ದಿನಗಳಲ್ಲಿ ₹150ರಿಂದ ₹200 ಹಾಗೂ ಸಂತೆ ಇದ್ದಾಗ ₹300ರಿಂದ ₹400ವರೆಗೆ ಸಂಪಾದಿಸುತ್ತಾರೆ.

‘ಸಂಕಷ್ಟದ ಸಮಯಲ್ಲಿ ನಾನು ಕಿಟ್ ಕೇಳಿದರೆ ‘ಏನು ಕೆಲಸ ಮಾಡುತ್ತೀರಿ’ ಎಂದು ಪ್ರಶ್ನಿಸುತ್ತಾರೆ. ಅತಿಥಿ ಉಪನ್ಯಾಸಕರು ನಿಮಗೇಕೆ ಎಂದು ಕೇಳುತ್ತಾರೆ. ನಮ್ಮ ಪರಿಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ. ನಮ್ಮನ್ನು ಬೇರೆ ದೃಷ್ಟಿಯಿಂದ ನೋಡುತ್ತಾರೆ’ ಎಂದು ಮಾಲತೇಶ್‌ ಅಳಲು ತೋಡಿಕೊಳ್ಳುತ್ತಾರೆ.

‘ಸಂಬಳಕ್ಕಾಗಿ ಎರಡು, ಮೂರು ತಿಂಗಳು ಕಾದೆವು. ಆದರೆ ಬರಲಿಲ್ಲ. ಇದ್ದ ಅಲ್ಪಸ್ವಲ್ಪ ಹಣ ಲಾಕ್‌ಡೌನ್ ಸಮಯ ಎರಡು ತಿಂಗಳು ಜೀವನ ನಿರ್ವಹಣೆಗೆ ಆಯಿತು. ಆದರೆ, ಯಾವುದೇ ಆದಾಯದ ಮೂಲ ಇಲ್ಲದೇ ಇದ್ದುದರಿಂದ ತೆಂಗಿನಕಾಯಿ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಬಂತು. ಮನೆ ಬಾಡಿಗೆ ಕಟ್ಟಲು ಕಷ್ಟವಾಗಿದೆ’ ಎನ್ನುತ್ತಾರೆ.

ಚಾಣಕ್ಯ ಪ್ರಥಮದರ್ಜೆ ಕಾಲೇಜಿನಲ್ಲಿ ಅಕೌಂಟೆನ್ಸಿ ಉಪನ್ಯಾಸಕರಾಗಿರುವ ಕುಕ್ಕವಾಡ ಗ್ರಾಮದ ಎಂ. ಅರುಣ್‌ಕುಮಾರ್ ತರಕಾರಿ ಮಾರಾಟ ಮಾಡುತ್ತಿದ್ದಾರೆ. ರಂಗನಾಥ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಇವರು ತಂದೆ–ತಾಯಿ, ಪತ್ನಿ ಇಬ್ಬರು ಮಕ್ಕಳನ್ನು ಸಲಹಬೇಕಿದೆ.

‘ಆರಂಭದಲ್ಲಿ ವ್ಯಾಪಾರ ಆಗಲಿಲ್ಲ. ನಮ್ಮ ವಿದ್ಯಾರ್ಥಿಗಳು ನನ್ನಲ್ಲಿಗೆ ಬಂದು ತರಕಾರಿ ಖರೀದಿ ಮಾಡುತ್ತಿದ್ದಾರೆ. ಬಾಡಿಗೆ ಕಟ್ಟಲು, ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿ ತರಕಾರಿ ವ್ಯಾಪಾರ ಅನಿವಾರ್ಯವಾಯಿತು’ ಎನ್ನುತ್ತಾರೆ ಅವರು.

‘ಮಕ್ಕಳ ವಿದ್ಯಾಭ್ಯಾಸದ ಶುಲ್ಕ, ಬಾಡಿಗೆ ಕಟ್ಟಲು ಆಗದೇ ರಾಜ್ಯದ ವಿವಿಧೆಡೆ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂಬುದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಕೊಟ್ರೇಶ್ ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.