ದಾವಣಗೆರೆಯಲ್ಲಿ ನಡೆದ ಸಭೆಯನ್ನು ಗಣ್ಯರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ
ದಾವಣಗೆರೆ: ‘ರಾಜಕೀಯವು ಸೇವಾ ಕ್ಷೇತ್ರ ಎಂಬ ಭಾವ ಮೂಡಬೇಕಿದೆ. ಆದರೆ, ಅದು ಸೇವನೆಯ ಕ್ಷೇತ್ರ ಎಂಬಂತಾಗಿದೆ. ಹಣವಂತರು, ದರೋಡೆಕೋರರು, ವಂಚಕರಿಗೆ ರಾಜಕೀಯ ಹೆಚ್ಚು ತೆರೆದುಕೊಂಡಿದ್ದು, ಮೌಲ್ಯಾಧಾರಿತ ರಾಜಕಾರಣದ ಅವಶ್ಯವಿದೆ’ ಎಂದು ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಎಂಸಿಸಿ ‘ಬಿ’ ಬ್ಲಾಕ್‌ನ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಚೇರಿಯಲ್ಲಿ ಶನಿವಾರ ನಡೆದ ಸರ್ವೋದಯ ರಾಜಕೀಯ ಪುನರುತ್ಥಾನ ಚಿಂತನ ಸಭೆಯಲ್ಲಿ ಮಾತನಾಡಿದರು.
‘ಭೂ ಮಾಫಿಯಾ, ಹಣದ ರಾಜಕೀಯ, ಪಕ್ಷಾಂತರದಿಂದ ಮತದಾರರು ಕಂಗೆಟ್ಟಿದ್ದಾರೆ. ಚುನಾವಣೆ ವೇಳೆ ಯುವಕರು ಮದ್ಯದ ದಾಸರಾಗುತ್ತಿದ್ದಾರೆ. ರಾಜಕಾರಣವನ್ನು ಶುದ್ಧೀಕರಿಸಲು ಯುವಜನತೆ ಕುಡಿತದ ಚಟ ಬಿಡಬೇಕು’ ಎಂದು ಸಲಹೆ ನೀಡಿದರು.
‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಿದ್ದರೂ, ಅದರ ಆಶೋತ್ತರ ಈಡೇರುತ್ತಿಲ್ಲ. ಸಾತ್ವಿಕ ರಾಜಕಾರಣಿಗಳನ್ನು ಮತದಾರರು ಗುರುತಿಸಿ, ಬೆಂಬಲಿಸಬೇಕು. ಸಿದ್ಧಾಂತದ ಆಧಾರದ ಮೇಲೆ ಚರ್ಚೆ ನಡೆಯಬೇಕು. ಆದರೆ, ವೈಯಕ್ತಿಕ ದ್ವೇಷದ ಮೇಲೆ ಚರ್ಚೆ ನಡೆಯುತ್ತಿರುವುದು ವಿಷಾದನೀಯ’ ಎಂದು ಬೇಸರಿಸಿದರು.
‘ರೈತರು ನೆಮ್ಮದಿಯಿಂದ ಇರುವ ದೇಶ ಕಲ್ಯಾಣಮಯವಾಗಿರುತ್ತದೆ. ರಾಜಕಾರಣ ಅತ್ಯಂತ ಪರಿಶುದ್ಧವಾಗಿರಬೇಕು. ರಾಜಕೀಯದಿಂದ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬೇಕಿದೆ. ಕೆಲಸ ಮಾಡದ ಜನಪ್ರತಿನಿಧಿಯನ್ನು ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಬರಬೇಕು’ ಎಂದು ಹೇಳಿದರು.
‘ಗ್ರಾಮ ಪಂಚಾಯಿತಿಗಳಲ್ಲಿ ಕಾಟಾಚಾರಕ್ಕೆ ಗ್ರಾಮಸಭೆ ನಡೆಯುತ್ತಿವೆ. ಸಭೆಗಳಲ್ಲಿ ಗ್ರಾಮಸ್ಥರು ಪಾಲ್ಗೊಳ್ಳುತ್ತಿಲ್ಲ. ಕಾಯ್ದೆಗಳಿದ್ದರೂ, ಸಮರ್ಪಕವಾಗಿ ಜಾರಿಗೊಳ್ಳುತ್ತಿಲ್ಲ. ನೋಟಿಗಾಗಿ ವೋಟು ವ್ಯವಸ್ಥೆ ಬದಲಾಗಬೇಕಿದೆ’ ಎಂದು ನೆಲಮಂಗಲದ ಬೋರೇಗೌಡ ಹೇಳಿದರು.
‘ಗ್ರಾಮ ಪಂಚಾಯಿತಿಯ ಉಪಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮ ಸಭೆಗಳು ಆನ್‌ಲೈನ್ ಮೂಲಕವೂ ನಡೆಯಬೇಕು. ಜನರು ದೇವಾಲಯಕ್ಕೆ ತೆರಳಿದಂತೆ ಪಂಚಾಯಿತಿ ಕಚೇರಿಗೂ ತೆರಳಬೇಕು’ ಎಂದರು.
ಮುಖಂಡರಾದ ಮಹಿಮ ಪಟೇಲ್, ಶಿವನಕೆರೆ ಬಸವಲಿಂಗಪ್ಪ, ಪತ್ರಕರ್ತ ಬಿ.ಎನ್. ಮಲ್ಲೇಶ್, ಬೆಳಗಾವಿಯ ದಿಲೀಪ್ ಕಾಮತ್, ಅಜ್ಜಿಹಳ್ಳಿ ರವಿ, ಕುಸುಮಾ, ಮುರುಗೇಶ್ ಉರುವಕೊಂಡಿ ಮಾತನಾಡಿದರು.
‘ಎಲ್ಲಾ ವಲಯಗಳಲ್ಲಿ ಒಳ್ಳೆಯದನ್ನು ಬೆಂಬಲಿಸುವ ವಾತಾವರಣ ನಿರ್ಮಾಣವಾದರೆ, ರಾಜಕಾರಣದಲ್ಲೂ ಒಳ್ಳೆಯವರಿಗೆ ಅವಕಾಶ ಸಿಗುತ್ತದೆ’ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು.
‘ಜನಾಂದೋಲನದಿಂದ ಬದಲಾವಣೆ ತರಬಹುದು. ಆಂದೋಲನದ ವಿಷಯ ಎಷ್ಟು ಮುಖ್ಯವೋ, ನಾಯಕತ್ವ ವಹಿಸುವವರ ಪ್ರಾಮಾಣಿಕತೆಯೂ ಅಷ್ಟೇ ಮುಖ್ಯ’ ಎಂದರು.
‘ಶುದ್ಧ ರಾಜಕಾರಣ ಬಯಸುವವರು ಜನಸಾಮಾನ್ಯರೊಂದಿಗೆ ಬೆರೆತು ಜನರ ಕಷ್ಟಗಳಿಗೆ ಧ್ವನಿಯಾಗಬೇಕು. ಬರೀ ಭಾಷಣದಿಂದ ಪ್ರಯೋಜನವಾಗಲ್ಲ’ ಎಂದು ಹೇಳಿದರು.
ಬಹುತೇಕ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಎಂತಹ ಹೋರಾಟಕ್ಕೂ ಸಿದ್ಧವಾಗಬೇಕಿದೆಆವರಗೆರೆ ರುದ್ರಮುನಿ, ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.