ADVERTISEMENT

ದಾವಣಗೆರೆ | ಸಂಕಷ್ಟದಲ್ಲಿ ಹಕ್ಕಿಪಿಕ್ಕಿ ಜನ: ನೆರವಿಗಾಗಿ ಮೊರೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 23:30 IST
Last Updated 21 ಮಾರ್ಚ್ 2025, 23:30 IST
ಆಫ್ರಿಕಾದ ಗಾಬೂನ್‌ನ ರಾಜಧಾನಿ ಲಿಬ್ರವಿಲ್ಲೆಯಲ್ಲಿರುವ ಪೊಲೀಸ್‌ ಠಾಣೆಯ ಎದುರು ನಿಂತಿರುವ ಚನ್ನಗಿರಿ ತಾಲ್ಲೂಕಿನ ಹಕ್ಕಿಪಿಕ್ಕಿ ಸಮುದಾಯದವರು
ಆಫ್ರಿಕಾದ ಗಾಬೂನ್‌ನ ರಾಜಧಾನಿ ಲಿಬ್ರವಿಲ್ಲೆಯಲ್ಲಿರುವ ಪೊಲೀಸ್‌ ಠಾಣೆಯ ಎದುರು ನಿಂತಿರುವ ಚನ್ನಗಿರಿ ತಾಲ್ಲೂಕಿನ ಹಕ್ಕಿಪಿಕ್ಕಿ ಸಮುದಾಯದವರು   

ದಾವಣಗೆರೆ: ಉದ್ಯೋಗ ಅರಸಿ ಮಧ್ಯ ಆಫ್ರಿಕಾದ ರಾಷ್ಟ್ರ ಗಬಾನ್‌ಗೆ ತೆರಳಿರುವ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಕ್ಕಿಪಿಕ್ಕಿ ಸಮುದಾಯದವರು ಅಲ್ಲಿನ ಹೊಸ ನೀತಿಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಆಯುರ್ವೇದ ತೈಲದ ವ್ಯಾಪಾರಕ್ಕಾಗಿ ಗಬಾನ್‌ನ ರಾಜಧಾನಿ ಲಿಬ್ರೆವಿಲ್‌ನಲ್ಲಿ ಕೆಲವು ತಿಂಗಳುಗಳಿಂದ ವಾಸಿಸುತ್ತಿರುವ ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಹಾಗೂ ಗೋಪನಾಳ್‌ ಗ್ರಾಮಗಳ ಹಕ್ಕಿಪಿಕ್ಕಿ ಸಮುದಾಯದ 25ಕ್ಕೂ ಹೆಚ್ಚು ಜನರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ದೇಶ ಬಿಟ್ಟು ಸ್ವದೇಶಕ್ಕೆ ವಾಪಸಾಗುವಂತೆ ತಾಕೀತು ಮಾಡಿರುವ ಪೊಲೀಸರು, ಅವರ ಪಾಸ್‌ಪೋರ್ಟ್‌ ವಶಕ್ಕೆ ಪಡೆದಿದ್ದಾರೆ ಎಂದು ಸಂಕಷ್ಟಕ್ಕೀಡಾಗಿರುವ ಜನರು ತಮ್ಮ ಸಂಬಂಧಿಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಜಕೀಯ ಪಲ್ಲಟದ ಕಾರಣ ಗಾಬೂನ್‌ನಲ್ಲಿ ಈಚೆಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ವಿದೇಶಿಯರನ್ನು ದೇಶ ಬಿಡುವಂತೆ ಸೂಚಿಸಿದೆ. ಆಯುರ್ವೇದ ಗಿಡ ಮೂಲಿಕೆಗಳ ವ್ಯಾಪಾರಕ್ಕಾಗಿ ಗಾಬೂನ್‌ಗೆ ತೆರಳಿರುವ ಹಕ್ಕಿಪಿಕ್ಕಿ ಸಮುದಾಯದವರನ್ನೂ ಇದರ ಭಾಗವಾಗಿ‌ ದೇಶ ತೊರೆಯುವಂತೆ ಅಲ್ಲಿನ ಸರ್ಕಾರ ತಾಕೀತು ಮಾಡಿದೆ.

ADVERTISEMENT

‘ನೀವು ₹2 ಲಕ್ಷದಿಂದ ₹3 ಲಕ್ಷ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಬೆದರಿಸಿ 25ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏಕಾಏಕಿ ನಮ್ಮ ಸಮುದಾಯದವರಿಗೆ ದೇಶ ತೊರೆಯುವಂತೆ ಸೂಚಿಸಿದ್ದಾರೆಂದು ಅಲ್ಲಿರುವವರು ಮಾಹಿತಿ ನೀಡಿದ್ದಾರೆ’ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆರ್. ಪುನೀತ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.