ADVERTISEMENT

ಮಾರಿಕೊಪ್ಪ | ಹಳದಮ್ಮ ದೇವಿಯ ಬನ್ನಿ ಉತ್ಸವ

ಬನ್ನಿ ವಿನಿಮಯ ಮಾಡಿಕೊಂಡ ಶಾಸಕ ಶಾಂತನಗೌಡ– ಮಾಜಿ ಸಚಿವ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:33 IST
Last Updated 4 ಅಕ್ಟೋಬರ್ 2025, 6:33 IST
ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ ಹಳದಮ್ಮ ದೇವಿಯ ಬನ್ನಿ ಉತ್ಸವಕ್ಕೂ ಮುನ್ನ ಪ್ರಧಾನ ಅರ್ಚಕ ಹಾಲನಗೌಡ ಅವರು ಬಾಣ ಹೂಡಿದರು
ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ ಹಳದಮ್ಮ ದೇವಿಯ ಬನ್ನಿ ಉತ್ಸವಕ್ಕೂ ಮುನ್ನ ಪ್ರಧಾನ ಅರ್ಚಕ ಹಾಲನಗೌಡ ಅವರು ಬಾಣ ಹೂಡಿದರು   

ಹೊನ್ನಾಳಿ: ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮಾರಿಕೊಪ್ಪ ಗ್ರಾಮದಲ್ಲಿ ದಸರಾ ಹಾಗೂ ಶರನ್ನವರಾತ್ರಿ ಮಹೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಹಳದಮ್ಮ ದೇವಿಯ ಬನ್ನಿ ಮಹೋತ್ಸವ ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.  

ಹಳದಮ್ಮ ದೇವಿಯ ದೇವಸ್ಥಾನದಿಂದ ಒಡ್ಡೊಲಗದೊಂದಿಗೆ ಮೆರವಣಿಗೆ ಹೊರಟ ಹಳದಮ್ಮ ದೇವಿಯು ಹೊನ್ನಾಳಿಯ ಹಿರೇಕಲ್ಮಠಕ್ಕೆ ಹೋಗಿ ಅಲ್ಲಿಂದ ಉಡಿಯಕ್ಕಿ ಪಡೆದುಕೊಂಡು ನೇರವಾಗಿ ಬನ್ನಿಮಂಟಪಕ್ಕೆ ಬಂದಿತು. 

ದೇವಿಯ ಆಗಮನವಾಗುತ್ತಿದ್ದಂತೆ ಬನ್ನಿ ಮಂಟಪದಲ್ಲಿ ಕಾಯುತ್ತಿದ್ದ ಜೋಗಪ್ಪ, ಜೋಗತಿಯರು ತಮ್ಮ ದೀವಟಿಗೆಗಳನ್ನು ಹಿಡಿದು ಬನ್ನಿ ಮಂಟಪದತ್ತ ತಿರುಗಿ ಬೆಳಗಿದರು. 

ADVERTISEMENT

ದೇವಸ್ಥಾನದ ಪ್ರಧಾನ ಅರ್ಚಕ ಹಾಲನಗೌಡ ಅವರು 11 ದಿನ ಒಪ್ಪತ್ತು (ಉಪವಾಸ) ಇದ್ದು, ಶಮೀ ವೃಕ್ಷದ ಮುಂಭಾಗದಲ್ಲಿ ಮೂರು ಬಾಣಗಳನ್ನು (ಅಂಬು) ಹೂಡಿದರು. 

ರೊಟ್ಟಿ ಬುತ್ತಿ ವಿಶೇಷ: ಹಳದಮ್ಮ ದೇವಿಯ ಭಕ್ತರು ಗುರುವಾರವೇ ರೊಟ್ಟಿ ಬುತ್ತಿ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ಹೊರಟು ದೇವಸ್ಥಾನಕ್ಕೆ ಬಂದು ಎಡೆಹಾಕುವುದು ಇಲ್ಲಿನ ಸಂಪ್ರದಾಯ. ಎಡೆ ಹಾಕಿದ ನಂತರ ರೊಟ್ಟಿ ಬುತ್ತಿ ಸೇವಿಸಿ ಬನ್ನಿ ಮಂಟಪಕ್ಕೆ ಬರುತ್ತಾರೆ. 

ಹರಕೆ ಹೊತ್ತವರು ಉಪವಾಸ ವ್ರತ ಕೈಗೊಂಡು ಬನ್ನಿ ಮುಡಿಯುವವರೆಗೂ ಆಹಾರ ಸೇವಿಸುವುದಿಲ್ಲ. ಬನ್ನಿ ವಿನಿಮಯದ ನಂತರವೇ ಆಹಾರ ಸೇವಿಸುತ್ತಾರೆ ಎನ್ನುತ್ತಾರೆ ಇಲ್ಲಿನ ಹಿರಿಯರು. 

ಬನ್ನಿ ಉತ್ಸವದಲ್ಲಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪರಸ್ಪರ ಬನ್ನಿಪತ್ರೆಗಳನ್ನು ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು. 

ತಹಶೀಲ್ದಾರ್ ರಾಜಶೇಖರ್, ಸಿಪಿಐ ಸುನೀಲ್‍ಕುಮಾರ್, ಹತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹನುಮಂತಪ್ಪ, ಎಲ್. ಚಿನ್ನಪ್ಪ, ಹಳದಪ್ಪ, ಪುರಸಭೆ ಸದಸ್ಯ ಧರ್ಮಪ್ಪ, ಮುಜರಾಯಿ ಅಧೀಕ್ಷಕ ಬಿ.ಎನ್. ಕೃಷ್ಣಪ್ಪ, ರಾಜಸ್ವ ನಿರೀಕ್ಷಕ ರಮೇಶ್, ಗ್ರಾಮಾಡಳಿತಾಧಿಕಾರಿ ಮುನೇಶ್, ಶ್ರೀದೇವಿ ಧರ್ಮಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.