ADVERTISEMENT

ಹಲವಾಗಲು-ಗರ್ಭಗುಡಿ ರಸ್ತೆ ಸಂಪರ್ಕ ಕಡಿತ

ಉಕ್ಕಿ ಹರಿಯುತ್ತಿದೆ ತುಂಗಭದ್ರಾ ನದಿ*ಸುರಕ್ಷಿತ ಸ್ಥಳಕ್ಕೆ ತೆರಳಲು ನದಿ ತೀರದ ಜನರಿಗೆ ಸೂಚನೆ

ಪ್ರಹ್ಲಾದಗೌಡ ಗೊಲ್ಲಗೌಡರ
Published 14 ಆಗಸ್ಟ್ 2018, 16:25 IST
Last Updated 14 ಆಗಸ್ಟ್ 2018, 16:25 IST
ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು-ಗರ್ಭಗುಡಿ ರಸ್ತೆ ಕಡಿತಗೊಂಡಿರುವುದು ವೀಕ್ಷಣೆ ಮಾಡಿದ ಉಪವಿಭಾಗಾಧಿಕಾರಿ ಜಿ.ನಜ್ಮಾ, ತಹಶೀಲ್ದಾರ್ ಗುರುಬಸವರಾಜ
ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು-ಗರ್ಭಗುಡಿ ರಸ್ತೆ ಕಡಿತಗೊಂಡಿರುವುದು ವೀಕ್ಷಣೆ ಮಾಡಿದ ಉಪವಿಭಾಗಾಧಿಕಾರಿ ಜಿ.ನಜ್ಮಾ, ತಹಶೀಲ್ದಾರ್ ಗುರುಬಸವರಾಜ   

ಹರಪನಹಳ್ಳಿ: ತಾಲ್ಲೂಕಿನ ಜೀವನದಿ ಎಂದು ಹೆಸರಾಗಿರುವ ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಅಪಾರ ನಷ್ಟವುಂಟು ಮಾಡಿದೆ.

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ತಾಲ್ಲೂಕಿನಲ್ಲಿ ನದಿ ಮೈದುಂಬಿ ಹರಿಯುತ್ತಿದೆ. ಭದ್ರಾ ಹಾಗೂ ತುಂಗಾ ಜಲಾಶಯಗಳು ಭರ್ತಿಯಾಗಿವೆ. ಸದ್ಯ ಗಾಜನೂರಿನಲ್ಲಿರುವ ತುಂಗಾ ಜಲಾಶಯದಿಂದ 1 ಲಕ್ಷ ಕ್ಯುಸೆಕ್‌ ಹಾಗೂ ಭದ್ರಾ ಜಲಾಶಯದಿಂದ 85 ಸಾವಿರ ಕ್ಯುಸೆಕ್‌ ನೀರನ್ನು ಬಿಡಲಾಗಿದೆ.

ತಾಲ್ಲೂಕಿನ ಹಲವಾಗಲು, ಗರ್ಭಗುಡಿ, ನಿಟ್ಟೂರು, ನಿಟ್ಟೂರು ಬಸಾಪುರ, ಕಡತಿ, ನಂದ್ಯಾಲ ಹಾಗೂ ತಾವರಗುಂದಿ ಗ್ರಾಮಗಳ ಪಕ್ಕದಲ್ಲಿ ನದಿ ಹರಿಯುತ್ತಿದೆ. ಸದ್ಯ ತುಂಗಭದ್ರೆ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಈ ಪರಿಣಾಮ ಹಲುವಾಗಲು-ಗರ್ಭಗುಡಿ ಗ್ರಾಮಗಳ ಮಧ್ಯದ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡಿವೆ.

ADVERTISEMENT

ಗರ್ಭಗುಡಿ ಮಧ್ಯೆವಿರುವ ನೆಲಮಟ್ಟದ ಸೇತುವೆ ಜಲಾವೃತಗೊಂಡಿದೆ. ಜನರು ರಸ್ತೆ ದಾಟಲು ತೆಪ್ಪದ ಮೊರೆ ಹೋಗಿದ್ದಾರೆ. ಹಲುವಾಗಲು ಬಳಿಯ ಶಿವನಹಳ್ಳ ತುಂಬಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ಹಲವಾಗಲಿನಿಂದ ಮೈಲಾರ ಮಾರ್ಗ ಸಂಚರಿಸುವರು ಹಾಗೂ ಮೈಲಾರ ಮಾರ್ಗದಿಂದ ಹಲವಾಗಲು ಭಾಗಕ್ಕೆ ತೆರಳುವವರು ಕುಂಚೂರು, ಕಣವಿ ಗ್ರಾಮಗಳ ಮೂಲಕ ಸುಮಾರು 10 ಕಿ.ಮೀ ಸುತ್ತಿ ಬರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ನೀರಿನ ಪ್ರವಾಹದಿಂದ ಸುಮಾರು 25-30 ಬಲೆಗಳು, ತೆಪ್ಪಗಳು ಕೊಚ್ಚಿಹೋಗಿ ಮೀನುಗಾರರಿಗೆ ನಷ್ಟವಾಗಿದೆ. ಗರ್ಭಗುಡಿ ಗ್ರಾಮದ ಬಳಿ ಅಂದಾಜು 20 ಎಕರೆ ಭತ್ತದ ಬೆಳೆ ಜಲಾವೃತಗೊಂಡಿದೆ. ನಿಟ್ಟೂರು ಗ್ರಾಮದ ಆರೇರ್ ಕೊಟ್ರೇಶ್ ಹಾಗೂ ಕುಟುಂಬದವರಿಗೆ ಸೇರಿದ ಮತ್ತು ಎಚ್.ಡಿ. ದೇವೇಂದ್ರಪ್ಪ ಅವರಿಗೆ ಸೇರಿದ ಗದ್ದೆಗಳಲ್ಲಿ ನದಿ ನೀರು ತುಂಬಿಕೊಂಡಿದೆ. ತಾವರಗುಂದಿ ನದಿ ತೀರದಲ್ಲಿ ಮೋಟಾರು ಯಂತ್ರ, ಪೈಪ್‌ಗಳು, ನೀರಿನಲ್ಲಿ ಕೊಚ್ಚಿ ಹೋಗಿವೆ. ನದಿ ಪ್ರವಾಹ ಏರುತ್ತಲಿದ್ದು, ನದಿ ಪಾತ್ರದ ಗ್ರಾಮಗಳ ಮನೆಗಳಿಗೆ ನೀರು ನುಗ್ಗುವ ಸಂಭವವಿದೆ.

ಮಂಗಳವಾರ ಬೆಳಿಗ್ಗೆ ಉಪವಿಭಾಗಾಧಿಕಾರಿ ಜಿ.ನಜ್ಮಾ ಹಾಗೂ ತಹಶೀಲ್ದಾರ್ ಗುರುಬಸವರಾಜ ಮತ್ತು ಕಂದಾಯ ಸಿಬ್ಬಂದಿ ನದಿ ತೀರದ ಹಲವಾಗಲು ಹಾಗೂ ಗರ್ಭಗುಡಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ನದಿಯಲ್ಲಿ ಮೀನುಗಾರರು ಮೀನು ಹಿಡಿಯಲು ಹೋಗಬಾರದು. ನದಿ ಪಾತ್ರದಲ್ಲಿರುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಉಪವಿಭಾಗಾಧಿಕಾರಿ ನಜ್ಮಾ ಸೂಚಿಸಿದರು. ಇದೇ ವೇಳೆ ಕೆಲವು ಮೀನುಗಾರರು ತೆಪ್ಪ ಹಾಗೂ ಬಲೆಗಳು ನೀರಿಗೆ ಕೊಚ್ಚಿ ಹೋಗಿದ್ದು, ಪರಿಹಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು. ಮೀನುಗಾರರಿಗೆ ತಮಗಾಗಿರುವ ನಷ್ಟ ಕುರಿತು ಮನವಿ ಸಲ್ಲಿಸಿದ್ದಲ್ಲಿ ಮೀನುಗಾರಿಕೆ ಇಲಾಖೆಯಿಂದ ಪರಿಹಾರ ನೀಡಲಾಗುವುದು ಎಂದು ಎಸಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.