ADVERTISEMENT

₹ 7,500ರಂತೆ ಆರು ತಿಂಗಳು ನೆರವು ನೀಡಲು ಒತ್ತಾಯ, ಹಮಾಲಿ ಕಾರ್ಮಿಕರ ಮುಷ್ಕರ ಆರಂಭ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:14 IST
Last Updated 24 ಸೆಪ್ಟೆಂಬರ್ 2020, 3:14 IST
ದಾವಣಗೆರೆ ಎಪಿಎಂಸಿಯಲ್ಲಿ ಹಮಾಲಿ ಕಾರ್ಮಿಕರು ಎರಡು ದಿನಗಳ ಮುಷ್ಕರವನ್ನು ಬುಧವಾರ ಆರಂಭಿಸಿದರು
ದಾವಣಗೆರೆ ಎಪಿಎಂಸಿಯಲ್ಲಿ ಹಮಾಲಿ ಕಾರ್ಮಿಕರು ಎರಡು ದಿನಗಳ ಮುಷ್ಕರವನ್ನು ಬುಧವಾರ ಆರಂಭಿಸಿದರು   

ದಾವಣಗೆರೆ: ಕೊರೊನಾದಿಂದ ಸಂಕಷ್ಟಕ್ಕೆ ಈಡಾದ ಎಪಿಎಂಸಿ, ಗ್ರಾಮೀಣ ಬಜಾರ, ಮಿಲ್ ಗೋಡೌನ್, ವೇರಹೌಸ್, ಗೂಡ್ಸ್‌ಶೆಡ್, ಟ್ಯ್ರಾನ್ಸ್‌ಪೋರ್ಟ್‌, ಬಂದರುಗಳಲ್ಲಿರುವ ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ಮತ್ತು ಆಹಾರ ಧಾನ್ಯಗಳ ಕಿಟ್‌ ವಿತರಣೆ ಮಾಡಿಲ್ಲ. ಅವರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಹಮಾಲಿ ಕಾರ್ಮಿಕರು ಎರಡು ದಿನಗಳ ಮುಷ್ಕರವನ್ನು ಬುಧವಾರ ಆರಂಭಿಸಿದ್ದಾರೆ.

ನನೆಗುದಿಗೆ ಬಿದ್ದಿರುವ ವಸತಿ ಯೋಜನೆ ಜಾರಿಗೆ ಕ್ರಮವಹಿಸಬೇಕು. ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಮಾಡಬೇಕು. ಕೊರೊನಾದಿಂದಾಗಿ ಸಂಕಷ್ಟಕ್ಕೀಡಾದ ಎಲ್ಲಾ ಹಮಾಲಿ ಕಾರ್ಮಿಕರಿಗೆ ತಿಂಗಳಿಗೆ ₹ 7,500 ರಂತೆ ಆರು ತಿಂಗಳ ಆರ್ಥಿಕ ನೆರವು ನೀಡಬೇಕು. ಆರು ತಿಂಗಳಿಗಾಗುವಷ್ಟು ರೇಷನ್ ಕಿಟ್ ನೀಡಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೂಡಲೇ ವಾಪಸ್ಸ ಪಡೆಯಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಭವಿಷ್ಯನಿಧಿ ಯೋಜನೆ, ಪಿಂಚಣಿ ಜಾರಿಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚಿಸಿದ ಕೂಲಿಯೊಂದಿಗೆ ಕೆಲಸ 200 ದಿನಗಳಿಗೆ ಹೆಚ್ಚಿಸಬೇಕು, ನಗರ ಪ್ರದೇಶಗಳ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು. ಪ್ರಧಾನಮಂತ್ರಿ ಜೀವನ ಬಿಮಾ ಮತ್ತು ಸುರಕ್ಷಾ ವಿಮಾ ಯೋಜನೆಗಳಿಗೆ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ಕಾರ್ಯ ಪ್ರಾರಂಭಿಸಬೇಕು.

ADVERTISEMENT

ಎಪಿಎಂಸಿ ಮಾರುಕಟ್ಟೆಯಲ್ಲಿ ಇರುವ ಶ್ರಮಿಕರ ಭವನಕ್ಕೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಉಚಿತ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕು. ಕುಡಿಯಲು ಉಚಿತ ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ಸಿ.ಐ.ಟಿ.ಯು. ಸಂಯೋಜಿತ ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ತಿಮ್ಮಣ್ಣ, ಕಾರ್ಯದರ್ಶಿ ಗುಡ್ಡಪ್ಪ, ಲೋಡಿಂಗ್ ಮತ್ತು ಅನ್ ಲೋಡಿಂಗ್ ಹಮಾಲಿ ಸಂಘದ ಹನುಮಂತನಾಯ್ಕ, ಎ.ಪಿ.ಎಂ.ಸಿ. ಹಮಾಲರ ಸಂಘದ ವೆಂಕಟೇಶ, ಹಾಲೇಶನಾಯ್ಕ, ರುದ್ರಾನಾಯ್ಕ, ಲಿಂಗರಾಜು ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.