ADVERTISEMENT

ದಾವಣಗೆರೆ | ಕೈಮಗ್ಗ ಉತ್ಪನ್ನ ವಿದೇಶಕ್ಕೂ ತಲುಪಲಿ; ಜಿಲ್ಲಾ ಪಂಚಾಯಿತಿ ಸಿಇಓ ಅಭಿಮತ

11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:45 IST
Last Updated 8 ಆಗಸ್ಟ್ 2025, 4:45 IST
ದಾವಣಗೆರೆಯ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ನಡೆದ ಕೈಮಗ್ಗ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಚರಕದಿಂದ ನೂಲು ತೆಗೆದರು
ದಾವಣಗೆರೆಯ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ನಡೆದ ಕೈಮಗ್ಗ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಚರಕದಿಂದ ನೂಲು ತೆಗೆದರು   
ಜಿಲ್ಲೆಯ ನಾಲ್ವರು ನೇಕಾರರಿಗೆ ರಾಷ್ಟ್ರೀಯ ಸನ್ಮಾನ | ಸ್ವದೇಶಿ ಚಳುವಳಿ ನೆನಪಿಗಾಗಿ ಕೈಮಗ್ಗ ದಿನಾಚರಣೆ | ಕೈಮಗ್ಗ ಉದ್ದಿಮೆ ಸ್ಥಾಪನೆಗೆ ಶೇ 90ರಷ್ಟು ಸಬ್ಸಿಡಿ

ದಾವಣಗೆರೆ: ಜಿಲ್ಲೆಯಲ್ಲಿ ಉತ್ಪಾದಿಸುವ ಬೆಡ್‌ಶೀಟ್, ಟವೆಲ್, ಕರವಸ್ತ್ರ, ಲುಂಗಿ, ಹತ್ತಿ ಬಟ್ಟೆಗಳ ಕೌಶಲ್ಯ ಮತ್ತು ಕುಸುರಿ ಕಾರ್ಯಕ್ಕೆ ದೇಶದಲ್ಲಿ ಮಾನ್ಯತೆ ಸಿಗಬೇಕು. ಕೈಮಗ್ಗ ಉತ್ಪನ್ನಗಳನ್ನು ವಿದೇಶಕ್ಕೂ ರಫ್ತು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್ ಸಲಹೆ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೈಮಗ್ಗ ಮತ್ತು ಜವಳಿ ಇಲಾಖೆ, ನೇಕಾರರ ಕೇಂದ್ರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಚರಕದಿಂದ ನೂಲುವ ಗುಡಿ ಕೈಗಾರಿಕೆ ದೇಶದ ಅಸ್ತಿತ್ವ. ಕೈಮಗ್ಗ ವಲಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ. ನೇಕಾರರಿಗೆ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಹಾಯಧನ ಒದಗಿಸಿ ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕೆ ಒಲವು ಹೆಚ್ಚಾಗಿದೆ. ಜಿಲ್ಲೆಯ ನಾಲ್ವರು ನೇಕಾರರನ್ನು ರಾಷ್ಟ್ರಮಟ್ಟದಲ್ಲಿ ಸನ್ಮಾನಿಸಲಾಗುತ್ತಿದೆ’ ಎಂದರು.

ADVERTISEMENT

‘ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶಿ ಉತ್ಪನ್ನಗಳ ಹಾವಳಿ, ದುಪ್ಪಟ್ಟು ದರದ ಉಪಟಳ ಹೆಚ್ಚಾಗಿತ್ತು. ವಿದೇಶಿ ಉತ್ಪನ್ನ ಬಹಿಷ್ಕರಿಸಿ ದೇಸಿ ಕೈಮಗ್ಗದ ಉತ್ಪನ್ನಗಳನ್ನು ಉತ್ತೇಜಿಸಲು ಗಾಂಧೀಜಿ 1905 ಆ.7ರಂದು ಸ್ವದೇಶಿ ಚಳುವಳಿ ಆರಂಭಿಸಿದರು. ಈ ದಿನದ ನೆನಪಿಗಾಗಿ ಪ್ರತಿ ವರ್ಷ ದೇಶದಲ್ಲಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತಿದೆ’ ಎಂದು ಹೇಳಿದರು.

‘ಕೈಮಗ್ಗ ವಲಯ ಸುಮಾರು 120 ವರ್ಷಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಈ ದಿನಾಚರಣೆಯ ಮೂಲಕ ಭಾರತೀಯ ಕೈಮಗ್ಗ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಕೈಮಗ್ಗದ ಮಹತ್ವ ಮತ್ತು ಆರ್ಥಿಕ ಕೊಡುಗೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ’ ಎಂದರು.

‘ನೇಕಾರರು ಉದ್ದಿಮೆಗಳನ್ನು ಸ್ಥಾಪಿಸಿ ಕಲೆ, ಕೌಶಲ್ಯಗಳ ಮೂಲಕ ಸಮಾಜದ ಮುನ್ನೆಲೆಗೆ ಬರಬೇಕು. ಇದರಿಂದ ದೇಶದಲ್ಲಿ ನೇಕಾರರಿಗೆ, ನೂಲುವ ಮತ್ತು ಚರಕ ಕೈಮಗ್ಗ ಸಮುದಾಯದ ಕುಟುಂಬಗಳಿಗೆ ಆರ್ಥಿಕ, ಸಾಮಾಜಿಕ ಭದ್ರತೆ ಸಿಗುತ್ತದೆ. ಸ್ಥಳೀಯವಾಗಿ ಉದ್ಯೋಗ ಅವಕಾಶಗಳು ದೊರೆಯಲಿವೆ. ಮೈಸೂರು ರೇಷ್ಮೆ, ಬನಾರಸ್ ಸೀರೆ, ಧೋತಿ, ಪಂಚೆ ಸೇರಿದಂತೆ ಇತರ ಉತ್ಪನ್ನಗಳನ್ನು ಕಲಾತ್ಮಕವಾಗಿ ತಯಾರಿಸಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದ 4ನೇ ಕೈಮಗ್ಗ ಗಣತಿಯ ಪ್ರಕಾರ 27,175 ಜನ ಮಗ್ಗಗಳಲ್ಲಿ ಹಾಗೂ 27,616 ಜನರು ಮಗ್ಗ ಪೂರ್ವ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 215 ಜನ ಕೈಮಗ್ಗಗಳಲ್ಲಿ ಹಾಗೂ 110 ಜನರು ಮಗ್ಗ ಪೂರ್ವ ನೇಯ್ಗೆ ಚಟುವಟಿಕೆಗಳಲ್ಲಿದ್ದಾರೆ’ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಕುಂಬಾರ ಹೇಳಿದರು.

‘ನೂಲುವಿಕೆ, ಕೈಮಗ್ಗ, ಚರಕ ಸುತ್ತುವವರು ಸಿಗುವುದು ಕಷ್ಟ. ಸಿಗುವಂತಹವರಿಗೆ ತರಬೇತಿ ನೀಡಿ ಉದ್ದಿಮೆ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ನೇಕಾರ ಸಮ್ಮಾನ್, ವಿಶೇಷ ಪ್ಯಾಕೇಜ್, ವಿದ್ಯುತ್ ಮಗ್ಗ ಹೀಗೆ ವಿವಿಧ ಯೋಜನೆಗಳಡಿ ಉದ್ದಿಮೆ ಸ್ಥಾಪನೆಗೆ ಶೇ 90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ’ ಎಂದರು.

ನೇಕಾರ ಸೇವಾ ಕೇಂದ್ರದ ಉಪನಿರ್ದೇಶಕ ಪ್ರಭಾಕರ್, ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಯುಗೇಂದ್ರ ದ್ವಿತಿ, ಕೇಂದ್ರ ರೇಷ್ಮೆ ಮಂಡಳಿ ಸಹಾಯಕ ಕಾರ್ಯದರ್ಶಿ ಹೇಮಾಶ್ರೀ, ನೇಕಾರ ಸಮಾಜ ಮುಖಂಡ ಶ್ರೀಕಾಂತ್ ಹಾಜರಿದ್ದರು.

ಖಾದಿ ಉತ್ಪಾದನೆಗೆ ಸಾಲ ಮತ್ತು ಸಹಾಯಧನ ನೀಡಬೇಕು. ನೇಕಾರ ಸಮುದಾಯ ಆರ್ಥಿಕವಾಗಿ ಮುನ್ನೆಗೆಲೆ ಬಂದು ಸದೃಢವಾಗಬೇಕು
ಶೀಲವಂತ ಶಿವಕುಮಾರ್ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.