
ಪ್ರಜಾವಾಣಿ ವಾರ್ತೆ
ಜಗಳೂರು: ತಾಲ್ಲೂಕಿನ ಹನುಮಂತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣ ನೀರಿನಿಂದ ಆವೃತವಾಗಿ ಕೆಸರು ಗದ್ದೆಯಾಗಿದ್ದು, ಕಲಿಕೆಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ ಪೋಷಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಎರಡು ವರ್ಷಗಳಿಂದ ಅಂತರ್ಜಲ ಹೆಚ್ಚಳವಾಗಿ ಶಾಲಾ ಆವರಣದಲ್ಲಿನ ಕೊಳವೆಬಾವಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಆಟದ ಮೈದಾನ ಜಲಾವೃತಗೊಂಡಿದೆ. ಇಡೀ ಶಾಲಾ ಆವರಣ ದುರ್ವಾಸನೆಯಿಂದ ಕೂಡಿದ್ದು, ಸೊಳ್ಳೆಗಳ ತಾಣವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳು ಪ್ರತಿನಿತ್ಯ ಕೊಠಡಿಗಳಿಗೆ ತೆರಳಲು ದಾರಿ ಇಲ್ಲದೆ ನಿತ್ಯ ಪರದಾಡುವಂತಾಗಿದೆ. ಇಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ. ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ತರಗತಿಗಳು ಸೋರುತ್ತಿವೆ. ನಮ್ಮ ಗೋಳು ಕೇಳುವವರಿಲ್ಲ ಎಂದು ವಿದ್ಯಾರ್ಥಿಗಳಾದ ತಿಪ್ಪೇಸ್ವಾಮಿ, ಓಬಳೇಶ್, ಗೌಸಿಯಾ ಅಳಲು ತೋಡಿಕೊಂಡರು.
ಹಲವು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಸಮಸ್ಯೆಗಳನ್ನು ಬಗೆಹರಿಸುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯಲ್ಲಿ 143 ವಿದ್ಯಾರ್ಥಿಗಳು ಓದುತ್ತಿದ್ದಾರೆ. 4 ಜನ ಶಿಕ್ಷಕರು ಒಬ್ಬ ಅತಿಥಿ ಶಿಕ್ಷಕರಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಎಂದು ಶಾಲಾ ಮುಖ್ಯ ಶಿಕ್ಷಕಿ ಸುಜಾತರೆಡ್ಡಿ ಪೋಷಕರಿಗೆ ಮನವಿ ಮಾಡಿದರು.
ಸ್ಥಳಕ್ಕೆ ಭೇಟಿ ನೀಡಿದ ಬಿಇಒ ಹಾಲಮೂರ್ತಿ, ‘ಶಿಕ್ಷಣ ಇಲಾಖೆಯಲ್ಲಿ ಅನುದಾನ ಕೊರತೆ ಇದೆ. ತಾಲ್ಲೂಕು ಪಂಚಾಯಿತಿ ಇಲಾಖೆಯಡಿ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯಕ್ಕೆ ಗ್ರಾಮದಲ್ಲಿರುವ ಹಳೇ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು
ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ, ಇಸಿಓ ಬಸವರಾಜಪ್ಪ, ಬಿಆರ್‌ಪಿ ಕೊಡದೇಶ ಕುಮಾರ್, ಜಾವಿದ್ ಸಿಆರ್‌ಪಿ ಮಂಜಣ್ಣ, ಲೋಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.