ADVERTISEMENT

ಹರಿಹರ–ದೇವರಗುಡ್ಡ ಜೋಡಿ ಹಳಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 2:32 IST
Last Updated 4 ಜನವರಿ 2021, 2:32 IST

ದಾವಣಗೆರೆ: ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಹರಿಹರ ಮತ್ತು ದೇವರಗುಡ್ಡ ನಿಲ್ದಾಣಗಳ ನಡುವೆ ಜೋಡಿ ಹಳಿ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಹುಬ್ಬಳ್ಳಿ– ಚಿಕ್ಕಜಾಜೂರು ನಡುವಿನ 190 ಕಿಲೋಮೀಟರ್‌ ದ್ವಿಪಥೀಕರಣ ಯೋಜನೆಯ ಭಾಗವಾಗಿ ಈ ಕಾಮಗಾರಿ ನಡೆಸಲಾಗಿದೆ.

2018ರಲ್ಲಿ ಚಿಕ್ಕಜಾಜೂರು-ತೋಳಹುಣಿಸೆ ನಡುವೆ 37 ಕಿ.ಮೀ,ದಾವಣಗೆರೆ-ಹರಿಹರ ನಡುವೆ2019ರಲ್ಲಿ 13 ಕಿ.ಮೀ ಕಾಮಗಾರಿ ಪೂರ್ಣಗೊಂಡಿತ್ತು. ಈಗ ಹರಿಹರ–ದೇವರಗುಡ್ಡ ನಡುವೆ 31 ಕಿಲೋಮೀಟರ್‌ ಕಾಮಗಾರಿ ನಡೆದಿರುವುದರಿಂದ ಒಟ್ಟು 81 ಕಿಲೋಮೀಟರ್‌ ದ್ವಿಪಥವಾದಂತಾಗಿದೆ.

ರೈಲ್ವೆ ಸುರಕ್ಷತೆ ಆಯುಕ್ತರು(ಸಿಆರ್‌ಎಸ್)ಈ ಡಬಲ್ ಲೈನ್‌ನ ಪರಿಶೀಲನೆಯನ್ನು ನಡೆಸಿದ್ದಾರೆ. ನಾನ್ಇಂಟರ್‌ಲಾಕಿಂಗ್ ಮತ್ತು ಇಂಟರ್‌ಲಾಕಿಂಗ್ ಕಾರ್ಯಗಳು ಪೂರ್ಣಗೊಂಡ ನಂತರ, ಹರಿಹರ ಮತ್ತು ದೇವರಗುಡ್ಡ ನಿಲ್ದಾಣದ ನಡುವೆ ಜ.2ರಂದು ಜೊಡಿ ಹಳಿ ಮಾರ್ಗವನ್ನು ಸಂಚಾರಕ್ಕೆ ತೆರೆಯಲಾಗಿದೆ.

ADVERTISEMENT

ಹರಿಹರ ಯಾರ್ಡಿನಲ್ಲಿ ಒಂದು ಹೆಚ್ಚುವರಿ ಚಾಲನಾ ಹಳಿ ಮತ್ತು ಒಂದು ಹೆಚ್ಚುವರಿ ಸ್ಥಿರ ಹಳಿ ಮತ್ತು ಎರಡು ಪೂರ್ಣ ಉದ್ದದ ಶಂಟಿಂಗ್ ನೆಕ್‌ಗಳನ್ನು ನಿರ್ಮಿಸಲಾಗಿದೆ. 2.5 ಕಿ.ಮೀ ಯಾರ್ಡ್ ಮರುನವೀಕರಣ ಮಾಡಲಾಗಿದೆ.ಒಟ್ಟು 46 ಪಾಯಿಂಟುಗಳನ್ನು ಅಳವಡಿಸಲಾಗಿದೆ. ದೇವರಗುಡ್ಡದಲ್ಲಿ ಎರಡು ಹೆಚ್ಚುವರಿ ಚಾಲನಾ ಹಳಿಗಳನ್ನು ಸೇರಿಸಲಾಯಿತು. ಕುಮಾರಪಟ್ಟಣಂ, ಚಲಗೇರಿ ಮತ್ತು ರಾಣಿಬೆನ್ನೂರಿನಲ್ಲಿ ತಲಾ ಒಂದು ಹೆಚ್ಚುವರಿ ಹಳಿಯನ್ನು ನಿರ್ಮಿಸಲಾಯಿತು.

ಚಲಗೇರಿ ಯಾರ್ಡಿನಲ್ಲಿ 450 ಮೀಟರ್‌ ಉದ್ದದ 2 ಹೊಸ ಹೈ ಲೆವೆಲ್ ಐಲಾಂಡ್ ಪ್ಲಾಟ್‌ಫಾರಂಗಳು ಮತ್ತು ದೇವರಗುಡ್ಡ ಯಾರ್ಡಿನಲ್ಲಿ 540 ಮೀಟರ್‌ ಉದ್ದದ ಹೈ ಲೆವೆಲ್ ಎಂಡ್ ಪ್ಲಾಟ್‌ಫಾರಂ ನಿರ್ಮಿಸಲಾಗಿದೆ. ಹರಿಹರದಲ್ಲಿ 170 ಮೀ ಉದ್ದದ ಎರಡು ಪ್ಲಾಟ್‌ಫಾರಂಗಳ ವಿಸ್ತರಣೆ, ಚಲಗೇರಿಯಲ್ಲಿ 120 ಮೀ ಉದ್ದದ ಒಂದು ಪ್ಲಾಟ್‌ಫಾರಂ, ಮತ್ತು ರಾಣೆಬೆನ್ನೂರಿನಲ್ಲಿ ತಲಾ 100 ಮೀ ಉದ್ದದ ಎರಡು ಪ್ಲಾಟ್‌ಫಾರಂಗಳನ್ನು ವಿಸ್ತರಿಸಲಾಗಿದೆ. ಟ್ರೋಲಿಗಳು, ಗಾಲಿ ಕುರ್ಚಿಗಳ ಚಲನೆಗಾಗಿ ಪ್ಲಾಟ್‌ಫಾರಂನ ಎರಡೂ ಬದಿಯಲ್ಲಿರುವ ಟ್ರಾಲಿ ಮಾರ್ಗವನ್ನು ಕಾಂಕ್ರೀಟ್‌ನಿಂದ ಸುಗಮಗೊಳಿಸಲಾಗಿದೆ. ವಿಭಾಗದಲ್ಲಿ ಆರ್‌ಒಬಿ, ಆರ್‌ಯುಬಿ ನಿರ್ಮಿಸಿ 208, 213, 219, 221 ಈ ನಾಲ್ಕು ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನುಮುಚ್ಚಲಾಗಿದೆ.

ಲೆವೆಲ್ ಕ್ರಾಸಿಂಗ್ ಗೇಟ್‌ 77 ಮತ್ತು 82ರಲ್ಲಿ ಎರಡು ಹೊಸ ಆರ್‌ಯುಬಿಗಳನ್ನು ಸಹ ನಿರ್ಮಿಸಲಾಗಿದೆ. ತುಂಗಭದ್ರಾ ನದಿಯಲ್ಲಿ ನಿರ್ಮಿಸಲಾದ 16 ಸ್ಪ್ಯಾನ್‌ನ ಒಂದು ಪ್ರಮುಖ ಸೇತುವೆ ನಿರ್ಮಾಣಗೊಂಡಿದೆ. ಈ ಯೋಜನೆಯ ಒಟ್ಟು ಮೊತ್ತ ₹ 298 ಕೋಟಿ ಎಂದು ನೈರುತ್ಯ ರೈಲ್ವೆ ಮುಖ್ಯ ಜನಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.