ಹರಿಹರ: ನಗರದ ನದಿ ತೀರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ಮಂಗಳವಾರ ನೂರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು.
ಉತ್ತರಾಧನೆ ನಿಮಿತ್ತ ಮಧ್ಯಾಹ್ನ 12ಕ್ಕೆ ರಾಘವೇಂದ್ರ ಸ್ವಾಮಿ ವೃಂದಾವನ ಟ್ರಸ್ಟ್ ಗೌರವ ಅಧ್ಯಕ್ಷ ಸಂಪಣ್ಣ ಮುತಾಲಿಕ್ ಹಾಗೂ ಉದ್ಯಮಿ ಎಚ್.ಎನ್.ಬಸವರಾಜ್ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಆಲಂಕೃತ ರಥವನ್ನು ಮಠದ ಸುತ್ತ ಒಂದು ಸುತ್ತು ಎಳೆಯಲಾಯಿತು. ಮಹಿಳೆಯರೂ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ತೇರನ್ನೆಳೆದು ಪುನೀತರಾದರು.
ಮಹಿಳೆಯರ ತಂಡ ಪ್ರದರ್ಶಿಸಿದ ಕೋಲಾಟ ಹಾಗೂ ಮಠದ ಆವರಣದಲ್ಲಿ ಚಿತ್ರಿಸಿದ್ದ ಬೃಹತ್ ಆಕಾರದ ರಂಗೋಲಿ ಜನಮನ ಸೆಳೆದವು.
ಸತ್ಯನಾರಾಯಣಸ್ವಾಮಿ ಪೂಜೆ, ಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯ ಮೂಲಕ ಮೂರು ದಿನಗಳ ಉತ್ಸವ ಸಂಪನ್ನಗೊಂಡಿತು.
ರಾಘವೇಂದ್ರ ಸ್ವಾಮಿ ವೃಂದಾವನ ಟ್ರಸ್ಟ್ ಅಧ್ಯಕ್ಷ ಎ.ಬಿ.ಬಸವರಾಜ್, ಕಾರ್ಯದರ್ಶಿ ಸುಕುಮಾರ್, ಉಪಾಧ್ಯಕ್ಷ ಬಾಬಣ್ಣ ಶೆಟ್ಟಿ, ಖಜಾಂಚಿ ರಂಗನಾಥ ಎಸ್., ಪದಾಧಿಕಾರಿಗಳಾದ ರಾಜೂ ನಾಯ್ಡು, ಉಮೇಶ್ ರಾವ್, ಪ್ರಕಾಶ ಕೋಳೂರು, ಶ್ರೀಧರ್ ಶೆಟ್ಟಿ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.