ಹರಿಹರ: ಶೇ 90ರಷ್ಟು ನೀರಾವರಿ ಪ್ರದೇಶ ಹೊಂದಿರುವ ತಾಲ್ಲೂಕಿನಲ್ಲಿ ಭತ್ತದ ಕಟಾವು ಕಾರ್ಯ ಭರದಿಂದ ಸಾಗಿದ್ದು, ಅದರ ಜೊತೆಗೆ ಭತ್ತದ ಹುಲ್ಲಿನ (ಮೇವು) ಮಾರಾಟ ಪ್ರಕ್ರಿಯೆಗೂ ವೇಗ ದೊರೆತಿದೆ.
ಈ ಬಾರಿಯ ಭರಪೂರ ಮಳೆ ಹಾಗೂ ಬಹುತೇಕ ಕೀಟ ಬಾಧೆಯ ಕಿರಿಕಿರಿ ಇಲ್ಲದ್ದರಿಂದ ಭತ್ತದ ಬೆಳೆಯು ಬಂಪರ್ ಆಗಿ ಬೆಳೆದಿದೆ. ತಾಲ್ಲೂಕಿನಲ್ಲಿ 23,500 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತ ಬಿತ್ತನೆಯಾಗಿತ್ತು.
ಈ ಪೈಕಿ ಶೇ 50ರಷ್ಟು ಪ್ರದೇಶದಲ್ಲಿ ಭತ್ತದ ಕಟಾವು ಕಾರ್ಯ ಪೂರ್ಣಗೊಂಡಿದೆ. ಉತ್ತಮ ಬೆಳೆಯಿಂದಾಗಿ ಭತ್ತದ ಹುಲ್ಲಿನ ಮೇವು ಕೂಡ ಭರಪೂರವಾಗಿದೆ. ಭತ್ತದ ಕಾಳುಗಳನ್ನು ತೆಗೆದ ನಂತರ ಉಳಿಯುವ ಹುಲ್ಲಿನ ರಾಶಿ ಮಾಡಿ, ಪೆಂಡಿ ಕಟ್ಟಿ ಟ್ರ್ಯಾಕ್ಟರ್‌ಗಳಲ್ಲಿ ತಾಲ್ಲೂಕು ಹಾಗೂ ಇತರೆ ತಾಲ್ಲೂಕುಗಳಿಗೂ ಸಾಗಣೆ ಮಾಡುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ.
ಹೆಚ್ಚಿನ ರೈತರು ಹುಲ್ಲಿನ ರಾಶಿಯನ್ನು ಬೇಲರ್ ಮೂಲಕ ಪೆಂಡಿ ಮಾಡಿ ಸಾಗಿಸುತ್ತಿದ್ದರೆ, ಕೆಲವರು ರಾಶಿ ರೂಪದಲ್ಲೇ ಸಾಗಣೆ ಮಾಡಿಸಿಕೊಳ್ಳುತ್ತಿದ್ದಾರೆ. ಒಂದು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ 35ರಿಂದ 40 ಹುಲ್ಲಿನ ಪೆಂಡಿ ಲೋಡ್ ಮಾಡಲಾಗುತ್ತಿದೆ.
ತಾಲ್ಲೂಕಿನ ಕೊಂಡಜ್ಜಿ, ಸಾರಥಿ, ಬುಳ್ಳಾಪುರ, ಹೊಟಿಗೇನಹಳ್ಳಿ, ಕುರುಬರಹಳ್ಳಿ, ಸಾರಥಿ, ದೀಟೂರು, ಪಾಮೇನಹಳ್ಳಿ, ಗಂಗನರಸಿ, ಗುತ್ತೂರು, ದೊಗ್ಗಳ್ಳಿ, ಹಲಸಬಾಳು, ರಾಜನಹಳ್ಳಿ, ಬಿಳಸನೂರು, ನಂದಿಗಾವಿ, ಎಳೆಹೊಳೆ, ಧೂಳೆಹೊಳೆ, ಹುಲಗಿನಹೊಳೆ, ಭಾನುವಳ್ಳಿ, ಲಕ್ಕಶೆಟ್ಟಿಹಳ್ಳಿ, ವಾಸನ, ನಂದಿಗುಡಿ, ಕಮಲಾಪುರ ಸೇರಿ ಮಲೇಬೆನ್ನೂರು ಸುತ್ತಲಿನ ಭದ್ರಾ ಕಾಲುವೆ ವ್ಯಾಪ್ತಿಯ ಗ್ರಾಮಗಳ ವ್ಯಾಪ್ತಿಯಲ್ಲಿ ಭತ್ತದ ಹುಲ್ಲಿನ ಮಾರಾಟ ಜೋರಾಗಿ ನಡೆಯುತ್ತಿದೆ.
‘ಮೆಕ್ಕೆಜೋಳ, ರಾಗಿ ಬೆಳೆಯ ರವದಿ, ಸೊಪ್ಪಿನೊಂದಿಗೆ ದನಕರುಗಳಿಗೆ ಮೇವಾಗಿ ನೀಡಲು ಹಾಗೂ ಮೆಕ್ಕೆಜೋಳ, ರಾಗಿ ರವದಿಯ ಬಣವಿಗೆ ಮೇಲೆ ಹಾಸಲು ಭತ್ತದ ಹುಲ್ಲಿನ ಅಗತ್ಯವೂ ಇರುತ್ತದೆ. ಹೀಗಾಗಿ ಪ್ರತಿ ವರ್ಷದಂತೆ ತಾಲ್ಲೂಕಿನಿಂದ ಹುಲ್ಲಿನ ಮೇವು ಇತರೆ ಪ್ರದೇಶಗಳಿಗೆ ಸಾಗಣೆ ಮಾಡಲಾಗುತ್ತಿದೆ’ ಎಂದು ಹೊಳೆಸಿರಿಗೆರೆಯ ಪ್ರಗತಿಪರ ರೈತ ಕುಂದೂರು ಮಂಜಪ್ಪ ಹೇಳಿದರು.
‘ಉತ್ತಮ ಮಳೆಯಿಂದಾಗಿ ಭತ್ತ ಬೆಳೆ ಬಂಪರ್ ಆಗಿದೆ. ಹುಲ್ಲಿನ ಗುಣಮಟ್ಟವೂ ಚೆನ್ನಾಗಿದೆ. ಉತ್ತಮ ಬೆಳೆಯಿಂದಾಗಿ ಭತ್ತದ ಖರೀದಿ ದರ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಇದೆ. ಅಲ್ಲಿ ರೈತರಿಗಾಗುತ್ತಿರುವ ನಷ್ಟವನ್ನು ಅಲ್ಪ ಪ್ರಮಾಣದಲ್ಲಿ ಹುಲ್ಲಿನ ಮಾರಾಟದ ಮೂಲಕ ಸರಿದೂಗಿಸಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಕೃಷಿ ಸಹಾಯಕ ನಿರ್ದೇಶಕ ಎ.ನಾರನಗೌಡ.
ಈ ಬಾರಿಯ ಉತ್ತಮ ಮಳೆ ಬೆಳೆಯಿಂದಾಗಿ ಮೇವಿನ ಉತ್ಪತ್ತಿ ಅಧಿಕವಾಗಿದ್ದು ಹೈನುಗಾರಿಕೆಗೆ ಅನುಕೂಲವಾಗಿದೆ. ಮೇವಿನ ಕೊರತೆಯ ಕಿರಿಕಿರಿ ತಪ್ಪಿದಂತಾಗಿದೆ.ಡಾ.ಟಿ.ಕೆ.ಸಿದ್ದೇಶ್ ಮುಖ್ಯ ಪಶುವೈದ್ಯಾಧಿಕಾರಿ ಹರಿಹರ
₹200ಕ್ಕೆ ಒಂದು ಪೆಂಡಿ
ಬೇಲರ್‌ನಲ್ಲಿ ಹುಲ್ಲಿನ ಒಂದು ಪೆಂಡಿ ಮಾಡಲು ₹ 40 ಶುಲ್ಕ ತಗಲುತ್ತದೆ. ರೈತರು ₹ 200ರ ಆಸುಪಾಸಿನಂತೆ ಒಂದು ಪೆಂಡಿ ಹುಲ್ಲಿಗೆ ದರ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಹುಲ್ಲನ್ನು ಪೆಂಡಿ ಮಾಡುವ ಬೇಲರ್ ಯಂತ್ರದವರಿಗೆ ಹಾಗೂ ಸಾಗಣೆ ಮಾಡುವ ಟ್ರ್ಯಾಕ್ಟರ್ ಮಾಲೀಕರು ಹಾಗೂ ಚಾಲಕರಿಗೂ ಉತ್ತಮ ಆದಾಯ ಬರುತ್ತಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.