
ಹರಿಹರ: ತಾಲ್ಲೂಕಿನ ಸಾರಥಿ ಗ್ರಾಮ ಪಂಚಾಯಿತಿಯ ಚಿಕ್ಕಬಿದರಿ ಗ್ರಾಮದ ತುಂಗಭದ್ರಾ ನದಿ ಸೇರುವ ಜಾಗವನ್ನು ‘ಕನ್ನಡದೂರು’ ಎಂದು ಹೆಸರಿಸಲಾಗಿದೆ ಎಂದು ಸಾರಥಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರುಶುರಾಮ ಅವರು ಅಧಿಕೃತ ಪತ್ರ ನೀಡಿದ್ದಾರೆ ಎಂದು ‘ನಾವು ದ್ರಾವಿಡ ಕನ್ನಡಿಗರು ಚಳವಳಿ’ ಸಂಘಟನೆಯ ಮುಖಂಡ ಮಂಡ್ಯದ ಅಬಿ ಒಕ್ಕಲಿಗ ತಿಳಿಸಿದ್ದಾರೆ.
‘ಕನ್ನಡದೂರು ಭೌಗೋಳಿಕ ಪ್ರದೇಶವು ದಕ್ಷಿಣ, ಉತ್ತರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶವು ಸಂದಿಸುವ ಜಾಗವಾಗಿದೆ. ನ.1ರಂದು ನದಿ ದಡದಲ್ಲಿ ರಾಜ್ಯೋತ್ಸವ ಆಚರಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಿವು ಮೂಡಿಸಲಾಗಿತ್ತು. ಡಿ.6ರಂದು ದ್ರಾವಿಡ ಕನ್ನಡಿಗರು ಚಳವಳಿಯ ನೇತೃತ್ವದಲ್ಲಿ ಸ್ಥಳೀಯರನ್ನು ಒಳಗೊಂಡು ಸಾರಥಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಡಿ.29 ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅಂಗೀಕಾರ ದೊರೆತಿದೆ’ ಎಂದು ಹೇಳಿದ್ದಾರೆ.
‘ಮೊದಲ ಬಾರಿಗೆ ಕನ್ನಡದ ಹೆಸರಿನಲ್ಲಿ ಒಂದು ಊರನ್ನು ನಮ್ಮ ಸಂಸ್ಥೆಯು ಸ್ಥಳೀಯರ ಸಹಕಾರದಿಂದ ಹುಟ್ಟು ಹಾಕಿದೆ. ಈ ಊರಿನ ಅಭಿವೃದ್ಧಿಗೆ ಕನ್ನಡಿಗರೆಲ್ಲರ ಸಹಕಾರದ ಅಗತ್ಯವಿದೆ. ಈ ಆಯಕಟ್ಟಿನ ಪ್ರದೇಶದಲ್ಲಿ ಮೊದಲಿಗೆ ಸೇತುವೆ ನಿರ್ಮಾಣ ಆಗಬೇಕು, ಅಲ್ಲಿ ಅತಿ ಎತ್ತರದ ಕನ್ನಡ ಧ್ವಜ ಕಂಬ ಸ್ಥಾಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.