ADVERTISEMENT

ದಾವಣಗೆರೆ | ಅತಿವೃಷ್ಟಿ; ಜಿಲ್ಲೆಯಲ್ಲಿ ₹18.68 ಕೋಟಿ ಹಾನಿ

ಮೂಲಸೌಕರ್ಯದ ಪುನರ್‌ ನಿರ್ಮಾಣಕ್ಕೆ ₹ 5.06 ಕೋಟಿ ಅನುದಾನಕ್ಕೆ ಬೇಡಿಕೆ; ಅಧಿಕಾರಿಗಳ ಸಮೀಕ್ಷೆ ಪೂರ್ಣ

ರಾಮಮೂರ್ತಿ ಪಿ.
Published 3 ನವೆಂಬರ್ 2025, 8:01 IST
Last Updated 3 ನವೆಂಬರ್ 2025, 8:01 IST
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಬಳಿ ಮೆಕ್ಕೆಜೋಳದ ಜಮೀನೊಂದರಲ್ಲಿ ನಿಂತಿದ್ದ ಮಳೆ ನೀರು (ಸಂಗ್ರಹ ಚಿತ್ರ)
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಬಳಿ ಮೆಕ್ಕೆಜೋಳದ ಜಮೀನೊಂದರಲ್ಲಿ ನಿಂತಿದ್ದ ಮಳೆ ನೀರು (ಸಂಗ್ರಹ ಚಿತ್ರ)   

ದಾವಣಗೆರೆ: 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಅಂದಾಜು ₹18.68 ಕೋಟಿ ಮೌಲ್ಯದ ಸ್ವತ್ತುಗಳಿಗೆ ಹಾನಿ ಉಂಟಾಗಿದೆ. 

ಭಾರಿ ಮಳೆ ಹಾಗೂ ಪ್ರವಾಹದಿಂದ ಮನೆಗಳು, ವಿದ್ಯುತ್ ಕಂಬಗಳು, ರಸ್ತೆಗಳು, ಶಾಲಾ– ಕಾಲೇಜುಗಳ ಕೊಠಡಿಗಳು ಹಾಗೂ ಆರೋಗ್ಯ ಕೇಂದ್ರಗಳು ಸೇರಿದಂತೆ ಇನ್ನಿತರ ಕಟ್ಟಡಗಳಿಗೆ ಹಾನಿಯಾಗಿದೆ. ಜನ, ಜಾನುವಾರುಗಳ ಜೀವಹಾನಿಯೂ ಸಂಭವಿಸಿದೆ. 

ಜೂನ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ಹಾನಿಗೀಡಾದ ಪ್ರದೇಶಗಳಲ್ಲಿ ಬೆಸ್ಕಾಂ, ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ತಂಡವು ಸಮಗ್ರ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಒಪ್ಪಿಸಿದೆ.  

ADVERTISEMENT

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಮೂಲಸೌಕರ್ಯದ ಪುನರ್‌ ನಿರ್ಮಾಣಕ್ಕೆ ₹ 5.06 ಕೋಟಿಯಷ್ಟು ಪರಿಹಾರದ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಜಿಲ್ಲಾಡಳಿತವು ಇದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. 

ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳ ಸಮೀಕ್ಷಾ ವರದಿಗಳನ್ನೂ ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಆ ಬಳಿಕ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಿದೆ. ನಂತರ ಎನ್‌ಡಿಆರ್‌ಎಫ್‌ ಅನುದಾನ ಬಿಡುಗಡೆಯಾಗಲಿದೆ. 

ಜಿಲ್ಲೆಯಲ್ಲಿ 48 ಅಂಗನವಾಡಿಗಳಿಗೆ ಭಾಗಶಃ ಹಾನಿಯಾಗಿದೆ. ₹1.23 ಕೋಟಿ ಹಾನಿ ಸಂಭವಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳ 6 ಕೊಠಡಿಗಳಿಗೂ ಹಾನಿಯಾಗಿದ್ದು, ₹29.70 ಲಕ್ಷ ನಷ್ಟ ಉಂಟಾಗಿದೆ. 

ಮಳೆ ಹಾಗೂ ಪ್ರವಾಹದ ಹೊಡೆತಕ್ಕೆ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಲುಗಿವೆ. ಒಟ್ಟು ₹36.4 ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ವರುಣನ ಆರ್ಭಟಕ್ಕೆ 35 ಮೀ. ಉದ್ದದ ಸೇತುವೆಯೂ ಶಿಥಿಲವಾಗಿದ್ದು, ₹ 3 ಲಕ್ಷ ಹಾನಿ ಸಂಭವಿಸಿದೆ. 

ಬೆಸ್ಕಾಂಗೆ ಸಂಬಂಧಿಸಿದಂತೆ 886 ವಿದ್ಯುತ್ ಕಂಬಗಳು, 3.4 ಕಿ.ಮೀ. ಉದ್ದದ ಎಲ್‌ಟಿ ಲೈನ್‌ (ವಿದ್ಯುತ್ ತಂತಿ) ಹಾಗೂ 43 ವಿದ್ಯುತ್ ಪರಿವರ್ತಕಗಳು (ಟಿ.ಸಿ) ಮಳೆ, ಗಾಳಿಗೆ ನೆಲಕ್ಕುರುಳಿವೆ. ಇವುಗಳ ಒಟ್ಟು ಮೌಲ್ಯ ₹96.34 ಲಕ್ಷ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

8 ಕಿ.ಮೀ. ರಾಜ್ಯ ಹೆದ್ದಾರಿ (ಅಂದಾಜು ₹ 14 ಲಕ್ಷ ಹಾನಿ) ಹಾಗೂ 161 ಕಿ.ಮೀ. ಗ್ರಾಮೀಣ ರಸ್ತೆಗಳು (₹2.68 ಕೋಟಿಯಷ್ಟು ಹಾನಿ) ಭಾಗಶಃ ಹಾನಿಯಾಗಿವೆ. ಮಳೆಯಿಂದ ಗ್ರಾಮೀಣ ರಸ್ತೆಗಳು ಹೆಚ್ಚು ಹದಗೆಟ್ಟಿರುವುದನ್ನು ಸಮೀಕ್ಷಾ ತಂಡ ವರದಿಯಲ್ಲಿ ಉಲ್ಲೇಖಿಸಿದೆ. 

1 ಕುಡಿಯುವ ನೀರಿನ ಟ್ಯಾಂಕ್, 125 ಎಚ್‌ಪಿಯ 1 ಮೋಟರ್‌ ಪಂಪ್‌, ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್‌ಗಳೂ ಮಳೆಯ ಹೊಡೆತಕ್ಕೆ ತುತ್ತಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ. 

ಜಗಳೂರು ತಾಲ್ಲೂಕಿನ ಐನಹಳ್ಳಿ ಕೊಡದಗುಡ್ಡ ಪ್ರದೇಶದಲ್ಲಿ ಹೆಚ್ಚಿನ ಮಳೆಯಿಂದ ಮೆಕ್ಕೆಜೋಳ ಬೆಳೆಯಲ್ಲಿ ನಿಂತಿದ್ದ ನೀರು (ಸಂಗ್ರಹ ಚಿತ್ರ)
ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿಯಲ್ಲಿ ರೈತರೊಬ್ಬರು ಬೆಳೆದಿದ್ದ ತರಕಾರಿ ಬೆಳೆಯು ಮಳೆ ನೀರಿನಿಂದ ಹಾಳಾಗಿ ಜಮೀನಿನಲ್ಲಿ ಹುಲ್ಲು ಬೆಳೆದಿರುವುದು (ಸಂಗ್ರಹ)

315.35 ಹೆಕ್ಟೇರ್‌ ಕೃಷಿ ಬೆಳೆ ಹಾನಿ

  ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಒಟ್ಟು 315.35 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. 300.90 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ ಹತ್ತಿ ಭತ್ತ ಹಾಗೂ ತರಕಾರಿ ಬೆಳೆಗಳೂ ಹಾಳಾಗಿವೆ. ಜಗಳೂರು ಭಾಗದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆಯು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿದ್ದು ರೈತರು ನಷ್ಟ ಅನುಭವಿಸಿದ್ದಾರೆ.  ಅಡಿಕೆ ತೆಂಗು ಬಾಳೆ ಪಪ್ಪಾಯ ಸೇರಿದಂತೆ ಒಟ್ಟು 14.45 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನೂ ನಿರಂತರ ಮಳೆ ಹಾಗೂ ಹೊಳೆ ನೀರು ಆಪೋಷನ ಪಡೆದಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಜಿಲ್ಲೆಗೆ ₹26.67 ಲಕ್ಷ ಪರಿಹಾರ ದೊರೆಯಬೇಕಿದೆ.

ಸರ್ಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ 

‘ವಿವಿಧ ಇಲಾಖೆಗಳ ಅಧಿಕಾರಿಗಳು ಹಾನಿಗೊಳಗಾದ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಖರವಾದ ವರದಿ ತಯಾರಿಸಿದ್ದಾರೆ. ಜಿಲ್ಲೆಯಲ್ಲಿ ಮೂಲಸೌಲಭ್ಯಕ್ಕೆ ಸಂಬಂಧಿಸಿದಂತೆ ₹18.68 ಕೋಟಿ ಮೊತ್ತದ ಹಾನಿಯಾಗಿದೆ. ಈ ಕುರಿತ ಸಮೀಕ್ಷಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.  ‘ಎನ್‌ಡಿಆರ್‌ಎಫ್‌ ಅನುದಾನ ಬರುವವರೆಗೂ ಕಾಯದೇ ವಿಪತ್ತಿನ ಪಿಡಿ ಖಾತೆಯಲ್ಲಿ ಲಭ್ಯವಿದ್ದ ಹಣವನ್ನು ಬಳಸಿಕೊಂಡು ಪರಿಹಾರ ನೀಡಲಾಗಿದೆ. ಅಂದಾಜು ₹25 ಕೋಟಿಯಷ್ಟು ಅನುದಾನ ವಿಪತ್ತಿನ ಪಿಡಿ ಖಾತೆಯಲ್ಲಿ ಸದಾ ಲಭ್ಯವಿರುತ್ತದೆ. ಮನೆ ಕಳೆದುಕೊಂಡವರು ಸಿಡಿಲು ಬಡಿದು ಮೃತಪಟ್ಟವರ ಕುಟುಂಬದವರಿಗೆ ಹಾಗೂ ಮಳೆ ಪ್ರವಾಹದಿಂದ ಸಾವಿಗೀಡಾದ ಜಾನುವಾರುಗಳ ಮಾಲೀಕರಿಗೆ ಕೂಡಲೇ ಪರಿಹಾರ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.  ‘ಶಾಲಾ ಕೊಠಡಿ ಆರೋಗ್ಯ ಕೇಂದ್ರ ಸೇರಿದಂತೆ ಮೂಲಸೌಲಭ್ಯಕ್ಕೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಅನುದಾನ ನೀಡಲಾಗುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.