ADVERTISEMENT

ದಾವಣಗೆರೆ: ನಡೆದ ಹಾದಿಯ ಹೊರಳು ನೋಟ

ಬತ್ತಿದ ಕೊಳವೆಬಾವಿಗಳು, ಹಿಂದೆಂದಿಗಿಂತಲೂ ಹೆಚ್ಚು ಅಬ್ಬರಿಸಿದ ವರುಣ, ಮೈದುಂಬಿದ ಜಲಮೂಲಗಳು, ತಣ್ಣಗಾಗದ ಬಿಜೆಪಿ ಬಣ ರಾಜಕೀಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 8:13 IST
Last Updated 31 ಡಿಸೆಂಬರ್ 2024, 8:13 IST
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ತಾರೀಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಫೆಬ್ರುವರಿಯಲ್ಲಿ ಕೊಳವೆಬಾವಿ ಕೊರೆಸಲಾಗಿತ್ತು   (ಪ್ರಜಾವಾಣಿ ಸಂಗ್ರಹ ಚಿತ್ರಗಳು)
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ತಾರೀಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಫೆಬ್ರುವರಿಯಲ್ಲಿ ಕೊಳವೆಬಾವಿ ಕೊರೆಸಲಾಗಿತ್ತು   (ಪ್ರಜಾವಾಣಿ ಸಂಗ್ರಹ ಚಿತ್ರಗಳು)   

ದಾವಣಗೆರೆ: 2024ಕ್ಕೆ ವಿದಾಯ ಹೇಳುವ ಸಮಯ ಸನ್ನಿಹಿತವಾಗಿದೆ. ಈ ಸಾಲಿನಲ್ಲಿ ಜಿಲ್ಲೆಗೆ ಸಿಹಿ ಕಹಿ ಎರಡರ ಅನುಭವವೂ ಆಗಿದೆ. ವರ್ಷದ ಆರಂಭದಲ್ಲೇ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದ್ದರಿಂದ ಸಾವಿರಾರು ಕೊಳವೆಬಾವಿಗಳು ಬತ್ತಿ ಹೋಗಿದ್ದವು. ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸಪಟ್ಟಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿಗಳನ್ನು ಕೊರೆಸಿದರೂ ‘ಗಂಗೆ’ ಕೈಹಿಡಿದಿದ್ದು ಕಡಿಮೆಯೇ. ಮಾರ್ಚ್‌ ವೇಳೆಗಾಗಲೇ ತುಂಗಭದ್ರಾ ನದಿಯ ಒಡಲು ಸಂಪೂರ್ಣ ಬರಿದಾಗಿತ್ತು. ಜನ, ಜಾನುವಾರುಗಳಿಗೂ ನೀರು ದೊರೆಯಂತಹ ದುಃಸ್ಥಿತಿ ಸೃಷ್ಟಿಯಾಗಿತ್ತು. ನಗರದಲ್ಲಿ 12ರಿಂದ 15 ದಿನಕ್ಕೊಮ್ಮೆ ನೀರು ಪೂರೈಸುವುದಕ್ಕೂ ಮಹಾನಗರ ಪಾಲಿಕೆ ಹೆಣಗಾಡುವ ಸ್ಥಿತಿ ಎದುರಾಗಿತ್ತು.

ಆ ಬಳಿಕ ಶುರುವಾದದ್ದು ವರುಣನ ಆರ್ಭಟ. ಈ ಬಾರಿ ಮುಂಗಾರು ರೈತರ ಪಾಲಿಗೆ ಆಶಾದಾಯಕವಾಗಿತ್ತು. ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿಯಿತು. ಮಳೆರಾಯನ ಕೃಪೆಯಿಂದಾಗಿ ಜುಲೈ ಅಂತ್ಯದ ವೇಳೆಗೆ ಭದ್ರಾ ಜಲಾಶಯ ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಅತಿವೃಷ್ಟಿಯಿಂದಾಗಿ ಒಂದಿಷ್ಟು ಪ್ರಮಾಣದ ಬೆಳೆಯೂ ಹಾನಿಗೀಡಾಯಿತು.

ರಾಜಕೀಯವಾಗಿಯೂ ಜಿಲ್ಲೆಯಲ್ಲಿ ಮಹತ್ವದ ತಿರುವುಗಳು ಘಟಿಸಿದವು. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯು ತೀವ್ರ ಜಿದ್ದಾಜಿದ್ದಿಯಿಂದ ಕೂಡಿತ್ತು. ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್‌, ಬಿಜೆಪಿಯಿಂದ ಗಾಯತ್ರಿ ಸಿದ್ದೇಶ್ವರ್ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜಿ.ಬಿ.ವಿನಯಕುಮಾರ್ ಕಣಕ್ಕಿಳಿದಿದ್ದರು.

ADVERTISEMENT

ಚುನಾವಣೆ ವೇಳೆ ಬಿಜೆಪಿಯಲ್ಲಿ ಬಂಡಾಯದ ಹೊಗೆಯೂ ದಟ್ಟವಾಗಿತ್ತು. ಜಿ.ಎಂ.ಸಿದ್ದೇಶ್ವರ ಅವರ ಕುಟುಂಬದವರಿಗೆ ಟಿಕೆಟ್ ನೀಡಬಾರದು ಎಂದು ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್ ಸೇರಿದಂತೆ ಹಲವು ನಾಯಕರು ಬಿಗಿಪಟ್ಟು ಹಿಡಿದಿದ್ದರು. ಆದರೂ, ಪತ್ನಿಗೆ ಟಿಕೆಟ್ ತರುವಲ್ಲಿ ಜಿ.ಎಂ.ಸಿದ್ದೇಶ್ವರ ಯಶಸ್ವಿಯಾಗಿದ್ದರು. ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ವಿಜಯಪತಾಕೆ ಹಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದರು.

ಅಡುಗೆ ಅನಿಲ ಸಿಲಿಂಡರ್ ಸ್ಫೋಟ, ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ, ಬ್ಯಾಂಕ್‌ನಲ್ಲಿ ದರೋಡೆ, ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟದಂತಹ ಕಹಿ ಘಟನೆಗಳೂ ಜರುಗಿದವು. 2024ರ ಹೊರಳು ನೋಟ ಇಲ್ಲಿದೆ.  

* ಜನವರಿ

6, 7: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಯ 7ನೇ ರಾಜ್ಯಮಟ್ಟದ ಸಮ್ಮೇಳನವು  ನಗರದಲ್ಲಿ ನಡೆದಿತ್ತು. ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಬಿ.ಆರ್. ಅಪರ್ಣಾ, ಲೇಖಕಿ ರೂಪಾ ಹಾಸನ ಸೇರಿದಂತೆ ಹಲವರು ಭಾಗಿಯಾಗಿದ್ದರು.

8: ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡರ್ಸ್‌ ಅಸೋಸಿಯೇಷನ್‌ನಿಂದ ನಗರದಲ್ಲಿ ಮಿಸ್ಟರ್‌ ಡ್ರೀಮ್ಸ್ ಕ್ಲಾಸಿಕ್-2022 ಜಿಲ್ಲಾ ಹಾಗೂ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ರಾಜ್ಯಮಟ್ಟದ ಮೆನ್ ಫಿಸಿಕ್ ಸ್ಪರ್ಧೆ ನಡೆದಿತ್ತು. ತಮ್ಮ ಅಂಗಸೌಷ್ಠವ ಪ್ರದರ್ಶಿಸಿದ್ದ ದೇಹದಾರ್ಢ್ಯ ಪಟುಗಳು ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದರು. 

12: ದಾವಣಗೆರೆಯ ಪಿ.ಬಿ.ರಸ್ತೆಯ ಎಪಿಎಂಸಿ ಕ್ವಾಟ್ರಸ್‌ನಲ್ಲಿ ಎಪಿಎಂಸಿ ಅಧೀಕ್ಷಕರ ಮನೆಯ ಬೀಗ ಹೊಡೆದು ಒಳ ನುಗ್ಗಿದ್ದ ಕಳ್ಳರು ₹4.07 ಲಕ್ಷ ಮೌಲ್ಯದ ಬಂಗಾರದ ಆಭರಣ, ₹ 2 ಲಕ್ಷ ನಗದು ಹಾಗೂ ₹15,500 ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದರು.

15: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಹರ ಜಾತ್ರೆ, ಶ್ರೀಗಳ 6ನೇ ಪೀಠಾರೋಹಣ, ವಚನಗಳ ಪಲ್ಲಕ್ಕಿ ಉತ್ಸವ ಹಾಗೂ ಸಂಕ್ರಾತಿ ಸಂಭ್ರಮ ನಡೆದಿತ್ತು. 

24: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಜಾಲವನ್ನು ಬೇಧಿಸಿದ್ದ ಪೊಲೀಸರು 6 ಜನರನ್ನು ಬಂಧಿಸಿ ಅವರಿಂದ ₹7.07 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ಫೆಬ್ರುವರಿ

3: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (ಕೆಯುಡಬ್ಲ್ಯುಜೆ) ದಾವಣಗೆರೆಯಲ್ಲಿ ಎರಡು ದಿನ ಪತ್ರಕರ್ತರ 38ನೇ ರಾಜ್ಯಮಟ್ಟದ ಸಮ್ಮೇಳನ ನಡೆದಿತ್ತು. ದಾವಣಗೆರೆಯಲ್ಲಿ 31 ವರ್ಷಗಳ ಬಳಿಕ ನಡೆದ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು, 4,000ಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿದ್ದರು. 

8: ಚನ್ನಗಿರಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದರು. 

8, 9: ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ 6ನೇ ವರ್ಷದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿತ್ತು. 

13: ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಬಳಿಯ ಭಾಯಾಗಢದಲ್ಲಿ ಫೆ.13ರಿಂದ 15ರ ವರೆಗೆ ಸಂತ ಸೇವಾಲಾಲ್ ಜಯಂತಿ ನಡೆದಿತ್ತು.

ಮಾರ್ಚ್‌

9: ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಥೀಮ್‌ಪಾರ್ಕ್‌ ಹಾಗೂ ಬಯಲು ರಂಗಮಂದಿರವನ್ನು ಉದ್ಘಾಟಿಸಲಾಗಿತ್ತು.

10: ಉಕ್ಕಡಗಾತ್ರಿ ಗುರು ಕರಿಬಸವೇಶ್ವರ ಅಜ್ಜಯ್ಯನ ಜಾತ್ರಾ ಮಹೋತ್ಸವ ಆರಂಭಗೊಂಡಿತ್ತು. 11ರಂದು ರಥೋತ್ಸವ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

18: ಹರಿಹರದಲ್ಲಿ ಎರಡು ದಿನಗಳವರೆಗೆ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು.

17: ನಗರದ ಅಧಿದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಎಂಟು ದಿನಗಳವರೆಗೆ ಅದ್ದೂರಿಯಾಗಿ ನಡೆದಿತ್ತು.

ಏಪ್ರಿಲ್‌

28: ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ನಡೆಸಿದ್ದರು. 

ಮೇ

2: ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದ ಗಾಯತ್ರಿ ಪರ ಯದುವೀರ್‌ ಒಡೆಯರ್‌ ಪ್ರಚಾರ ನಡೆಸಿದ್ದರು.

4: ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಪ್ರಚಾರ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

7: ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದು ಶೇ 76.99ರಷ್ಟು ಮತದಾನವಾಗಿತ್ತು. 

ಜೂನ್‌

4: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆದಿತ್ತು. ಸಂಸದರಾಗಿ ಪ್ರಭಾ ಮಲ್ಲಿಕಾರ್ಜುನ್‌ ಆಯ್ಕೆಯಾಗಿದ್ದರು. ಆ ಮೂಲಕ ಕ್ಷೇತ್ರದ ಮೊದಲ ಮಹಿಳಾ ಸಂಸದೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. 

ಜುಲೈ

2: ರಾಮನಗರದ ಎಸ್‌ಒಜಿ ಕಾಲೊನಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಂಭೀರ ಗಾಯಗಳಾಗಿದ್ದವು. ಈ ಪೈಕಿ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. 

ಆಗಸ್ಟ್

4: ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ನಿವೃತ್ತಿ ಘೋಷಿಸಿ, ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ಸಾದರ ಲಿಂಗಾಯತ ಸಮುದಾಯದ ಮುಖಂಡರು ನಗರದಲ್ಲಿ ಸಭೆ ನಡೆಸಿದ್ದರು. ನಿವೃತ್ತಿಯ ಮಾತೇ ಇಲ್ಲ ಎಂದು ಸ್ವಾಮೀಜಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. 

27: ಲೋಕಸಭಾ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿತ್ತು. 

29: ಚನ್ನಗಿರಿ ತಾಲ್ಲೂಕಿನ ಜೋಳದಹಾಳ್ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಒಟ್ಟು 44 ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಜಿಲ್ಲಾಧಿಕಾರಿ, ಸಿಇಒ ಗ್ರಾಮಕ್ಕೆ ಭೇಟಿ ನೀಡಿದ್ದರು.

ಸೆಪ್ಟೆಂಬರ್‌

27: ಪಾಲಿಕೆ ಮೇಯರ್ ಆಗಿ ಕೆ.ಚಮನ್‌ಸಾಬ್‌, ಉಪಮೇಯರ್ ಆಗಿ ಸೋಗಿ ಶಾಂತಕುಮಾರ್ ಆಯ್ಕೆಯಾಗಿದ್ದರು. ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸದಸ್ಯರೊಬ್ಬರಿಗೆ ಮೇಯರ್ ಪಟ್ಟ ಒಲಿದಿದ್ದು ಇದೇ ಮೊದಲು.

ಅಕ್ಟೋಬರ್‌

5: ಹಿಂದೂ ಮಹಾಗಣಪತಿ ವಿಸರ್ಜನೆ ವಿಜೃಂಭಣೆಯಿಂದ ನಡೆಯಿತು. ಗಣಪತಿಯನ್ನು ಶೋಭಾಯಾತ್ರೆಯಲ್ಲಿ ಕರೆದೊಯ್ದು ವಿಸರ್ಜನೆ ಮಾಡಲಾಯಿತು. ಡಿ.ಜೆ.ಗಳ ಸಂಗೀತಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸಿತ್ತು.

16: ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪೇಮೆಂಟ್‌ ಸೀಟ್‌ ವ್ಯವಸ್ಥೆ ಜಾರಿಗೊಳಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕ್ರಮವನ್ನು ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ನೇತೃತ್ವದಲ್ಲಿ ದಾವಣಗೆರೆ ನಗರ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ಗೆ ಜನರು ಭಾಗಶಃ ಸ್ಪಂದಿಸಿದರು.

ನವೆಂಬರ್‌

10: ನಗರದ ಪ್ರಿನ್ಸ್‌ ಜಯಚಾಮರಾಜೇಂದ್ರ (ಪಿ.ಜೆ) ಬಡಾವಣೆಯ 4 ಎಕರೆ 13 ಗುಂಟೆ ಜಾಗ ‘ಖಬರಸ್ತಾನ್‌ ಸುನ್ನಿ ವಕ್ಫ್‌ ಸಂಸ್ಥೆ’ ಹೆಸರಿಗೆ ನೋಂದಣಿಯಾಗಿರುವುದು ಬಹಿರಂಗಗೊಂಡಿತ್ತು. ಜಿಲ್ಲೆಯಲ್ಲಿ ಇದನ್ನು ಪ್ರಧಾನ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ ಹೋರಾಟ ಕೈಗೆತ್ತಿಕೊಂಡಿತ್ತು. 

12: ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಪಿ.ಜೆ. ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. 

24: ಪಿ.ಜೆ ಬಡಾವಣೆಯ ಪಹಣಿ ತಿದ್ದುಪಡಿ ಮಾಡಿದ ಕಂದಾಯ ಇಲಾಖೆ, ‘ಖಬರಸ್ತಾನ್‌ ಸುನ್ನಿ ವಕ್ಫ್‌ ಸಂಸ್ಥೆ’ ಎಂಬುದನ್ನು ಬದಲಾಯಿಸಿ ‘ಸರ್ಕಾರಿ ಖರಾಬು’ ಎಂಬುದಾಗಿ ಭೂ ದಾಖಲೆಗಳನ್ನು ಸರಿಪಡಿಸಿತ್ತು. 

ಡಿಸೆಂಬರ್‌

15: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರವಾಗಿ ಗುರುತಿಸಿಕೊಂಡಿರುವ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ಬೆಂಬಲಿಗರ ಸಭೆ ನಡೆದಿತ್ತು. ಫೆ.27ರಂದು ಬಿ.ಎಸ್‌.ಯಡಿಯೂರಪ್ಪ ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. 

ದಾವಣಗೆರೆಯ ಎಸ್.ಎಸ್.ಬಡಾವಣೆಯ ‘ಎ’ ಬ್ಲಾಕ್‌ನಲ್ಲಿ ರಸ್ತೆ ಹಾಗೂ ಕಟ್ಟಡ ಜಲಾವೃತವಾಗಿತ್ತು 
ದಾವಣಗೆರೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ್ದ ಕ್ಷಣ 
ದಾವಣಗೆರೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟ ಘಟನೆ ಬಳಿಕ ಅರಳಿಮರ ವೃತ್ತದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು
‘ಲಾಕಪ್‌ಡೆತ್‌’; ಪೊಲೀಸ್ ಠಾಣೆ ಮೇಲೆ ದಾಳಿ
ಮಟ್ಕಾ ಜೂಜು ಆಡಿಸುತ್ತಿದ್ದ ಆರೋಪದ ಮೇರೆಗೆ ಜಿಲ್ಲೆಯ ಚನ್ನಗಿರಿ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಸಂದರ್ಭದಲ್ಲೇ ಸ್ಥಳೀಯ ನಿವಾಸಿ ಆದಿಲ್‌ ಖಲಿಂ ಉಲ್ಲಾ (32) ಮೃತಪಟ್ಟಿದ್ದರು. ಅವರದ್ದು ‘ಲಾಕಪ್‌ ಡೆತ್‌’ ಎಂದು ಆರೋಪಿಸಿ ಮೃತನ ಕುಟುಂಬ ಸದಸ್ಯರು ಸಂಬಂಧಿಕರು ಹಾಗೂ ನೆರೆಹೊರೆಯವರು ಮೇ 25ರಂದು ತಡರಾತ್ರಿ ಪೊಲೀಸ್‌ ಠಾಣೆ ಎದುರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಉದ್ರಿಕ್ತರ ಗುಂಪು ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ ಠಾಣೆ ಎದುರು ನಿಲ್ಲಿಸಿದ್ದ 5 ಪೊಲೀಸ್ ವಾಹನಗಳನ್ನು ಜಖಂಗೊಳಿಸಿತ್ತು. ಕಿಡಿಗೇಡಿಗಳಿಂದ ಕಲ್ಲು ತೂರಾಟ ದಾವಣಗೆರೆಯ ಬೇತೂರು ರಸ್ತೆಯಲ್ಲಿನ ಅರಳಿಮರ ವೃತ್ತದಲ್ಲಿ ಸೆಪ್ಟೆಂಬರ್ 19ರಂದು ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದವು. ಸಮೀಪದ ಆನೆಕೊಂಡ ಮಟ್ಟಿಕಲ್ಲು ಬಡಾವಣೆಗಳಿಗೂ ನುಗ್ಗಿದ್ದ ಪುಂಡರು ವಾಹನಗಳು ಮನೆಯ ಕಿಟಕಿಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದರು. ಪೊಲೀಸರು ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ಆರೋಪಿಗಳನ್ನು ಬಂಧಿಸಿ ಗಲಭೆಯನ್ನು ನಿಯಂತ್ರಿಸಿದ್ದರು. ಅತಿ ದೊಡ್ಡ ದರೋಡೆ ಪ್ರಕರಣ ಅಕ್ಟೋಬರ್ 28ರಂದು ನ್ಯಾಮತಿ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಶಾಖೆಯ ಕಿಟಕಿ ಮುರಿದು ಒಳನುಗ್ಗಿದ್ದ ಕಳ್ಳರು 17 ಕೆ.ಜಿ. ಚಿನ್ನಾಭರಣ ದೋಚಿದ್ದರು. ಜಿಲ್ಲೆಯಲ್ಲಿ ನಡೆದ ಅತಿ ದೊಡ್ಡ ದರೋಡೆ ಪ್ರಕರಣ ಇದಾಗಿದೆ. 509 ಗ್ರಾಹಕರು ಸಾಲ ಪಡೆಯಲು ಅಡವಿಟ್ಟಿದ್ದ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದರು. ಈ ಪ್ರಕರಣವನ್ನು ಈವರೆಗೂ ಬೇಧಿಸಲು ಆಗಿಲ್ಲ. 
ಅಗಲಿದ ಗಣ್ಯರು
ಎಂ.ಜಿ. ಈಶ್ವರಪ್ಪ ಶಿಕ್ಷಣ ತಜ್ಞ ಜಾನಪದ ವಿದ್ವಾಂಸ ಇಲ್ಲಿನ ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾಗಿದ್ದ ಎಂ.ಜಿ. ಈಶ್ವರಪ್ಪ (74) ಅವರು ಜೂನ್‌ 1ರಂದು ನಿಧನರಾಗಿದ್ದರು. ಶ್ವಾಸಕೋಶದ ಸೋಂಕಿನಿಂದ ಅವರು ಬಳಲುತ್ತಿದ್ದರು. ರಂಗಭೂಮಿ ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಮಧ್ಯ ಕರ್ನಾಟಕ ಭಾಗದಲ್ಲಿ ‘ಮೇಷ್ಟ್ರು’ ಎಂದೇ ಹೆಸರಾಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ಸರ್ಕಾರ ಅವರಿಗೆ 2020ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ನಾಗಮ್ಮ ಕೇಶವಮೂರ್ತಿ ದಾವಣಗೆರೆಯ ‘ಮದರ್ ಥೆರೇಸಾ’ ಎಂದೇ ಹೆಸರಾಗಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ (90) ಮಾರ್ಚ್‌ 16ರಂದು ನಿಧನರಾಗಿದ್ದರು. ದಾವಣಗೆರೆ ಹಾಗೂ ಮಾಯಕೊಂಡ ಕ್ಷೇತ್ರದಿಂದ 3 ಬಾರಿ ಶಾಸಕಿಯಾಗಿದ್ದ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವೆಯಾಗಿದ್ದರು. ಶಿಕ್ಷಣ ಸಚಿವೆಯಾಗಿ 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯ ಮಾಡಿದ್ದರು. ಗೌಡ್ರ ಚನ್ನಬಸಪ್ಪ ನಗರ ದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿ ಕಳಸಪ್ಪನವರ ಗೌಡ್ರ ಚನ್ನಬಸಪ್ಪ (76) ಅವರು ಅಕ್ಟೋಬರ್‌ 20ರಂದು ನಿಧನರಾಗಿದ್ದರು. ‌ಕುರುಬ ಸಮಾಜದ ಮುಖಂಡರಾಗಿದ್ದ ಗೌಡ್ರ ಚನ್ನಬಸಪ್ಪ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಸಹ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.