ADVERTISEMENT

ಕೊಲೆ ಆರೋಪಿಗಳಿಗೆ ನೆರವು: ಪತ್ರಕರ್ತ ಮೆಹಬೂಬ್‌ ಬಂಧನ

ನ್ಯಾಮತಿ ಬಳಿ ನಡೆದಿದ್ದ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 5:23 IST
Last Updated 18 ಮಾರ್ಚ್ 2023, 5:23 IST
ಮೆಹಬೂಬ್ ಮುನವಳ್ಳಿ
ಮೆಹಬೂಬ್ ಮುನವಳ್ಳಿ   

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಚೀಲೂರು ಬಳಿ ಕಳೆದ ಬುಧವಾರ ನಡೆದಿದ್ದ ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿಗಳಿಗೆ ನೆರವಾಗಿರುವ ಆರೋಪದಲ್ಲಿ ಧಾರವಾಡದ ಪತ್ರಕರ್ತರೊಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪ್ರಕರಣದ ಆರೋಪಿಗಳಿಗೆ ನೆರವಾದ ಆರೋಪದಲ್ಲಿ ಖಾಸಗಿ ಸುದ್ದಿ ವಾಹಿನಿಯ ವರದಿಗಾರ, ಧಾರವಾಡದ ಮೆಹಬೂಬ್ ಮುನವಳ್ಳಿಯನ್ನು ಬಂಧಿಸಿರುವ ನ್ಯಾಮತಿ ಠಾಣೆ ಪೊಲೀಸರು ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿವಮೊಗ್ಗದ ರೌಡಿಶೀಟರ್ ಹಂದಿ ಅಣ್ಣಿ (ಅಣ್ಣೇಗೌಡ) ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಮೇಲೆ ಗುಂಪೊಂದು ಬುಧವಾರ ಸ್ಕಾರ್ಪಿಯೊ ವಾಹನದಲ್ಲಿ ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಈ ಸಂದರ್ಭ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಆಂಜನೇಯ (30) ಹತ್ಯೆಗೀಡಾಗಿದ್ದ.

ADVERTISEMENT

ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಆಂಜನೇಯ ಹಾಗೂ ಮಧು ಜಾಮೀನಿನ ಮೇಲೆ ಹೊರ ಬಂದಿದ್ದರಲ್ಲದೆ, ಬುಧವಾರ ಶಿವಮೊಗ್ಗದಲ್ಲಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಹಾಜರಾಗಿ ಊರಿಗೆ ವಾಪಸಾಗುತ್ತಿದ್ದಾಗ ತೀವ್ರ ಹಲ್ಲೆ ನಡೆಸಲಾಗಿತ್ತು. ಪ್ರಕರಣದಲ್ಲಿ ಮಧು ತೀವ್ರ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಚೀಲೂರು ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದರು. ಇನ್ನಿತರ ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ತಿಳಿದಿದ್ದರೂ, ಪೊಲೀಸರ ತನಿಖೆಗೆ ಅಸಹಕಾರ ನೀಡಿದ ಹಾಗೂ ಅವರು ತಪ್ಪಿಸಿಕೊಳ್ಳಲು ನೆರವು ನೀಡಿದ ಆರೋಪದಲ್ಲಿ ಮೆಹಬೂಬ್ ಮುನವಳ್ಳಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ತಿಳಿಸಿದ್ದಾರೆ.

ಆಂಜನೇಯನ ಹತ್ಯೆ ಹಾಗೂ ಮಧು ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳಾದ ಸುನಿಲ್, ವೆಂಕಟೇಶ್, ಅಭಿಲಾಷ್‌, ಪವನ್ ಬಂಧಿತರಾಗಿದ್ದು, ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.