ADVERTISEMENT

ಕ್ಯಾನ್ಸರ್‌ ಚಿಕಿತ್ಸೆಗೆ ಬಂದಿದೆ ಅತ್ಯಾಧುನಿಕ ಟೊಮೊಥೆರಪಿ ಯಂತ್ರ

ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿಶ್ವಾರಾಧ್ಯ ಕಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 19:45 IST
Last Updated 27 ಆಗಸ್ಟ್ 2022, 19:45 IST
ದಾವಣಗೆರೆ ವಿಶ್ವಾರಾಧ್ಯ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಟೋಮೊ ಥೆರಪಿ ಯಂತ್ರ ಅಳವಡಿಸಲಾಗಿದೆ
ದಾವಣಗೆರೆ ವಿಶ್ವಾರಾಧ್ಯ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಟೋಮೊ ಥೆರಪಿ ಯಂತ್ರ ಅಳವಡಿಸಲಾಗಿದೆ   

ದಾವಣಗೆರೆ: ನಗರದ ಹೊರ ವಲಯದಲ್ಲಿರುವ ವಿಶ್ವಾರಾಧ್ಯ ಕಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಮಷಿನ್‌ ಅಳವಡಿಸಲಾಗಿದೆ. ಹಾಗಾಗಿ ಪರಿಣಾಮಕಾರಿ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಜಗದೀಶ್ ತುಬಚಿ ತಿಳಿಸಿದರು.

ಶಶ್ತ್ರಚಿಕಿತ್ಸೆ ಮತ್ತು ಕಿಮೋ ಥೆರಪಿ ಮಾತ್ರ ಇತ್ತು. ರೇಡಿಯೇಶನ್‌ ಚಿಕಿತ್ಸೆ ಅಗತ್ಯ ಇರುವ ರೋಗಿಗಳು ಹೈದರಾಬಾದ್, ಚೆನೈ ಸಹಿತ ಬೇರೆಡೆಗೆ ಹೋಗಬೇಕಿತ್ತು. ಇದೀಗ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಈ ಆಧುನಿಕ ಟೊಮೊ ಥೆರಪಿ ಯಂತ್ರ ಅಳವಡಿಸಲಾಗಿದೆ. ಇದು ಇಲ್ಲಿವರೆಗೆ ಬಂದಿರುವ ರೆಡಿಯೊ ಥೆರಪಿಗಳಲ್ಲಿಯೇ ಅತ್ಯಾಧುನಿಕವಾದುದು. ಇದರ ಹಿಂದಿನ ವರ್ಷನ್‌ಗಳೇ ಈಗ ರಾಜ್ಯದ ಬೇರೆ ಆಸ್ಪತ್ರೆಗಳಲ್ಲಿ ಇರುವುದು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಪದರ ಪದರ ವಿಭಾಗ ಮಾಡಿ ರೇಡಿಯೇಶನ್‌ ಚಿಕಿತ್ಸೆ ನೀಡುವುದರಿಂದ ಕ್ಯಾನ್ಸರ್‌ ಇರುವಲ್ಲಿಗೆ ನೇರವಾಗಿ ಚಿಕಿತ್ಸೆ ನೀಡಲಾಗುತ್ತದೆ. ಪಕ್ಕದ ಜೀವಕೋಶಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ADVERTISEMENT

ಕ್ಯಾಲಿಫೋರ್ನಿಯಾದಿಂದ ₹ 25 ಕೋಟಿ ಮೌಲ್ಯದ ಈ ಯಂತ್ರವನ್ನು ತರಿಸಲಾಗಿದೆ. ರೇಡಿಯೇಶನ್‌ ತಂತ್ರಜ್ಞರು ಬಹಳ ಕಡಿಮೆ. ಇಲ್ಲಿ ಕನ್ಯಾಕುಮಾರಿಯ ಗೋಕುಲ್‌ ಅವರು ಇಲ್ಲಿ ತಜ್ಞ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ವಾರಕ್ಕೆ 5 ದಿನದಂತೆ 35 ದಿನ ಚಿಕಿತ್ಸೆ ನೀಡಲಾಗುವುದು ಎಂದು ವಿವರಿಸಿದರು.

ಯಾವ ಕ್ಯಾನ್ಸರ್‌ ಮತ್ತು ಯಾವ ಸ್ಟೇಜ್‌ನಲ್ಲಿದೆ ಎಂಬುದರ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ₹ 30 ಸಾವಿರದಿಂದ ₹ 4.5 ಲಕ್ಷ ವರೆಗೆ ರೋಗದ ಲಕ್ಷಣಕ್ಕನುಗುಣವಾಗಿ ಚಿಕಿತ್ಸೆ ವೆಚ್ಚವಾಗುತ್ತದೆ. ಆಯುಷ್ಮಾನ್‌ ಭಾರತ್‌ ಕಾರ್ಡ್‌ ಇದ್ದರೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಒಬ್ಬ ರೋಗಿಗೆ ವಾರಕ್ಕೆ ಐದು ದಿನಗಳಂತೆ ಒಟ್ಟು 35 ದಿನಗಳು ಚಿಕಿತ್ಸೆ ನೀಡಲಾಗುತ್ತದೆ. ಒಬ್ಬರಿಗೆ 5ರಿಂದ 10 ನಿಮಿಷದಲ್ಲಿ ಚಿಕಿತ್ಸೆ ಮುಗಿದು ಹೋಗುವುದರಿಂದ ಹತ್ತಿರದವರು ಪ್ರತಿ ದಿನ ಮನೆಗೆ ಹೋಗಬಹುದು ಎಂದು ಮಾಹಿತಿ ನೀಡಿದರು.

ಇದೀಗ ಆಸ್ಪತ್ರೆಯಲ್ಲಿ 45 ಜನರ ರೋಗಿಗಳಿದ್ದು, 300 ಹಾಸಿಗೆ ಸಾಮರ್ಥ್ಯವನ್ನು ಆಸ್ಪತ್ರೆ ಹೊಂದಿದೆ. ಇಷ್ಟು ದೊಡ್ಡ ಕ್ಯಾನ್ಸರ್‌ ಆಸ್ಪತ್ರೆ ರಾಜ್ಯದಲ್ಲಿ ಇಲ್ಲ ಎಂದರು.

ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆ ಕಾಣುತ್ತಿದೆ. ಪ್ರತಿ ಲಕ್ಷಕ್ಕೆ 12ರಿಂದ 16 ಮಂದಿ ಕ್ಯಾನ್ಸರ್‌ ರೋಗಿಗಳಾಗಿದ್ದಾರೆ. ಮಧ್ಯ ಕರ್ನಾಟಕದ ಭಾಗದಲ್ಲಿ ಸ್ತನ, ಗರ್ಭಕೋಶ ಮತ್ತು ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಕ್ಯಾನ್ಸರ್ ತಜ್ಞರಾದ ಡಾ.ತೇಜಸ್ ಯಳಮಲಿ, ಡಾ.ಎ.ಸಿ. ಮಹಾಂತೇಶ್, ಡಾ. ಪ್ರಜ್ವಲ್‌ ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.