ADVERTISEMENT

ಲೋಕಾಯುಕ್ತ ಬಲಗೊಳಿಸಲು ಆಗ್ರಹಿಸಿ 19ರಿಂದ ಪಾದಯಾತ್ರೆ

ಯಡಿಯೂರಿನಿಂದ ಸಿಎಂ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:37 IST
Last Updated 8 ಮಾರ್ಚ್ 2021, 5:37 IST

ದಾವಣಗೆರೆ: ಲೋಕಾಯುಕ್ತ ಬಲಗೊಳಿಸುವಂತೆ ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಮಾರ್ಚ್ 19ರಿಂದ 22ರವರಗೆ ಪಾದಯಾತ್ರೆ ನಡೆಸಲಾಗುವುದು ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಜಿ.ರಮೇಶ್ ಕುಣಿಗಲ್ ಹೇಳಿದರು.

‘ತುಮಕೂರು ಜಿಲ್ಲೆಯ ಯಡಿಯೂರಿನ ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದವೆರೆಗೂ ಪಾದಯಾತ್ರೆ ನಡೆಸಿ ಅವರಿಗೆ ಪ್ರಸಾದದೊಂದಿಗೆ ಮನವಿಯನ್ನು ಸಲ್ಲಿಸಲಾಗುವುದು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಬಲಪಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಸಾಮಾಜಿಕ ಹೋರಾಟಗಾರರಿಗೂ ರಕ್ಷಣೆ ನೀಡುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಭರವಸೆ ಈಡೇರಿಲ್ಲ. ಅವರು ಕೊಟ್ಟ ವಚನವನ್ನು ಮರೆತಿದ್ದು, ಅದನ್ನು ನೆನಪಿಸುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

‘ಮಾರ್ಚ್ 19ರಂದು ನಡೆಯುವ ಪಾದಯಾತ್ರೆಯಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಎಂ. ಬಿದರಿ, ಧಾರವಾಡ ಜಿಲ್ಲಾ ನಿವೃತ್ತ ನ್ಯಾಯಾಧೀಶರಾದ ಸಂಗಪ್ಪ ಮಿಟ್ಟಲ್ ಕೋಡ್, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಪಾಲ್ಗೊಳ್ಳುವರು’ ಎಂದು ತಿಳಿಸಿದರು.

‘ಯಡಿಯೂರಿನಿಂದ ಆರಂಭವಾಗುವ ಪಾದಯಾತ್ರೆ ಕುಣಿಗಲ್, ಸೋಲೂರು, ನೆಲಮಂಗಲ, ಯಶವಂತಪುರದ ಮೂಲಕ ಬೆಂಗಳೂರಿನ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಸಮಾವೇಶಗೊಂಡು, ಬಳಿಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಹೊನ್ನಾಳಿಯ ಭ್ರಷ್ಟಾಚಾರ ವಿರೋಧಿ ವೇದಿಕೆಯ ಗೌರವಾಧ್ಯಕ್ಷ ಗುರುಪಾದಯ್ಯ ಮಠದ್, ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ. ವಿನಯ್‌ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಡಿ.ಉಪ್ಪಾರ್,ಪ್ರಧಾನ ಕಾರ್ಯದರ್ಶಿ ಹನುಮಂತರಾಮಪ್ಪ ವಿ, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಕೆ.ಎಚ್. ವೆಂಕಟೇಶ್, ಸದಸ್ಯ ಮಹಮದ್ ನಿಸಾರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.