ಚನ್ನಗಿರಿ: ರಾಜ್ಯದಲ್ಲಿ ಗಣೇಶ ಉತ್ಸವ ಹಾಗೂ ವಿಸರ್ಜನೆ ಮೆರವಣಿಗೆಗೆ ಸರ್ಕಾರ ನಿಯಮಗಳ ಕಾರಣ ನೀಡಿ ಅನೇಕ ವಿಘ್ನಗಳನ್ನು ಗಣೇಶನ ಭಕ್ತರ ಮೇಲೆ ಹೇರುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ತಾಲ್ಲೂಕು ಘಟಕದವರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
‘ಗೌರಿ– ಗಣೇಶ ಹಬ್ಬ ಹಿಂದೂಗಳ ಭಾವನಾತ್ಮಕ ಹಬ್ಬವಾಗಿದ್ದು, ಅದಕ್ಕೆ ಆಧ್ಯಾತ್ಮಿಕ ಹಿನ್ನೆಲೆ ಇದೆ. ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಲು ದೇಶಭಕ್ತರನ್ನು ಸಂಘಟಿಸಲು ಬಾಲಗಂಗಾಧರ್ ತಿಲಕ್ ಅವರು ಗಣೇಶ ಹಬ್ಬವನ್ನು ಸಾರ್ವಜನಿಕ ಹಬ್ಬವನ್ನಾಗಿ ಪರಿವರ್ತಿಸಿದರು. ಅಂದಿನಿಂದಲೂ ಗಣೇಶೋತ್ಸವು ಸಾರ್ವಜನಿಕ ಸ್ಥಳಗಳಲ್ಲಿ ವಿಜೃಂಬಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.
‘ವಿಶ್ವ ಹಿಂದೂ ಪರಿಷತ್‌ನ ಅನೇಕ ಮುಖಂಡರ ಮೇಲೆ ವಿಧಿಸಿರುವ ಜಿಲ್ಲಾ ಪ್ರವೇಶ ನಿರ್ಬಂಧ ಆದೇಶವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಗಣೇಶೋತ್ಸವ ಹಾಗೂ ಶೋಭಾಯಾತ್ರೆ ಮೆರವಣಿಗೆಗಳು ಸಂಭ್ರಮದಿಂದ ನಡೆಯಲು ಅನುಕೂಲ ಮಾಡಿಕೊಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪಟ್ಟಣದ ಊರ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಗಾಂಧಿ ವೃತ್ತಕ್ಕೆ ಬಂದಿತು. ಮಾನವ ಸರಪಳಿ ರಚಿಸಿ ಒಂದಷ್ಟು ಹೊತ್ತು ಹೆದ್ದಾರಿ ತಡೆ ನಡೆಸಿದರು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಎನ್.ಜೆ. ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಮುಖಂಡರಾದ ಮಂಜುನಾಥ್, ಸಿದ್ಧು, ರವಿಚಂದ್ರ, ರಾಕೇಶ್, ಹನುಮಂತ, ರಘು, ಕಿರಣ್, ಮಧು, ಜಯಣ್ಣ, ಮಂಜುನಾಥ್ ಕಾಳೆ, ಕಾಯಿ ಮಂಜುನಾಥ್ ಜಾಧವ್, ರಮೇಶ, ಪ್ರಭಾಕರ್, ಬಲರಾಮ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.