ADVERTISEMENT

ಮುಸ್ಲಿಂ ಸ್ನೇಹಿತನ ಆರೋಗ್ಯಕ್ಕಾಗಿ ಹರಕೆ: ಧರ್ಮಸ್ಥಳದಲ್ಲಿ ಅನಿಸ್‌ ಪಾಷ ತುಲಾಭಾರ!

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 19:58 IST
Last Updated 11 ಅಕ್ಟೋಬರ್ 2023, 19:58 IST
ಧರ್ಮಸ್ಥಳಕ್ಕೆ ತೆರಳಿ ಹರಕೆ ಸಲ್ಲಿಸಿದ ವಕೀಲ ಅನಿಸ್‌ ಪಾಷ ಹಾಗೂ ಅರುಣ್‌ಕುಮಾರ್‌ (ಬಲತುದಿಯಲ್ಲಿ ಇರುವವರು). ಇತರ ಸ್ನೇಹಿತರು ಜತೆಗಿದ್ದಾರೆ
ಧರ್ಮಸ್ಥಳಕ್ಕೆ ತೆರಳಿ ಹರಕೆ ಸಲ್ಲಿಸಿದ ವಕೀಲ ಅನಿಸ್‌ ಪಾಷ ಹಾಗೂ ಅರುಣ್‌ಕುಮಾರ್‌ (ಬಲತುದಿಯಲ್ಲಿ ಇರುವವರು). ಇತರ ಸ್ನೇಹಿತರು ಜತೆಗಿದ್ದಾರೆ   

ದಾವಣಗೆರೆ: ಮುಸ್ಲಿಂ ಸಮುದಾಯಕ್ಕೆ ಸೇರಿರುವ ಪ್ರಾಣ ಸ್ನೇಹಿತನ ಆರೋಗ್ಯ ಸುಧಾರಣೆಗಾಗಿ ಮಂಜುನಾಥ ಸ್ವಾಮಿಗೆ ಹರಕೆ ಹೊತ್ತಿದ್ದ ಹಿಂದು ಗೆಳೆಯ, ಧರ್ಮಸ್ಥಳಕ್ಕೆ ತೆರಳಿ ಸ್ನೇಹಿತನ ತುಲಾಭಾರ ನಡೆಸಿದ್ದಾರೆ.

ವಕೀಲ ವೃತ್ತಿಯಲ್ಲಿರುವ ನಗರದ ಅನಿಸ್‌ ಪಾಷ ಹಾಗೂ ಅರುಣ್‌ಕುಮಾರ್‌ ದಶಕದಿಂದ ಸ್ನೇಹಿತರು. ಅರುಣ್‌ಕುಮಾರ್‌ ಅವರಿಗೆ ಸಂಬಂಧಿಸಿದ ಪ್ರಕರಣವೊಂದರ ವಕಾಲತ್ತು ವಹಿಸಿ, ಗೆದ್ದಿರುವ ಅನಿಸ್‌ ಪಾಷ ಕೊರೊನಾ ಸಂದರ್ಭ ಹೃದಯಸಂಬಂಧಿ ಕಾಯಿಲೆಗೆ ಒಳಗಾಗಿದ್ದರು, ಅವರು ಗುಣಮುಖರಾಗಲಿ ಎಂದು ಅರುಣ್‌ ಮಂಜುನಾಥ ಸ್ವಾಮಿಗೆ ಹರಕೆ ಹೊತ್ತಿದ್ದರು.

ಸ್ನೇಹಿತ ಗುಣಮುಖರಾದ ಕಾರಣ ಕಳೆದ ವಾರವಷ್ಟೇ ಧರ್ಮಸ್ಥಳಕ್ಕೆ ಅನಿಸ್‌ ಪಾಷ ಅವರನ್ನು ಕರೆದೊಯ್ದು ದೇವರ ದರ್ಶನ ಮಾಡಿಸಿ, ಅಭಿಷೇಕ ಮಾಡಿಸಿ, ಅವರ ತುಲಾಭಾರ ಸೇವೆ ಸಲ್ಲಿಸಿದ್ದಾರೆ. ಇದಕ್ಕೆ ಸಹಕರಿಸಿದ ಮುಸ್ಲಿಂ ಸ್ನೇಹಿತ ಕೋಮು ಸೌಹಾರ್ದಕ್ಕೆ ಮಾದರಿಯಾಗಿದ್ದಾರೆ.

ADVERTISEMENT

‘ನನ್ನ ವೃತ್ತಿಯಲ್ಲಿ ಸಾಕಷ್ಟು ಕಕ್ಷಿದಾರರನ್ನು ಕಂಡಿದ್ದೇನೆ. ಆದರೆ, ಕಕ್ಷಿದಾರರಾಗಿ ಪರಿಚಿತರಾದ ಅರುಣ್‌ಕುಮಾರ್‌ ತುಂಬಾ ಹತ್ತಿರವಾದರು. ಇಬ್ಬರೂ ಕುಟುಂಬ ಸ್ನೇಹಿತರಾಗಿದ್ದೇವೆ. 2021ರಲ್ಲಿ ಇದ್ದಕ್ಕಿದ್ದಂತೆಯೇ ಎದೆ ನೋವು ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದೆ. ರಕ್ತನಾಳ ಎರಡು ಕಡೆ ಬ್ಲಾಕ್‌ ಆಗಿದ್ದರಿಂದ ಸ್ಟಂಟ್‌ ಅಳವಡಿಸಿದರು. ಈ ಸಂದರ್ಭ ಗೆಳೆಯ ಅರುಣ್‌ ನನ್ನ ಆರೋಗ್ಯ ಸುಧಾರಣೆಗಾಗಿ ಹರಕೆ ಹೊತ್ತಿದ್ದರು. ಈಚೆಗೆ ಧರ್ಮಸ್ಥಳಕ್ಕೆ ಒಟ್ಟಿಗೇ ತೆರಳಿ ಹರಕೆ ತೀರಿಸಿ ಬಂದೆವು’ ಎಂದು ಅನಿಸ್‌ ಪಾಷ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಧರ್ಮ, ಆಚರಣೆಗಳು ಬೇರೆಯಾದರೂ ಅರುಣ್‌ ಅವರ ಧಾರ್ಮಿಕ ನಂಬಿಕೆಗಳಿಗೆ ಯಾವುದೇ ಧಕ್ಕೆಯಾಗದಂತೆ ಹರಕೆ ನೆರವೇರಿಸಿದ್ದೇನೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನ, ಇನ್ನೊಬ್ಬರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವುದೇ ನಿಜವಾದ ಧರ್ಮ ಎಂಬ ಖುರಾನ್‌ ಸಾಲುಗಳಂತೆ ನಾವು ಎಲ್ಲರೊಳಗೆ ಒಂದಾಗಿ ಬದುಕುತ್ತಿದ್ದೇವೆ’ ಎಂದು ಅವರು ವಿವರಿಸಿದರು.

‘ಯಾರಿಂದಲೂ ನ್ಯಾಯ ಸಿಗದಿದ್ದಾಗ ವಕೀಲ ಅನಿಸ್‌ ಪಾಷ ಅವರು ನನಗೆ ನ್ಯಾಯ ಕೊಡಿಸಿದ್ದರು. ಅವರು ವಯಸ್ಸಿನಲ್ಲಿ ಹಿರಿಯರಾದರೂ ನಮ್ಮ ಸ್ನೇಹಕ್ಕೆ ಅಡ್ಡಿಯಾಗಿಲ್ಲ. ಬಡವರಿಗೆ ಉಚಿತ ಸೇವೆ ನೀಡುವ ಅವರು ಚೆನ್ನಾಗಿರಬೇಕು. ಅವರ ನೆರವು ಇನ್ನೂ ಕೆಲವರಿಗೆ ಸಿಗಬೇಕು ಎಂದು ಮಾಡಿಕೊಂಡಿದ್ದ ಹರಕೆ ತೀರಿಸಿದೆವು’ ಎಂದು ಅರುಣ್‌ಕುಮಾರ್‌ ಸಂತಸ ವ್ಯಕ್ತಪಡಿಸಿದರು.

ತುಲಾಭಾರ ಹರಕೆ ಸಲ್ಲಿಸಲು ₹ 4300 ಹಣ ನೀಡಿದ್ದ ರಸೀದಿ
ಅನಿಸ್‌ ಪಾಷ
ಅರುಣ್‌ ಕುಮಾರ್‌
ವಿವಿಧ ಭಾಷೆ ಸಂಸ್ಕೃತಿ ಧರ್ಮಗಳ ಜನ ಸೌಹಾರ್ದದಿಂದ ಬದುಕುತ್ತಿರುವ ದೇಶ ನಮ್ಮದು. ಇದಕ್ಕೆ ಕೆಲವರಿಂದ ಧಕ್ಕೆಯಾಗುತ್ತಿರುವುದು ಬೇಸರದ ಸಂಗತಿ. ಎಲ್ಲರ ನಡುವೆ ಪ್ರೀತಿ ವಿಶ್ವಾಸ ಶಾಂತಿ ನೆಮ್ಮದಿ ಮುಖ್ಯ.
-ಅನಿಸ್‌ ಪಾಷ ವಕೀಲರು ದಾವಣಗೆರೆ
ಮನುಷ್ಯರು ಜತೆಗೆ ಬಾಳಲು ಸಾಧ್ಯವಿದೆ. ಮನುಷ್ಯತ್ವ ಅರಿತು ನಡೆದರೆ ಯಾವ ಸಮಸ್ಯೆಯೂ ಇರುವುದಿಲ್ಲ.
-ಅರುಣ್‌ ಕುಮಾರ್‌ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.