ADVERTISEMENT

ದಾವಣಗೆರೆ: ರಕ್ಷಣೆಗಾಗಿ ಕಾದಿವೆ ಐತಿಹಾಸಿಕ ಸ್ಮಾರಕಗಳು

ಸ್ಮಿತಾ ಶಿರೂರ
Published 7 ಫೆಬ್ರುವರಿ 2022, 4:45 IST
Last Updated 7 ಫೆಬ್ರುವರಿ 2022, 4:45 IST
ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಶಿವಾಜಿ ಮಹಾರಾಜದ ತಂದೆ ಷಹಾಜೀ ಅವರ ಸಮಾಧಿ ಸ್ಥಳ.
ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಶಿವಾಜಿ ಮಹಾರಾಜದ ತಂದೆ ಷಹಾಜೀ ಅವರ ಸಮಾಧಿ ಸ್ಥಳ.   

ದಾವಣಗೆರೆ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ (ಎಎಸ್‌ಐ)ಯಿಂದ ಗುರುತಿಸಿರುವ ಸ್ಮಾರಕಗಳು ಕೇವಲ ನಾಲ್ಕು. ಹರಿಹರದ ಹರಿಹರೇಶ್ವರ ದೇವಾಲಯ, ಚನ್ನಗಿರಿಯ ಚನ್ನಮ್ಮಾಜಿ ಕೋಟೆ, ಷಹಾಜಿ ಸಮಾಧಿ ಹಾಗೂ ಸಂತೇಬೆನ್ನೂರಿನಪುಷ್ಕರಿಣಿ ಹಾಗೂ ಮುಸಾಫಿರ್‌ ಖಾನ್‌.

ಜಿಲ್ಲೆಯಲ್ಲಿ ನೂರಾರು ವರ್ಷಗಳಷ್ಟು ಹಳೆಯ ಸ್ಮಾರಕಗಳು ಹಲವು ಇವೆ. ಕೆಲವನ್ನು ತಜ್ಞರು, ಸ್ಥಳೀಯರುಗುರುತಿಸಿದ್ದರೆ, ಇನ್ನೂ ಎಷ್ಟೋ ಬೆಳಕಿಗೆ ಬಂದಿಲ್ಲ. ಅವುಗಳನ್ನು ಗುರುತಿಸಿ, ರಕ್ಷಣೆಯ ಭಾರ ಹೊರುವ ಕಾರ್ಯಕ್ಕೆ ಸರ್ಕಾರ ಇನ್ನೂ ಮುಂದಾಗದಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ಇರುವ 4 ಸ್ಮಾರಕಗಳಲ್ಲೂ ಹರಿಹರೇಶ್ವರ ದೇವಾಲಯ ಮಾತ್ರ ಜಿಲ್ಲೆಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಉಳಿದವು ಚಿತ್ರದುರ್ಗ ಕಚೇರಿಯ ವ್ಯಾಪ್ತಿಗೆ ಸೇರುತ್ತವೆ.

‘ಸ್ಮಾರಕಗಳನ್ನು ಗುರುತಿಸಲು ಜಿಲ್ಲಾಡಳಿತದಿಂದ ಇಲಾಖೆಗೆ ಸೂಕ್ತ ದಾಖಲೆಗಳೊಂದಿಗೆ ಪ್ರಸ್ತಾವ ಬಂದರೆ ಬೆಂಗಳೂರಿನ ಕೇಂದ್ರ ಕಚೇರಿಯು ಅವುಗಳನ್ನು ಪರಿಶೀಲಿಸಿ ಸ್ಮಾರಕ ಎಂದು ಘೋಷಣೆ ಮಾಡುತ್ತದೆ. ಸದ್ಯಕ್ಕೆ ಜಿಲ್ಲಾಡಳಿತದಿಂದ ಹೊಸ ಪ್ರಸ್ತಾವಗಳು ಯಾವವೂ ಬಂದಿಲ್ಲ’ ಎಂದು ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ ಸ್ಮಾರಕಗಳ ನಿರ್ವಹಣೆಗೆ ತಲಾ ₹ 3 ಲಕ್ಷಗಳಷ್ಟು ಅನುದಾನ ಬರುತ್ತದೆ. ಇದು ಸಾಲುವುದಿಲ್ಲ. ಇರುವುದರಲ್ಲೇ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ಪ್ರವಾಸೋದ್ಯಮ ಇಲಾಖೆಯಿಂದ ಕೆಲವು ಐತಿಹಾಸಿಕ ಮಹತ್ವದ ಸ್ಥಳಗಳನ್ನು ಗುರುತಿಸಿ ಘೋಷಿಸಲಾಗಿದೆ. ಆದರೆ, ಅವುಗಳ ಅಭಿವೃದ್ಧಿಗೆ ಯಾವುದೇ ಅನುದಾನ ಬರುತ್ತಿಲ್ಲ. ಪಟ್ಟಿ ಮಾಡಿ ಬಿಟ್ಟರೆ ಪ್ರಯೋಜನವಿಲ್ಲ. ಕಾಲಕಾಲಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಆಗ ಮಾತ್ರ ಅವುಗಳ ಅಭಿವೃದ್ಧಿ ಹಾಗೂ ರಕ್ಷಣೆ ಸಾಧ್ಯ. ನದಿತೀರದ ಪ್ರದೇಶಗಳಲ್ಲಿ ಇರುವ ಐತಿಹಾಸಿಕ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ. ನ್ಯಾಮತಿ ತಾಲ್ಲೂಕಿನ ಗಡ್ಡೆ ರಾಮೇಶ್ವರ, ತೀರ್ಥ ರಾಮೇಶ್ವರ ಇವು ನದಿತೀರದ ಸುಂದರ ಐತಿಹಾಸಿಕ ತಾಣಗಳು. ಗಡ್ಡೆ ರಾಮೇಶ್ವರದಲ್ಲಿ ರೋಪ್‌ವೇ ಮಾಡಿದಲ್ಲಿ ಅತ್ಯುತ್ತಮ ಪ್ರವಾಸಿ ತಾಣವಾಗಲಿದೆ. ಹರಿಹರೇಶ್ವರ ದೇವಾಲಯ ಕೇಂದ್ರ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬಂದಿದ್ದರೂ ಅಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಫಾಲಾಕ್ಷಿ ಬೇಸರ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲಾದ ಐತಿಹಾಸಿಕ ಸ್ಥಳಗಳು: ಮಾಯಕೊಂಡದ ಹಿರೇಮದಕರಿ ನಾಯಕನ ಸಮಾಧಿ, ಹರಿಹರದ ಹರಿಹರೇಶ್ವರ ದೇವಸ್ಥಾನ, ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ, ಚನ್ನಗಿರಿ ಕೋಟೆ, ಹೊದಿಗೆರೆಯ ಷಹಾಜಿ ಸಮಾಧಿ, ಜೋಳದಾಳ್‌ನ ಅಮ್ಮನಗುಡ್ಡ, ಸಂತೇಬೆನ್ನೂರಿನ ಪುಷ್ಕರಿಣಿ, ನ್ಯಾಮತಿ ತಾಲ್ಲೂಕಿನ ಕುರುವದಲ್ಲಿರುವ ಗಡ್ಡೆರಾಮೇಶ್ವರ ದೇವಸ್ಥಾನ, ತೀರ್ಥರಾಮೇಶ್ವರ ದೇವಸ್ಥಾನ, ಜಗಳೂರಿನ ಕಣ್ವಕುಪ್ಪೆ ಕೋಟೆ, ಆನೆಕೊಂಡದ ದೇವಾಲಯ, ಆನಗೋಡು, ನೀರ್ಥಡಿಯ ರಂಗನಾಥಸ್ವಾಮಿ ದೇವಾಲಯ, ನಂದಿಗುಡಿಯ ಈಶ್ವರದೇವಾಲಯ, ಕೊಕ್ಕನೂರಿನ ಕಲಿವೀರ ಆಂಜನೇಯ ದೇವಾಲಯ, ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವಾಲಯ, ದೇವರಹಳ್ಳಿಯ ರಂಗನಾಥಸ್ವಾಮಿ ದೇವಾಲಯ.

ಪುರಾತತ್ವ ಇಲಾಖೆ ಸ್ವಇಚ್ಛೆಯಿಂದ ಸಮೀಕ್ಷೆ ನಡೆಸಲಿ
ಜಿಲ್ಲೆಯ ಹಲವೆಡೆ ಸ್ಮಾರಕಗಳು ಇದ್ದು, ವಿನಾಶದತ್ತ ಸಾಗಿವೆ. ಗ್ರಾಮಗಳಲ್ಲಿ ನೂರಾರು ವರ್ಷ ಹಳೆಯ ದೇಗುಲಗಳನ್ನು ನಾಶಪಡಿಸಿ ಗ್ರಾನೈಟ್‌ ದೇಗುಲಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಹಳೆಯ ಸ್ಮಾರಕಗಳ ಮಹತ್ವದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಇರುವುದಿಲ್ಲ. ಅವರಾಗಿಯೇ ಸ್ಮಾರಕ ಸಂರಕ್ಷಣೆ ಮಾಡಿ ಎಂದು ಪುರಾತತ್ವ ಇಲಾಖೆಗೆ ಅರ್ಜಿ ಹಾಕುವುದುಲ್ಲ. ಹೀಗಾಗಿ ಪುರಾತತ್ವ ಇಲಾಖೆಯೇ ಸ್ವಇಚ್ಛೆಯಿಂದ ಮುಂದೆ ಬಂದು ಸ್ಮಾರಕಗಳ ಸಮೀಕ್ಷೆ ನಡೆಸಿ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು.

ಹರಿಹರ ತಾಲ್ಲೂಕಿನ ಕೊಮಾರನಹಳ್ಳಿಯ ಬಳಿ ಮಾನವನ ಶಿಲಾಯುಗದ ನೆಲೆಯನ್ನು ಪತ್ತೆ ಮಾಡಲಾಗಿದೆ. ಈ ಸ್ಥಳವನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ. ನ್ಯಾಮತಿ ತಾಲ್ಲೂಕಿನ ತ್ರಿಕೂಟೇಶ್ವರ ದೇವಸ್ಥಾನ, ಎಲೆಬೇತೂರಿನಕಲ್ಲೇಶ್ವರ ದೇಗುಲ... ಹೀಗೆ ಹಲವು ಮಹತ್ವದ ಸ್ಥಳಗಳು ಇವೆ. ರಾಜ್ಯ ಪ್ರಾಚ್ಯ ವಸ್ತು ಇಲಾಖೆಯುವರು ಜಿಲ್ಲೆಯ ತಜ್ಞರೊಂದಿಗೆ ಚರ್ಚಿಸಿ ಇಂಥ ಸ್ಥಳಗಳನ್ನು ಗುರುತಿಸಿ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ.
– ಡಾ. ಹೊನ್ನೂರುಸ್ವಾಮಿ ಎಚ್‌., ಸಹಾಯಕ ಪ್ರಾಧ್ಯಾಪಕರು, ಇತಿಹಾಸ ಹಾಗೂ ಪುರಾತತ್ವ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ.

***

ಪ್ರಮುಖ ದೇಗುಲದಲ್ಲೂ ಸೌಲಭ್ಯ ಕೊರತೆ
-
ಇನಾಯತ್‌ ಉಲ್ಲಾ ಟಿ.
ಹರಿಹರ: ನಗರದ ಹರಿಹರೇಶ್ವರ ಸ್ವಾಮಿ ದೇವಸ್ಥಾನ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ, ಕೇಂದ್ರ ಪುರಾತತ್ವ ಸಮೀಕ್ಷೆ ಇಲಾಖೆ (ಎಎಸ್‍ಐ) ಮತ್ತು ಮುಜರಾಯಿ ಇಲಾಖೆಗಳ ನಿಯಂತ್ರಣದಲ್ಲಿದೆ. ಆದರೂ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ.

ಭಕ್ತರಿಗೆ ಅಗತ್ಯ ಮೂಲಸೌಕರ್ಯ ವ್ಯವಸ್ಥೆ ಮಾಡಬೇಕಿದೆ. ಶಾಸನ ಮತ್ತು ದೇವಸ್ಥಾನಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ಶತಮಾನಗಳಿಂದ ಬಿಸಿಲು, ಮಳೆಯಲ್ಲಿ ನಿಂತಿರುವ ಶಾಸನಗಳಿಗೆ ಚಾವಣಿ ನಿರ್ಮಿಸಬೇಕಿದೆ.

‘ಸಂಜೆಯ ಹೊತ್ತು ಆವರಣದೊಳಗೆ ಬೆಳಕು ಮೂಡುವಂತೆ ಹೈಮಾಸ್ಟ್ ದೀಪ, ಶೌಚಾಲಯದ ವ್ಯವಸ್ಥೆ ಮಾಡಬೇಕಿದೆ. ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ. ಮೂರು ಇಲಾಖೆಗಳ ಅಡಿ ಆಡಳಿತಕ್ಕೆ ಒಳಪಟ್ಟಿರುವುದು ಹಾಗೂ ಇವರ ನಡುವೆ ಸಂವಹನ, ಕಾಳಜಿ ಕೊರತೆಯಿಂದಾಗಿ ದೇವಸ್ಥಾನ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ’ ಎಂಬುದು ಇಲ್ಲಿಯ ನಾಗರಿಕರ ಆರೋಪವಾಗಿದೆ.

‘ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕಾಮಗಾರಿ ನಡೆಯುತ್ತಿದೆ. ಶೌಚಾಲಯ ಬ್ಲಾಕ್ ಹಾಗೂ ಹೈಮಾಸ್ಟ್ ದೀಪ ಅಳವಡಿಕೆಗೆ ಅನುಮತಿಗಾಗಿ ಮನವಿ ಸಲ್ಲಿಸಲಾಗಿದೆ’ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.

ಕೇಂದ್ರ ಪುರಾತತ್ವ ಇಲಾಖೆ (ಎಎಸ್‌ಐ) ಜಿಲ್ಲಾ ಸಹಾಯಕ ಸಂರಕ್ಷಣಾಧಿಕಾರಿ ಸುಧೀರ್ ಮಾತನಾಡಿ, ‘ಶಾಸನಗಳಿರುವ ಜಾಗದಲ್ಲಿ ಶೀಟಿನ ಚಾವಣಿ ನಿರ್ಮಿಸಲಾಗುವುದು. ಸೂಕ್ತ ಪ್ರಸ್ತಾವ ಸಲ್ಲಿಸಿದರೆ ಅಭಿವೃದ್ಧಿ ಕಾರ್ಯಕ್ಕೆ ಅನುಮತಿ ನೀಡಲಾಗುತ್ತದೆ’ ಎಂದರು.

ಆಮೆಗತಿಯ ಅಭಿವೃದ್ಧಿ
-
ಕೆ.ಎಸ್. ವೀರೇಶ್ ಪ್ರಸಾದ್
ಸಂತೇಬೆನ್ನೂರು: ಇಲ್ಲಿಯ ಪುಷ್ಕರಣಿಯು ಸಮೃದ್ಧ ಐತಿಹಾಸಿಕ ಹಿನ್ನೆಲೆ, ಕಲ್ಪನೆಗೂ ನಿಲುಕದ ಕಲಾತ್ಮಕ ನಿರ್ಮಾಣ ಶೈಲಿ ಹೊಂದಿದೆ. ಬೃಹತ್ ಕಮಾನುಗಳ ಮುಸಾಫಿರ್ ಖಾನ, ಜಲಸಿರಿ ಮಧ್ಯದ ವಸಂತ ಮಂಟಪ, ಸುತ್ತಲಿನ ಶಿಲಾ ಮಂಟಪಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಆದರೆ, ಪ್ರವಾಸಿಗರಿಗೆ ಪುರಾತತ್ವ ಇಲಾಖೆಯಿಂದ ನಿರೀಕ್ಷಿತ ಸೌಲಭ್ಯಗಳು ಸಿಗುತ್ತಿಲ್ಲ. 10 ಎಕರೆ ಪ್ರದೇಶದಲ್ಲಿ ಪುಷ್ಕರಿಣಿ ನಿವೇಶನ ಇದೆ. ಮುಂಭಾಗದಲ್ಲಿ ಒಂದಿಷ್ಟು ಹುಲ್ಲು ಹಾಸು ಪೋಷಣೆ ನಡೆದಿದೆ. ಉಳಿದ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದಿವೆ. ಮಳೆಗಾಲದಲ್ಲಿ ಪುಷ್ಕರಿಣಿ ಸುತ್ತ ದಟ್ಟ ಹುಲ್ಲು ಬೆಳೆದಿರುತ್ತದೆ. ದಶಕದಿಂದ ಪ್ರಗತಿ ಕಾರ್ಯ ಆಮೆಗತಿಯಲ್ಲಿದೆ.

ಆಧುನಿಕ ಸೌಲಭ್ಯದ ಶೌಚಾಲಯ ನಿರ್ಮಾಣವಾಗಿ ವರ್ಷ ಕಳೆದರೂ ಉದ್ಘಾಟನೆಯಾಗಿಲ್ಲ. ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಪುಷ್ಕರಿಣಿಯ ಕುರುಹೂ ಅರಿವಿಗೆ ಬರುವುದಿಲ್ಲ. ಒಂದೇ ಒಂದು ವಿದ್ಯುತ್ ದೀಪವನ್ನೂ ಅಳವಡಿಸಲಾಗಿಲ್ಲ. ಜಲ ಸಂಪನ್ಮೂಲ ಆನೆಗುಂಡಿಗೆ ತಾಂತ್ರಿಕ ಅಭಿವೃದ್ಧಿಗೆ ಚಿಂತನೆ ನಡೆದಿಲ್ಲ. ಕುಡಿಯುವ ನೀರಿನ ಸೌಲಭ್ಯ ಇಲ್ಲ. ರಾತ್ರಿ ಕಾವುಲುಗಾರರೂ ಇಲ್ಲ. ‘ಉದ್ಯಾನವನ್ನು ವಿಸ್ತರಿಸಬೇಕು. ಮರಗಿಡಗಳ ಪೋಷಣೆ ನಡೆಸಬೇಕು. ಪುಷ್ಕರಿಣಿ ತುಂಬಿದ ಪರಿಣಾಮವಾಗಿ ಆಳ ಹೆಚ್ಚಿದೆ. ಪ್ರವಾಸಿಗರ ರಕ್ಷಣೆಗಾಗಿ ಲೋಹದ ತಡೆಗೋಡೆ ನಿರ್ಮಿಸಬೇಕು. ಮಕ್ಕಳ ಆಟಿಗೆಗಳನ್ನು ಅಳವಡಿಸಿಬೇಕು. ಪುರಾತತ್ವ ಇಲಾಖೆ ಅಧಿಕಾರಿಗಳು ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಅಭಿವೃದ್ಧಿಗೆ ಬದ್ಧತೆ ತೋರಬೇಕು’ ಎನ್ನುತ್ತಾರೆ ಪ್ರವಾಸಿಗರು.

ಹಲವು ಐತಿಹಾಸಿಕ ನೆಲೆಗಳತ್ತ ನಿರ್ಲಕ್ಷ್ಯ: ಪುರಾತತ್ವ ಇಲಾಖೆ ವ್ಯಾಪ್ತಿಗೆ ಸೇರದ ಹಲವು ಐತಿಹಾಸಿಕ ನೆಲೆಗಳು ಜಿಲ್ಲೆಯಲ್ಲಿವೆ. ಚನ್ನಗಿರಿ ತಾಲ್ಲೂಕಿನ ಕಲ್ಕೆರೆಯ ಹೊಯ್ಸಳ ಶೈಲಿಯ ಕಲ್ಲೇಶ್ವರ ದೇಗುಲ, ಕತ್ತಲಗೆರೆಯ ರಾಮೇಶ್ವರ ದೇಗುಲ, ನಲ್ಕುದರೆ ಬಳಿಯ ಕಲ್ಲೇಶ್ವರ ತ್ರೈಪುರುಷ ದೇಗುಲಗಳು ಪ್ರಮುಖವಾಗಿವೆ. ನಲ್ಕುದರೆ ಗ್ರಾಮವು ಅನೇಕ ಶಾಸನಗಳಿಂದ ಕೂಡಿದ್ದು ಬಯಲು ಪ್ರಾಚ್ಯವಸ್ತು ಸಂಗ್ರಹಾಲಯದಂತಿದೆ. ಇವುಗಳನ್ನು ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಯಲ್ಲಿ ನೋಂದಾಯಿಸುವ ಮೂಲಕ ಇತಿಹಾಸ ಸಂರಕ್ಷಿಸಬೇಕು ಎಂದು ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್ ಅಭಿಪ್ರಾಯಪಟ್ಟಿದ್ದಾರೆ.

ನಡೆಯದ ಅಭಿವೃದ್ಧಿ ಕಾಮಗಾರಿಗಳು
-
ಎಚ್.ವಿ. ನಟರಾಜ್
ಚನ್ನಗಿರಿ: ಪಟ್ಟಣದಲ್ಲಿ ಕೆಳದಿ ಚೆನ್ನಮ್ಮ ನಿರ್ಮಿಸಿರುವ ಕೋಟೆಯು ಕೇಂದ್ರ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿ ಪ್ರವಾಸಿಗರನ್ನು ಸೆಳೆಯುವಲ್ಲಿಯೂ ವಿಫಲವಾಗಿದೆ.

ಈ ಕೋಟೆ 61 ಮೀ ಎತ್ತರ, 126.50 ಮೀ ಅಗಲವಾಗಿದೆ. ಒಳಗೆ ನಿಸರ್ಗ ನಿರ್ಮಿತ ಕಲ್ಲು ಬಂಡೆಗಳ ಮಧ್ಯೆ ಪ್ರಪಾತದಂತಹ ಹೊಂಡವಿದೆ. ಈ ಹೊಂಡದ ಕೆಳಗೆ ಇಳಿಯಲು ಕಿರಿದಾದ ಮೆಟ್ಟಿಲುಗಳಿವೆ. ಆದರೆ, ಈಗ ಇದು ಸಂಪೂರ್ಣ ಹಾಳಾಗಿ ಹೋಗಿದೆ. ಪುರಾತತ್ವ ಇಲಾಖೆಯವರು ಕೋಟೆಯ ಸುತ್ತ ತಂತಿ ಬೇಲಿ ಹಾಕಿರುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ. ಪುರಸಭೆಯಿಂದ ಕೋಟೆಯ ಮೇಲೆ ಹೋಗಲು ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಒಳಗೆ ಗಿಡಗಳನ್ನು ನೆಡಲಾಗಿದೆ.

‘ಮುಂದಿನ ಪೀಳಿಗೆಗೆ ಈ ಸ್ಮಾರಕಗಳನ್ನು ಸಂರಕ್ಷಿಸಬೇಕಾದರೆ ಪುರಾತತ್ವ ಇಲಾಖೆ ಮೊದಲು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು’ ಎನ್ನುತ್ತಾರೆ ಪಟ್ಟಣದ ಕನ್ನಡ ಪರ ಹೋರಾಟಗಾರ ಬುಳ್ಳಿ ನಾಗರಾಜ್.

ಷಹಾಜಿ ಸಮಾಧಿ ಸ್ಥಳ: ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಅವರ ಸಮಾಧಿ ಸ್ಥಳವಿದೆ. ಈ ಸ್ಥಳ ಕೂಡ ಕೇಂದ್ರ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತದೆ.

‘ಪುರಾತತ್ವ ಇಲಾಖೆಯಿಂದ ಸಮಾಧಿ ಸ್ಥಳದ ಸುತ್ತ ಕಾಂಪೌಂಡ್ ನಿರ್ಮಿಸಿ, ಒಂದಿಷ್ಟು ಹೂ–ಗಿಡಗಳನ್ನು ಬೆಳೆಸಿರುವುದನ್ನು ಬಿಟ್ಟರೆ ಬೇರಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಪ್ರತಿ ವರ್ಷ ಜ. 23ರಂದು ಷಹಾಜೀ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ಷತ್ರಿಯ ಮರಾಠ ಸಮಾಜದವರು ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ’ ಎನ್ನುತ್ತಾರೆ ಗ್ರಾಮದ ನಿವಾಸಿ ರುದ್ರಮುನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.