ADVERTISEMENT

ಐತಿಹಾಸಿಕ ತಿರುಗಣಿ ರಥೋತ್ಸವ

ಬೆನಕನಹಳ್ಳಿ: ಬೆನಕೇಶ್ವರಸ್ವಾಮಿ ರಥೋತ್ಸವಕ್ಕೆ ಹರಿದುಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 5:29 IST
Last Updated 21 ಮಾರ್ಚ್ 2022, 5:29 IST
ಸಾಸ್ವೆಹಳ್ಳಿ ಸಮೀಪದ ಬೆನಕನಹಳ್ಳಿ ಗ್ರಾಮದ ಬೆನಕೇಶ್ವರ ಸ್ವಾಮಿ ತಿರುಗುಣಿ ರಥೋತ್ಸವವು ಸಂಭ್ರಮದಿಂದ ನಡೆಯಿತು.
ಸಾಸ್ವೆಹಳ್ಳಿ ಸಮೀಪದ ಬೆನಕನಹಳ್ಳಿ ಗ್ರಾಮದ ಬೆನಕೇಶ್ವರ ಸ್ವಾಮಿ ತಿರುಗುಣಿ ರಥೋತ್ಸವವು ಸಂಭ್ರಮದಿಂದ ನಡೆಯಿತು.   

ಸಾಸ್ವೆಹಳ್ಳಿ: ಐತಿಹಾಸಿಕ ಹಿನ್ನೆಲೆಯುಳ್ಳ ಸಮೀಪದಬೆನಕನಹಳ್ಳಿ ಗ್ರಾಮದ ಬೆನಕೇಶ್ವರ ಸ್ವಾಮಿಯ ತಿರುಗಣಿ ರಥೋತ್ಸವ ಭಾನುವಾರ ಬೆಳಿಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ಭಕ್ತರು ರಥವನ್ನು ಕನಕಾಂಬರ, ಸೇವಂತಿಗೆ, ಜಾಜಿ, ಮಲ್ಲಿಗೆ ಹಾಗೂ ಆಳೆತ್ತರದ ಹೂವಿನ ಹಾರಗಳನ್ನು ಹಾಕಿ, ಬಣ್ಣದ ಬಟ್ಟೆ, ಬಾಳೆ ಹಣ್ಣಿನ ಗೊನೆ ಸೇರಿ ಹಲವು ಹಣ್ಣುಗಳಿಂದ ಸಿಂಗಾರ ಮಾಡಿದ್ದರು.

ಚಿಕ್ಕಬಾಸೂರು ಬಸವೇಶ್ವರಸ್ವಾಮಿ, ಗ್ರಾಮದ ಬೆನಕೇಶ್ವರ ಸ್ವಾಮಿ ರಥಾರೋಹಣ ಮಾಡುತ್ತಿದ್ದಂತೆ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ‘ಬೆನಕೇಶ್ವರ ಮಹಾರಾಜ್‍ ಕಿ ಜೈ’, ‘ಬಸವೇಶ್ವರ ಸ್ವಾಮಿಗೆ ಜೈ’ ಎಂಬ ಜೈಕಾರಗಳೊಂದಿಗೆ ರಥವನ್ನು ಎಳೆದರು. ಬೆನಕೇಶ್ವರ ದೇವಸ್ಥಾನದ ಮುಂಭಾಗ ಹಾಗೂ ರಥೋತ್ಸವದ ಮುಂಭಾಗ ಒಣಕೊಬ್ಬರಿ ಸುಟ್ಟು ಹರಕೆ ಸಲ್ಲಿಸಿದರು. ಪೂಜೆ ಸಲ್ಲಿಸಿ ಮಳೆ, ಬೆಳೆ ಸಮೃದ್ಧಿಯಾಗಲೆಂದು ಬೇಡಿಕೊಂಡರು.

ADVERTISEMENT

ರಥೋತ್ಸವದ ನಂತರ ಗ್ರಾಮದ ಆಂಜನೇಯ, ಬೀರಪ್ಪ, ಕರಿಯಮ್ಮ, ದುರ್ಗಮ್ಮ ಉತ್ಸವಮೂರ್ತಿಗಳನ್ನು ಬೆನಕೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಜವಳ ಕಾರ್ಯಕ್ರಮ ನಡೆಯಿತು. ಸಂಜೆ ಓಕುಳಿ ಉತ್ಸವದ ನಂತರ ದೇವರನ್ನು ತುಂಗಭದ್ರಾ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ರಾಜಬೀದಿ ಮೆರವಣಿಗೆ ಮೂಲಕ ಮೂಲ ಸ್ಥಳದಲ್ಲಿ ಮರು ಪ್ರತಿಷ್ಠಾಪಿಸಲಾಯಿತು.

ತಿರುಗುಣಿ ವಿಶೇಷ: ತಿರುಗುಣಿ ರಥೋತ್ಸವದಲ್ಲಿ ರಥವನ್ನು ಎರಡು ಭಾಗ ಮಾಡಲಾಗುತ್ತದೆ. ಕುಂಬಾರನ ಚಕ್ರದ ಮಾದರಿಯಲ್ಲಿ ತಲೆಯ ಭಾಗಕ್ಕೆ ಬೇರಿಂಗ್ ಅಳವಡಿಸಿ ಚಕ್ಕಡಿ ಗಾಲಿ ಬಳಸಿ ಇದನ್ನು ನಿರ್ಮಿಸಲಾಗುತ್ತದೆ. ರಥದ ಒಳಗಡೆ ಇರುವ ಭಕ್ತರು ಚಕ್ರವನ್ನು ಕುಂಬಾರರ ಗಾಲಿ ತಿರುಗಿಸಿದಂತೆ ತಿರುಗಿಸುತ್ತಾರೆ. ಆಗ ರಥದ ಮೇಲ್ಭಾಗವು ಬುಗುರಿಯಂತೆ ತಿರುಗುತ್ತದೆ. ಇದು ನೋಡುಗರ ಗಮನವನ್ನು ಸೆಳೆಯುತ್ತದೆ.

ಗ್ರಾಮದ ಐತಿಹ್ಯ: ಹಿಂದೆ ದನಗಾಹಿಗಳು ದನ ಮೇಯಿಸುತ್ತಿದ್ದಾಗ ಹಸುವೊಂದು ಬೆಟ್ಟದ ಪೊದೆಯ ಹುತ್ತಕ್ಕೆ ಹಾಲು ಸುರಿಸುತ್ತಿತ್ತು. ಇದು ಊರಿನ ಗೌಡರಿಗೆ ತಿಳಿದು ಹುತ್ತವನ್ನು ಪರಿಶೀಲಿಸಿದಾಗ ಕಲ್ಲಿನಲ್ಲಿ ಗಣೇಶನ ರೂಪ ಮೂಡಿರುವುದು ಗೋಚರಿಸುತ್ತದೆ. ಅಲ್ಲಿ ದೇವಸ್ಥಾನ ನಿರ್ಮಾಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.