ADVERTISEMENT

ಸಂತೇಬೆನ್ನೂರು: ಬರದಲ್ಲೂ ಯುವಕರ ಯಶಸ್ವಿ ಜೇನುಕೃಷಿ, ತುಪ್ಪಕ್ಕೆ ಭಾರಿ ಬೇಡಿಕೆ

ಕೆ.ಎಸ್.ವೀರೇಶ್ ಪ್ರಸಾದ್
Published 28 ಫೆಬ್ರುವರಿ 2024, 5:43 IST
Last Updated 28 ಫೆಬ್ರುವರಿ 2024, 5:43 IST
ಪೆಟ್ಟಿಗೆ ಸಿದ್ಧಗೊಳಿಸುತ್ತಿರುವ ರೈತ ಎನ್.ಎಂ.ಶಶಿಕುಮಾರ್
ಪೆಟ್ಟಿಗೆ ಸಿದ್ಧಗೊಳಿಸುತ್ತಿರುವ ರೈತ ಎನ್.ಎಂ.ಶಶಿಕುಮಾರ್   

ಸಂತೇಬೆನ್ನೂರು: ಮಳೆ ಇಲ್ಲದೇ ಬರದ ಕರಿನೆರಳು ತೂಗುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಜೇನುಕೃಷಿಯಲ್ಲಿ ಪರಿಶ್ರಮದಿಂದ ತೊಡಗಿರುವ ಇಬ್ಬರು ಯುವ ರೈತರು ಸ್ಥಳೀಯವಾಗಿಯೇ ಮಾರುಕಟ್ಟೆ ಸೃಷ್ಟಿಸಿಕೊಂಡು ಆದಾಯ ಗಳಿಸುತ್ತಿದ್ದಾರೆ. 

ಕತ್ತಲಗೆರೆ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಎರಡು ದಿನಗಳ ತರಬೇತಿ ಪಡೆದಿರುವ ಸಮೀಪದ ಕೊಂಡದಹಳ್ಳಿಯ ಶಶಿಕುಮಾರ್ ಹಾಗೂ ಸಂತೇಬೆನ್ನೂರಿನ ನಾಗ ಪ್ರಸಾದ್ ಜೇನು ಕೃಷಿ ಮಾಡಿ ಯಶ ಕಂಡಿದ್ದಾರೆ. 

ಕೊಂಡದಹಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ಶಶಿಕುಮಾರ್ 45 ಜೇನು ಪೆಟ್ಟಿಗಳಲ್ಲಿ ಜೇನು ಕೃಷಿಯನ್ನು ಮಾಡುತ್ತಿದ್ದಾರೆ. ಪ್ರತಿ ಜೇನು ಪೆಟ್ಟಿಗೆಗೆ ₹4,500 ಖರ್ಚು ತಗುಲುತ್ತದೆ. ಪೆಟ್ಟಿಗೆ, ಸ್ಟ್ಯಾಂಡ್, ಜೇನು ಹುಳು ಖರೀದಿಸುವ ವೆಚ್ಚ ಇದರಲ್ಲಿ ಸೇರಿವೆ. ಶಶಿಕುಮಾರ್ ಅವರಿಗೆ ಈಗಾಗಲೇ 16 ಪೆಟ್ಟಿಗೆಗಳಿಂದ 20 ಕೆ.ಜಿ. ಜೇನುತುಪ್ಪ ಲಭ್ಯವಾಗಿದೆ. ಕ್ರಮೇಣ 100 ಕೆ.ಜಿ.ವರೆಗೆ ಜೇನು ತುಪ್ಪ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ADVERTISEMENT

ಜೇನುಹುಳುಗಳು ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ವಂಶಾಭಿವೃದ್ಧಿ ನಡೆಸುತ್ತವೆ. ಜನವರಿಯಿಂದ ಮಾರ್ಚ್ ಅವಧಿಯು ಜೇನುತುಪ್ಪದ ಸುಗ್ಗಿಯ ಕಾಲ. ಈ ಅವಧಿಯಲ್ಲಿ ಪ್ರತಿ ಜೇನು ಪೆಟ್ಟಿಗೆಯಿಂದ 1.5 ಕೆ.ಜಿಯಿಂದ 2 ಕೆ.ಜಿ.ಯಷ್ಟು ಜೇನುತುಪ್ಪ ಸಿಗುತ್ತದೆ. ವಾರ್ಷಿಕವಾಗಿ, ಪ್ರತಿ ಪೆಟ್ಟಿಗೆಯಿಂದ 5 ಕೆ.ಜಿ.ಯಷ್ಟು ಜೇನು ತುಪ್ಪ ಲಭ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 

ಸ್ಥಳೀಯವಾಗಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿರುವ ಶಶಿಕುಮಾರ್, ಕಾಲು ಕೆ.ಜಿ. ಜೇನುತುಪ್ಪವನ್ನು ₹250ರಂತೆ ಮಾರಾಟ ಮಾಡುತ್ತಿದ್ದಾರೆ. 

ಜೇನುನೊಣಗಳ ಸಂಸಾರ: ಒಂದು ಜೇನು ಪೆಟ್ಟಿಗೆಯಲ್ಲಿ 8 ರಿಂದ 10 ಫ್ರೇಮುಗಳಿರುತ್ತವೆ. ಒಂದು ರಾಣಿ ಜೇನು, ಒಂದು ಗಂಡು ಜೇನು ಹಾಗೂ ಇತರೆ ಕೆಲಸಗಾರ ಜೇನುನೊಣ ಇರುತ್ತವೆ. ರಾಣಿ ಜೇನು ಸಂತಾನೋತ್ಪತ್ತಿ ಮಾಡುತ್ತದೆ. ಕೆಲಸಗಾರ ಜೇನುನೊಣಗಳು ಗೂಡು ಕಟ್ಟುವುದು, ಆಹಾರ ಸಂಗ್ರಹಣೆ, ಶುಚಿತ್ವ ಕಾಪಾಡುತ್ತವೆ. ಒಂದು ಪೆಟ್ಟಿಗೆಯಲ್ಲಿ ಇರುವ ಜೇನುನೊಣಗಳು ಪ್ರತಿ ವರ್ಷ 5 ರಿಂದ 6 ಕೆ.ಜಿ.ಯಷ್ಟು ಪ್ರಮಾಣದ ಜೇನುತುಪ್ಪ ಉತ್ಪಾದಿಸುತ್ತವೆ ಎಂದು ಕತ್ತಲಗೆರೆ ಕೃಷಿ ವಿಸ್ತರಣಾ ಕೇಂದ್ರದ ಕೃಷಿ ವಿಸ್ತರಣಾ ಅಧಿಕಾರಿ ಡಾ.ಗಂಗಪ್ಪ ಗೌಡ ಬಿರಾದಾರ್ ಮಾಹಿತಿ ನೀಡಿದರು. 

ಭಾರತದ ಆಫಿಸ್ ಸೆರೆನಾ ಇಂಡಿಕಾ ಹಾಗೂ ಯುರೋಪಿಯನ್ ಆಫಿಸ್ ಮೆಲ್ಲಿಫೆರಾ ಜೇನುಹುಳುಗಳನ್ನು ಭಾರತದಲ್ಲಿ ಜೇನು ಕೃಷಿಗೆ ಬಳಸಲಾಗುತ್ತಿದೆ. ಜೇನು ಸಾಕಾಣಿಕೆಯಿಂದ ಅಡಿಕೆ, ಮಾವು ಇತರೆ ತೋಟಗಾರಿಕಾ ಬೆಳೆಗಳಲ್ಲಿ ಶೇ.25 ರಿಂದ 30ರಷ್ಟು ಇಳುವರಿ ವೃದ್ಧಿಸಲಿದೆ ಎಂದು ಅವರು ಹೇಳಿದ್ದಾರೆ. 

ಜೇನುತುಪ್ಪ: ಭರ್ಜರಿ ಆದಾಯ

ಸಂತೇಬೆನ್ನೂರಿನ ನಾಗ ಪ್ರಸಾದ್ ಅವರೂ ಜೇನು ಕೃಷಿಯಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.  ಕಳೆದ ವರ್ಷ 50 ಪೆಟ್ಟಿಗಗಳಲ್ಲಿ ಕೃಷಿ ಮಾಡಿದ್ದ ನಾಗಪ್ರಸಾದ್ 1.5 ಕ್ವಿಂಟಲ್ ಜೇನುತುಪ್ಪ ಲಭಿಸಿತ್ತು. ಪ್ರತಿ ಕೆ.ಜಿ.ಗೆ ₹650ರಂತೆ ಮಾರಾಟ ಮಾಡಿದ್ದರು. ಸದ್ಯ 7 ಜೇನು ಪೆಟ್ಟಿಗೆಗಳಲ್ಲಿ ಅವರು ಜೇನುಕೃಷಿ ನಡೆಸುತ್ತಿದ್ದಾರೆ. 

ಜೇನುಗೂಡಿನ ಫ್ರೇಮ್‌ನೊಂದಿಗೆ ಸಂತೇಬೆನ್ನೂರಿನ ರೈತ ನಾಗಪ್ರಸಾದ್
ಜೇನುಪೆಟ್ಟಿಗೆಯಲ್ಲಿ ಗೂಡು ಕಟ್ಟಿದ ಜೇನುಹುಳ
ಜೇನು ಗೂಡಿನೊಂದಿಗೆ ರೈತ ಶಶಿಕುಮಾರ್
ರೈತ ಶಶಿಕುಮಾರ್ ಅವರು ತಮ್ಮ ತೋಟದಲ್ಲಿ ಅಳವಡಿಸಿರುವ ಜೇನು ಪೆಟ್ಟಿಗೆಗಳು
ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಜೇನುತುಪ್ಪಕ್ಕೆ ₹800 ಬೆಲೆ ಇದೆ. 250 ಗ್ರಾಂ. ತೂಕದ ಬಾಟಲಿಯಲ್ಲಿ ಜೇನು ತುಂಬಿಸಿ ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದೇನೆ. ಬರದಿಂದಾಗಿ ಹೂವುಗಳಿಲ್ಲದೇ ಮಕರಂದದ ಕೊರತೆಯಾಗಿ ಜೇನುತುಪ್ಪ ಸಂಗ್ರಹಣೆ ತಡವಾಗುತ್ತಿದೆ
-ಶಶಿಕುಮಾರ್, ಜೇನುಕೃಷಿಯಲ್ಲಿ ತೊಡಗಿರುವ ಯುವ ರೈತ 
ಪ್ರತಿ ಜೇನು ಪೆಟ್ಟಿಗೆಗೆ ₹4500 ಬೆಲೆ ನಿಗದಿಪಡಿಸಲಾಗಿದ್ದು ಇಲಾಖೆಯಿಂದ ₹3375 ಸಹಾಯಧನ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ಸೇರಿದ ರೈತರಿಗೆ ಶೇ 90ರಷ್ಟು ಸಹಾಯಧನ ಸಿಗಲಿದೆ. ತಾಲ್ಲೂಕಿನಲ್ಲಿ 11 ಜೇನು ಕೃಷಿಗೆ ಪ್ರೋತ್ಸಾಹ ನೀಡಲಾಗಿದೆ.
- ಶ್ರೀಕಾಂತ್, ಹಿರಿಯ ತೋಟಗಾರಿಕಾ ಅಧಿಕಾರಿ ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.