ADVERTISEMENT

ಹೊನ್ನಾಳಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಅಧ್ಯಕ್ಷರಾಗಿ ಎ.ಕೆ.ಮೈಲಪ್ಪ, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ವಿಜೇಂದ್ರಪ್ಪ ಆಯ್ಕೆ: ಬಿಜೆಪಿ ಅಭ್ಯರ್ಥಿ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 15:40 IST
Last Updated 6 ಸೆಪ್ಟೆಂಬರ್ 2024, 15:40 IST
ಹೊನ್ನಾಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್‌, ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಕಾಂಗ್ರೆಸ್‌ ಮುಖಂಡರು ಅಭಿನಂದಿಸಿದರು 
ಹೊನ್ನಾಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್‌, ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಕಾಂಗ್ರೆಸ್‌ ಮುಖಂಡರು ಅಭಿನಂದಿಸಿದರು    

ಹೊನ್ನಾಳಿ: ಇಲ್ಲಿನ ಪುರಸಭೆ ಆಡಳಿತವು ಕಾಂಗ್ರೆಸ್‌ ಪಕ್ಷದ ಕೈವಶವಾಗಿದೆ. ನೂತನ ಅಧ್ಯಕ್ಷರಾಗಿ ಎ.ಕೆ.ಮೈಲಪ್ಪ ಅವಿರೋಧವಾಗಿ ಆಯ್ಕೆಯಾದರೆ, ಸಾವಿತ್ರಮ್ಮ ವಿಜೇಂದ್ರಪ್ಪ 10 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 18 ಸದಸ್ಯರ ಪೈಕಿ ಎ.ಕೆ.ಮೈಲಪ್ಪ ಅವರೊಬ್ಬರೇ ಪ‍ರಿಶಿಷ್ಟ ಜಾತಿಗೆ ಸೇರಿದವರಾಗಿದ್ದರು. ಹೀಗಾಗಿ ಅವರು ಅಧ್ಯಕ್ಷ ಗಾದಿಗೆ ಏರುವುದು ಸುಲಭವಾಯಿತು.  

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಾವಿತ್ರಮ್ಮ ವಿಜೇಂದ್ರಪ್ಪ ಹಾಗೂ ಬಿಜೆಪಿಯಿಂದ ರಂಜಿತಾ ಚನ್ನಪ್ಪ ವಡ್ಡಿ ಉಮೇದುವಾರಿಕೆ ಸಲ್ಲಿಸಿದ್ದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಪಕ್ಷದ ಎಂಟು ಮಂದಿ ಸದಸ್ಯರು ಕೈ ಎತ್ತುವ ಮೂಲಕ ಸಾವಿತ್ರಮ್ಮಗೆ ಬೆಂಬಲ ಸೂಚಿಸಿದರು.  

ADVERTISEMENT

ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ರಂಜಿತಾ ಸೇರಿದಂತೆ ಆ ಪಕ್ಷದ ಯಾವ ಸದಸ್ಯರೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದಿರುವುದು ಅಚ್ಚರಿ ಮೂಡಿಸಿತು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಕಾರ್ಯನಿರ್ವಹಿಸಿದರು. 

ಪುರಸಭಾ ಸದಸ್ಯರಾದ ಧರ್ಮಪ್ಪ, ಹೊಸಕೇರಿ ಸುರೇಶ್, ಮೈಲಪ್ಪ, ತನ್ವೀರ್, ರಾಜೇಂದ್ರಕುಮಾರ್, ಎಂ. ಸುರೇಶ್, ಉಷಾ ಗಿರೀಶ್ ಹಾಗೂ ಭಾವಿಮನೆ ರಾಜಣ್ಣ ಉಪಸ್ಥಿತರಿದ್ದರು. ತಹಶೀಲ್ದಾರ್ ಪಟ್ಟರಾಜಗೌಡ, ಮುಖ್ಯಾಧಿಕಾರಿ ಟಿ.ಲೀಲಾವತಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಜಿ.ಪಂ. ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್.ಸುರೇಂದ್ರ, ಎಚ್.ಬಿ. ಅಣ್ಣಪ್ಪ ಹಾಗೂ ದಲಿತ ಸಂಘಟನೆಗಳ ಮುಖಂಡರು, ಗಣ್ಯರು ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.