
ಹೊನ್ನಾಳಿ: ‘ರಾಜ್ಯದಲ್ಲಿಯೇ ಶೇಂಗಾ ಹಾಗೂ ಮೆಕ್ಕೆಜೋಳದ ಬೆಳೆಯಲ್ಲಿ ಉತ್ತಮ ಇಳುವರಿ ತೆಗೆಯುವ ಮೂಲಕ ಸಾಧನೆ ಮಾಡಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪಡೆದುಕೊಂಡಿರುವ ನ್ಯಾಮತಿ ತಾಲ್ಲೂಕಿನ 8 ರೈತರನ್ನು ಸನ್ಮಾನಿಸುತ್ತಿರುವುದು ಖುಷಿ ಕೊಟ್ಟಿದೆ’ ಎಂದು ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರ ಹಿರೇಕಲ್ಮಠದಲ್ಲಿ ನಡೆದ ರಾಜ್ಯಮಟ್ಟದ ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ರೈತರನ್ನು ಹಾಗೂ ಮಾಜಿ ಸಚಿವ ರೇಣುಕಾಚಾರ್ಯ, ಬಯಲು ಸೀಮೆ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಹಾಗೂ ಕಾರ್ಯಕ್ರಮಕ್ಕೆ ಶ್ರಮಿಸಿದ ಕಾರ್ಯಕರ್ತರು, ಮುಖಂಡರನ್ನು ಸನ್ಮಾನಿಸಿ ಅವರು ಮಾತನಾಡಿದರು.
‘ಪ್ರಶಸ್ತಿ ಪಡೆದಿರುವವರು ಎಲ್ಲರೂ ನ್ಯಾಮತಿ ತಾಲ್ಲೂಕಿನವರು ಎನ್ನುವುದು ಮತ್ತೊಂದು ವಿಶೇಷ. ಈ ಸನ್ಮಾನ ಇತರೆ ತಾಲ್ಲೂಕಿನ ರೈತರಿಗೆ ಸ್ಫೂರ್ತಿ ಹಾಗೂ ಪ್ರೋತ್ಸಾಹ ದಾಯಕವಾಗಬೇಕು’ ಎಂದು ಹೇಳಿದರು.
ಪ್ರಶಸ್ತಿ ಪಡೆದ ರೈತರು:
ಶೇಂಗಾ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದು ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪಡೆದಿರುವ ನ್ಯಾಮತಿ ತಾಲ್ಲೂಕಿನ ರಾಮೇಶ್ವರದ ನವೀನ್, ಬೆಳಗುತ್ತಿಯ ಲಕ್ಷ್ಮಮ್ಮ, ರಾಮೇಶ್ವರದ ಸರ್ವಮಂಗಳಮ್ಮ, ಮಲ್ಲಿಗೇನಹಳ್ಳಿಯ ಮಂಜಪ್ಪ, ಬೆಳಗುತ್ತಿಯ ಕಲಾವತಿ, ಬೆಳಗುತ್ತಿಯ ಚಂದ್ರಪ್ಪ ಹಾಗೂ ಸುರೇಶಪ್ಪ ಹಾಗೂ ಮೆಕ್ಕಜೋಳದ ಬೆಳೆಯನ್ನು ಅತಿ ಹೆಚ್ಚು ಬೆಳೆದು ಸಾಧನೆ ಮಾಡಿರುವ ಬೆಳಗುತ್ತಿಯ ರೇವಣಸಿದ್ದ ಶಿಮೋಳೆ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು.
ನಟ ವಿನಯ್ ರಾಜಕುಮಾರ್ ಅವರಿಂದ ಟೀಸರ್ ಬಿಡುಗಡೆ: ನಟ ವಿನಯ್ ರಾಜಕುಮಾರ್ ಅವರು ರೈತರಿಗಾಗಿಯೇ ಕುರಿತು ಮಾಡಿದ ಸಿನಿಮಾ ‘ಗ್ರಾಮಾಯಣ’ ಕುರಿತು ಪ್ರಚಾರಕ್ಕಾಗಿ ಹೊನ್ನಾಳಿಯ ಕೃಷಿಮೇಳಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಗ್ರಾಮಾಯಣ ಚಿತ್ರದ ಟೀಸರ್ ಹಾಗೂ ಎರಡು ಹಾಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ನಟಿ ಮೇಘಾಶೆಟ್ಟಿ, ನಟ ಹೊನ್ನಾಳಿಯ ಪ್ರಶಾಂತ್, ನಿರ್ದೇಶಕ ದೇವನೂರು ಚಂದ್ರು, ನಿರ್ಮಾಪಕ ಲಹರಿ ಭಾಗವಹಿಸಿದ್ದರು.
ಕೃಷಿಮೇಳಕ್ಕೆ ಸಹಕಾರ ನೀಡಿದ ಸುರೇಶ್ ಹೊಸಕೇರಿ, ಶಾಂತಾ ಸುರೇಶ್, ವಿದ್ಯಾ ಸಂತೋಷ್, ಕುಮಾರಸ್ವಾಮಿ, ಸುರೇಶ್, ಮುಖಂಡರಾದ ಎಚ್.ಎ. ಉಮಾಪತಿ, ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಕಂಚುಗಾರನಹಳ್ಳಿ ಎಚ್.ಕೆ. ಬಸಪ್ಪ, ಅರಕೆರೆ ಮಧುಗೌಡ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ, ಕರವೇ ಅಧ್ಯಕ್ಷ ವಿನಯ್ ವಗ್ಗರ್, ಹೊನ್ನಾಳಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವಿಶ್ವನಾಥ್, ಮುಖಂಡರಾದ ಧರ್ಮಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಕೆ. ಮಲ್ಲೇಶ್, ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ ಬೆನಕನಹಳ್ಳಿ, ಕಡದಕಟ್ಟೆ ದಾನಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.