ADVERTISEMENT

ಹೊನ್ನಾಳಿ: ದಿಕ್ಕು ತಪ್ಪಿಸುವ ನಾಮಫಲಕ

ಹಳೆಯ ನಾಮಫಲಕಗಳ ಪಕ್ಕದಲ್ಲೇ ಹೊಸ ಫಲಕ: ಸಾರ್ವಜನಿಕರಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 5:50 IST
Last Updated 22 ಫೆಬ್ರುವರಿ 2026, 5:50 IST
ಹೊನ್ನಾಳಿಯಲ್ಲಿ ಪಟ್ಟಣ ಪಂಚಾಯಿತಿ ಇದ್ದಾಗ ‘ದಕ್ಷಿಣ ಭಾಗ, 7ನೇ ಅಡ್ಡರಸ್ತೆ, 14ನೇ ವಾರ್ಡ್’ ಎಂಬ ಫಲಕ ಇತ್ತು. ಅದರ ಪಕ್ಕದಲ್ಲಿಯೇ ‘ದುರ್ಗಿಗುಡಿ ಮಧ್ಯಭಾಗ, 7ನೇ ಮುಖ್ಯರಸ್ತೆ, ವಾರ್ಡ್ ನಂ-6’ ಎಂಬ ಹೊಸ ಫಲಕ ಅಳವಡಿಸಲಾಗಿದೆ
ಹೊನ್ನಾಳಿಯಲ್ಲಿ ಪಟ್ಟಣ ಪಂಚಾಯಿತಿ ಇದ್ದಾಗ ‘ದಕ್ಷಿಣ ಭಾಗ, 7ನೇ ಅಡ್ಡರಸ್ತೆ, 14ನೇ ವಾರ್ಡ್’ ಎಂಬ ಫಲಕ ಇತ್ತು. ಅದರ ಪಕ್ಕದಲ್ಲಿಯೇ ‘ದುರ್ಗಿಗುಡಿ ಮಧ್ಯಭಾಗ, 7ನೇ ಮುಖ್ಯರಸ್ತೆ, ವಾರ್ಡ್ ನಂ-6’ ಎಂಬ ಹೊಸ ಫಲಕ ಅಳವಡಿಸಲಾಗಿದೆ   

ಹೊನ್ನಾಳಿ: ಪಟ್ಟಣದ ದುರ್ಗಿಗುಡಿ ವ್ಯಾಪ್ತಿಯಲ್ಲಿ ಪುರಸಭೆ ಅಳವಡಿಸಿರುವ ಬಡಾವಣೆಗಳ ನಾಮಫಲಕಗಳು ಗೊಂದಲ ಸೃಷ್ಟಿಸುವಂತಿದ್ದು, ವಿಳಾಸ ಹುಡುಕುವವರಿಗೆ ತಪ್ಪು ಮಾಹಿತಿ ನೀಡುತ್ತಿವೆ. 

ದುರ್ಗಿಗುಡಿ ದಕ್ಷಿಣ ಭಾಗ, ಮಧ್ಯಭಾಗದಲ್ಲಿ 12 ಹಾಗೂ ಉತ್ತರ ಭಾಗದಲ್ಲಿ ಎಂಟು ಕ್ರಾಸ್‍ಗಳಿವೆ. ಈ ಹಿಂದೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಕೆಲವು ತಪ್ಪು ಮಾಹಿತಿಯಿಂದ ಕೂಡಿವೆ ಎಂಬ ದೂರು ಬಂದಿದ್ದವು. ಇತ್ತೀಚೆಗೆ ಹೊಸದಾಗಿ ನಾಮಫಲಕಗಳನ್ನು ಅಳವಡಿಸಲು ಟೆಂಡರ್ ಕರೆದು ಕೆಲಸ ವಹಿಸಲಾಗಿತ್ತು.

ಹೊಸ ಫಲಕಗಳನ್ನು ಹಾಕುವುದಕ್ಕೂ ಮುನ್ನ ಈ ಹಿಂದೆ ಅಳವಡಿಸಿದ್ದ ನಾಮಫಲಕಗಳನ್ನು ತೆರವುಗೊಳಿಸಬೇಕಿತ್ತು. ಹಾಗೆ ಮಾಡುವ ಬದಲು ಹಳೆಯ ನಾಮಫಲಕಗಳ ಪಕ್ಕದಲ್ಲಿಯೇ ಹೊಸ ನಾಮಫಲಕಗಳನ್ನು ಅಳವಡಿಸಲಾಗಿದ್ದು, ಗೊಂದಲ ಏರ್ಪಟ್ಟಿದೆ. 

ADVERTISEMENT

ಈ ಮಧ್ಯೆ, ವಾರ್ಡ್‍ಗಳ ಸಂಖ್ಯೆ ಮತ್ತು ಬೀದಿಗಳ ಹೆಸರುಗಳು ಬದಲಾಗಿವೆ. ಆದರೆ ಹಳೆಯ ನಾಮಫಲಕಗಳಲ್ಲಿ ಹಳೆಯ ಮಾಹಿತಿ ಇದ್ದು, ನೂತನ ಫಲಕಗಳ ಮಾಹಿತಿ ಜೊತೆ ಹೋಲಿಕೆಯಾಗುತ್ತಿಲ್ಲ. ಈ ಹಿಂದೆ ಇಡೀ ವಾರ್ಡ್‍ಗೆ ದುರ್ಗಿಗುಡಿ ಎಂದು ಹೆಸರಿಸಲಾಗಿತ್ತು. ಇದೀಗ ಮೂರು ವಾರ್ಡ್‍ಗಳಾಗಿ ವಿಂಗಡಣೆಯಾಗಿದ್ದು, ದಕ್ಷಿಣ ಭಾಗ ಹಾಗೂ ಮಧ್ಯಭಾಗ ಹಾಗೂ ಉತ್ತರಭಾಗ ಎಂದು ಬದಲಾಗಿದೆ. ಈ ಎರಡೂ ಬೋರ್ಡ್‍ಗಳು ಅಕ್ಕಪಕ್ಕದಲ್ಲಿಯೇ ಇರುವುದರಿಂದ ವಿಳಾಸ ಹಿಡಿದು ಬರುವವರು ಯಾವುದ ಸರಿ, ಯಾವುದು ತಪ್ಪು ಎಂಬ ಗೊಂದಲಕ್ಕೆ ಈಡಾಗುತ್ತಿದ್ದಾರೆ. ಹೊಸದಾಗಿ ಪಟ್ಟಣಕ್ಕೆ ಬಂದವರು, ಸ್ಪಷ್ಟನೆಗಾಗಿ ಸ್ಥಳೀಯರನ್ನು ವಿಚಾರಿಸಬೇಕಿದೆ.

ಪುರಸಭೆ ಅವಧಿ ಮುಕ್ತಾಯವಾಗಿದ್ದು, ಅಧಿಕಾರದ ಅವಧಿ ಮುಗಿಯುವ ಹಂತದಲ್ಲಿ ಕೌನ್ಸಿಲರ್‌ಗಳ ಹೆಸರನ್ನು ನಾಮಫಲಕಗಳಲ್ಲಿ ಬರೆಸಲಾಗಿದೆ. ಸದ್ಯದಲ್ಲೇ ಪುರಸಭೆಗೆ ಚುನಾವಣೆ ನಡೆಯುವ ಸಂಭವವಿದ್ದು, ಹೊಸ ಸದಸ್ಯರು ಆಯ್ಕೆಯಾಗಿ ಬಂದಾಗ ಈ ಫಲಕಗಳನ್ನು ಮತ್ತೆ ಬದಲಾಯಿಸಬೇಕಿದೆ. ಅದಕ್ಕೆ ಮತ್ತೊಂದಿಷ್ಟು ದುಡ್ಡನ್ನು ಭರಿಸಬೇಕಾಗುತ್ತದೆ. ಇಂತಹ ಯಡವಟ್ಟುಗಳಿಗೆ ಪುರಸಭೆ ದಾರಿ ಮಾಡಿಕೊಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಒಂದೇ ಜಾಗದಲ್ಲಿ ಎರಡು ರೀತಿಯ ವಿಳಾಸ ತೋರಿಸುತ್ತಿರುವ ನಾಮಫಲಕಗಳು
ಪುರಸಭೆ ಅಧಿಕಾರಿಗಳು ಆತುರದಲ್ಲಿ ಈ ಕೆಲಸ ಮಾಡಿದ್ದಾರೆ. ವಾರ್ಡ್‌ ಅಡ್ಡರಸ್ತೆ ಮುಖ್ಯರಸ್ತೆ ಬಗ್ಗೆ ತಪ್ಪು ಮಾಹಿತಿ ಇದ್ದು ಆದಷ್ಟು ಬೇಗ ಫಲಕಗಳನ್ನು ತೆರವುಗೊಳಿಸಬೇಕು.
- ಎಂ. ವಾಸಪ್ಪ, ಮಾಜಿ ಸೈನಿಕರು ಹೊನ್ನಾಳಿ
ಫುರಸಭೆ ಎಂಜಿನಿಯರ್‌ಗೆ ಸೂಚಿಸಿ ಆದಷ್ಟು ಬೇಗ ಹಳೆಯ ನಾಮಫಲಕಗಳನ್ನು ತೆರವುಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲ ಬಗೆಹರಿಯುತ್ತದೆ
- ಟಿ. ಲೀಲಾವತಿ, ಮುಖ್ಯಧಿಕಾರಿಗಳು ಪುರಸಭೆ ಹೊನ್ನಾಳಿ
ಒಂದೇ ಜಾಗದಲ್ಲಿ ಎರಡು ರೀತಿಯ ವಿಳಾಸ ತೋರಿಸುತ್ತಿರುವ ನಾಮಫಲಕಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.