ADVERTISEMENT

ಹೊನ್ನಾಳಿ | ಕೂಳೇನಹಳ್ಳಿ ಸತೀಶ್‌ಗಾಗಿ ದೇಗುಲದಲ್ಲಿ 1 ಗಂಟೆ ಕಾದ ಶಾಸಕ ಶಾಂತನಗೌಡ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:48 IST
Last Updated 21 ಸೆಪ್ಟೆಂಬರ್ 2025, 6:48 IST
ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಆಣೆ ಪ್ರಮಾಣ ಮಾಡಲು ಕೂಳೇನಹಳ್ಳಿ ಸತೀಶ್ ಅವರ ಬರುವಿಕೆಗಾಗಿ ಕಾದ ಶಾಸಕ ಡಿ.ಜಿ.ಶಾಂತನಗೌಡ
ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಆಣೆ ಪ್ರಮಾಣ ಮಾಡಲು ಕೂಳೇನಹಳ್ಳಿ ಸತೀಶ್ ಅವರ ಬರುವಿಕೆಗಾಗಿ ಕಾದ ಶಾಸಕ ಡಿ.ಜಿ.ಶಾಂತನಗೌಡ   

ಹೊನ್ನಾಳಿ: ತಾಲ್ಲೂಕಿನ ಕುಂದೂರು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ಶಾಸಕ ಡಿ.ಜಿ. ಶಾಂತನಗೌಡ ಅವರು ರೈತ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೂಳೇನಹಳ್ಳಿ ಸತೀಶ್ ಅವರಿಗಾಗಿ ಒಂದು ತಾಸು ಕಾದರೂ ಅವರು ಸ್ಥಳಕ್ಕೆ ಬರಲಿಲ್ಲ.

ಭದ್ರಾ ಬಲದಂಡೆ ನಾಲೆಯಿಂದ ಹೊಸದುರ್ಗ ಹಾಗೂ ತರಿಕೆರೆ ತಾಲ್ಲೂಕುಗಳ ಗ್ರಾಮಗಳಿಗೆ ಕುಡಿಯುವ ನೀರು ಕೊಡುವ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರನಿಂದ ಶಾಂತನಗೌಡ ಅವರು ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದ ಕೂಳೇನಹಳ್ಳಿ ಸತೀಶ್ ಅವರು, ಹಣ ಪಡೆದಿಲ್ಲ ಎಂದಾದರೆ ದೇವಸ್ಥಾನದಲ್ಲಿ ಆಣೆ– ಪ್ರಮಾಣ ಮಾಡುವಂತೆ ಶಾಸಕರಿಗೆ ಈಚೆಗೆ ಸವಾಲು ಹಾಕಿದ್ದರು. 

ಈ ಸವಾಲನ್ನು ಸ್ವೀಕರಿಸಿದ್ದ ಶಾಂತನಗೌಡರು ಶನಿವಾರ ದೇವಸ್ಥಾನಕ್ಕೆ ಬಂದು ಕೂಳೇನಹಳ್ಳಿ ಸತೀಶ್ ಅವರಿಗಾಗಿ ಒಂದು ಗಂಟೆ ಕಾಯುತ್ತಾ ಕುಳಿತಿದ್ದರು.  

ADVERTISEMENT

ಈ ವೇಳೆ ಮಾತನಾಡಿದ ಶಾಂತನಗೌಡರು, ‘ಕುಂದೂರಿಗೆ ಬಂದು ಸತೀಶ್‌ ಅವರಿಗಾಗಿ ಕಾದರೂ ಅವರು ಬಂದಿಲ್ಲ, ಇದರಿಂದ ಸತೀಶ್ ಅವರು ಸುಳ್ಳು ಆರೋಪ ಹೊರಿಸಿದ್ದು ಸಾಬೀತಾದಂತಾಗಿದೆ’ ಎಂದು ಹೇಳಿದರು.

‘ನಾನು ಪ್ರಮಾಣ ಮಾಡುವ ವಿಚಾರವಾಗಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದೆ. ಪ್ರಮಾಣಕ್ಕೆ ಬಾರದಿರುವ ಕೂಳೇನಹಳ್ಳಿ ಸತೀಶ್ ಅವರ ಬಗ್ಗೆ ಜನತೆಯೇ ತೀರ್ಮಾನಿಸಲಿ’ ಎಂದರು.

ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಆರ್. ನಾಗಪ್ಪ, ಡಿ.ಜಿ. ವಿಶ್ವನಾಥ್, ವರದರಾಜಪ್ಪ ಗೌಡ, ಕೆಂಗಲಹಳ್ಳಿ ಷಣ್ಮುಖಪ್ಪ, ಕೂಲಂಬಿ ಲೋಕೇಶ್ ಪಾಟೀಲ್, ರಾಜಪ್ಪ, ಯಕ್ಕನಹಳ್ಳಿ ಎಸ್.ಎಂ. ನಾಗರಾಜಪ್ಪ, ಮುಕ್ತೇನಹಳ್ಳಿ ಮರುಳಸಿದ್ದಪ್ಪ ಸೇರಿ ಅನೇಕ ಮುಖಂಡರು ಹಾಜರಿದ್ದರು.

3ಇಪಿ : ಹೊನ್ನಾಳಿ ತಾ ಕುಂದೂರು ಗ್ರಾಮದಲ್ಲಿ ಆಣೆ ಪ್ರಮಾಣಕ್ಕಾಗಿ ಬಂದಿದ್ದ ಶಾಸಕ ಡಿ.ಜಿ. ಶಾಂತನಗೌಡ ಅವರು ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.