ADVERTISEMENT

ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಹಾಸ್ಟೆಲ್‌!

ಮೆಟ್ರಿಕ್‌ಪೂರ್ವ ಹಂತದ 76 ಬಾಲಕಿಯರ ಶಿಕ್ಷಣ ಅತಂತ್ರ..

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 6:20 IST
Last Updated 17 ಜುಲೈ 2025, 6:20 IST
ದಾವಣಗೆರೆಯ ಕುಂದವಾಡ ರಸ್ತೆಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದ ಕಟ್ಟಡ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಕುಂದವಾಡ ರಸ್ತೆಯಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದ ಕಟ್ಟಡ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (ಬಿಸಿಎಂ) ಮೆಟ್ರಿಕ್‌ಪೂರ್ವ ಹಂತದ ಬಾಲಕಿಯರಿಗೆ ಒಂದೇ ಹಾಸ್ಟೆಲ್‌ ಇದೆ. ವಸತಿ ನಿಲಯದ ಸೌಲಭ್ಯ ಸಿಗದೇ ಬಡ ಕುಟುಂಬದ 76 ವಿದ್ಯಾರ್ಥಿನಿಯರ ಶಿಕ್ಷಣ ಅತಂತ್ರವಾಗಿದೆ.

ನಗರದಲ್ಲಿ ಹಾಸ್ಟೆಲ್‌ಗೆ ಪ್ರವೇಶ ದೊರೆಯದ್ದರಿಂದ ಇವರಲ್ಲಿ ಕೆಲವು ಬಾಲಕಿಯರಿಗೆ ನಿಯಮಿತವಾಗಿ ಶಾಲೆಗೆ ಹಾಜರಾಗಲೂ ಸಾಧ್ಯವಾಗದೇ ಪರ್ಯಾಯ ವ್ಯವಸ್ಥೆಗೆ ಕಾಯುತ್ತಿದ್ದಾರೆ.

ನಗರದಲ್ಲಿರುವ ಬಿಸಿಎಂ ಇಲಾಖೆಯ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 5 ಬಾಲಕರಿಗೆ ಹಾಗೂ 1 ಬಾಲಕಿಯರಿಗೆ ಮೀಸಲಾಗಿದೆ. ಕುಂದುವಾಡ ರಸ್ತೆಯಲ್ಲಿರುವ ಬಾಲಕಿಯರ ಹಾಸ್ಟೆಲ್‌ 100 ವಿದ್ಯಾರ್ಥಿನಿಯರಿಗೆ ಆಶ್ರಯ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಖಾಲಿ ಇದ್ದ 30 ಸೀಟುಗಳಿಗೆ 106 ಅರ್ಜಿಗಳು ಸಲ್ಲಿಕೆಯಾಗಿದ್ದವು. ಸೀಟು ಹಂಚಿಕೆ ಪ್ರಕ್ರಿಯೆ ಜೂನ್‌ 30ಕ್ಕೆ ಪೂರ್ಣಗೊಂಡಿದೆ.

ADVERTISEMENT

‘ಹಾಸ್ಟೆಲ್‌ ಸೀಟು ಸಿಗುವ ನಿರೀಕ್ಷೆಯಲ್ಲಿ ಮಗಳನ್ನು ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದೆ. ಅರ್ಜಿ ಸಲ್ಲಿಸಿ ತಿಂಗಳಿಂದ ಕಾಯುತ್ತಿದ್ದೇವೆ. ಸಂಬಂಧಿಕರ ಮನೆಯಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದ ಮಗಳು ವಾರದಿಂದ ಗ್ರಾಮಕ್ಕೆ ಮರಳಿದ್ದಾಳೆ. ದಾವಣಗೆರೆಯಿಂದ 28 ಕಿ.ಮೀ ದೂರದಲ್ಲಿರುವ ಊರಿನಿಂದ ಬಸ್‌ ಸೌಲಭ್ಯವೂ ಸರಿಯಾಗಿಲ್ಲ’ ಎಂದು ಪಾಲಕರೊಬ್ಬರು ಅಳಲು ತೋಡಿಕೊಂಡರು.

ಪ್ರಸಕ್ತ ಶೈಕ್ಷಣಿಕ ವರ್ಷ ಮೇ 29ರಿಂದ ಆರಂಭವಾಗಿದೆ. ಜೂನ್‌ ಮೊದಲ ವಾರದಿಂದ ತರಗತಿಗಳು ನಡೆಯುತ್ತಿವೆ. ಬಹು ಬೇಡಿಕೆಯ ಬಾಲಕಿಯರ ಮೆಟ್ರಿಕ್‌ಪೂರ್ವ ಹಾಸ್ಟೆಲ್‌ಗೆ ಪ್ರಸಕ್ತ ವರ್ಷ ಪ್ರವೇಶ ಪಡೆದ 30 ವಿದ್ಯಾರ್ಥಿನಿಯರಲ್ಲಿ ಖಾಸಗಿ ಶಾಲೆಯೊಂದಕ್ಕೆ 25 ಸೀಟು ಹಂಚಿಕೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

‘ಇಲಾಖೆಯ ಅಧಿಕೃತ ಜಾಲತಾಣ ‘ನಿಲಯ’ದಲ್ಲಿ ಅರ್ಜಿ ಸಲ್ಲಿಕೆ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ ನಡೆದಿದೆ. ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶ ಸಿಗುತ್ತದೆ. ಸೀಟು ಕೈತಪ್ಪಿದ 76 ವಿದ್ಯಾರ್ಥಿನಿಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ತಾಲ್ಲೂಕು ಬಿಸಿಎಂ ಅಧಿಕಾರಿ ಪುಷ್ಪಾ ‘ಪ್ರಜಾವಾಣಿ’ಗೆ ವಿವರಿಸಿದರು.

‘ಜಿಲ್ಲೆಯಲ್ಲಿ ಬಿಸಿಎಂ ಇಲಾಖೆಯ 35 ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯಗಳಿವೆ. ಅವುಗಳಲ್ಲಿ 14 ಬಾಲಕಿಯರವು, 21 ಬಾಲಕರವು. ಒಟ್ಟು 1,875 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲು ಅವಕಾಶವಿದೆ. ದಾವಣಗೆರೆ ನಗರ ಹೊರತುಪಡಿಸಿ ಉಳಿದೆಡೆ ಹಾಸ್ಟೆಲ್‌ಗೆ ಬೇಡಿಕೆ ಕಡಿಮೆ ಇದ್ದು, 64 ಸೀಟುಗಳು ಉಳಿಕೆಯಾಗಿವೆ. ಇದರಲ್ಲಿ 24 ಸೀಟುಗಳನ್ನು ದಾವಣಗೆರೆ ನಗರಕ್ಕೆ ಮರುಹೊಂದಾಣಿಕೆ ಮಾಡಿಕೊಂಡು ಸೀಟಿಗೆ ಕಾಯುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರವೇಶಾವಕಾಶ ಕಲ್ಪಿಸುವುದಾಗಿ’ ಇಲಾಖೆ ತಿಳಿಸಿದೆ.

‘ಹಾಸ್ಟೆಲ್‌ ಸೀಟು ಸಿಗದಿರುವ ಕಾರಣಕ್ಕೆ 8 ವಿದ್ಯಾರ್ಥಿನಿಯರು ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿಲ್ಲ. ಟಿ.ಸಿ ನೀಡುವಂತೆ ಕೆಲ ಪಾಲಕರು ಬೇಡಿಕೆ ಇಟ್ಟಿದ್ದಾರೆ. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಪ್ರವೇಶ ಸಿಗುವ ವ್ಯವಸ್ಥೆ ಆಗಬೇಕು. ಇಲ್ಲವಾದರೆ ಗ್ರಾಮೀಣ ಪ್ರದೇಶದ ಬಾಲಕಿಯರು ಶಿಕ್ಷಣದಿಂದ ವಂಚಿತವಾಗುವ ಅಪಾಯವಿದೆ’ ಎಂದು ಖಾಸಗಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕೇಂದ್ರದಲ್ಲಿ ಹಾಸ್ಟೆಲ್‌ಗೆ ಹೆಚ್ಚು ಬೇಡಿಕೆ ಇದೆ. 2 ಹೊಸ ಹಾಸ್ಟೆಲ್‌ಗೆ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ. ಮಂಜೂರಾತಿ ದೊರೆತ ತಕ್ಷಣವೇ ಕಾರ್ಯಾರಂಭ ಮಾಡಲಾಗುವುದು
ರೇಣುಕಾದೇವಿ ಜಿಲ್ಲಾ ಅಧಿಕಾರಿ ಬಿಸಿಎಂ ಇಲಾಖೆ
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 38 ಮೆಟ್ರಿಕ್‌ಪೂರ್ವ ಹಾಸ್ಟೆಲ್‌ಗಳಿದ್ದು 2753 ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಯಾರೊಬ್ಬರಿಗೂ ಪ್ರವೇಶಾವಕಾಶ ನಿರಾಕರಿಸಿಲ್ಲ
ನಾಗರಾಜ್‌ ಉಪನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

Quote - ಮೆಟ್ರಿಕ್‌ಪೂರ್ವಕ್ಕಿಂತ ಮೆಟ್ರಿಕ್‌ ನಂತರದ ಹಾಸ್ಟೆಲ್‌ಗೆ ಬೇಡಿಕೆ ಹೆಚ್ಚಿದೆ. ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಪ್ರವೇಶಾತಿ ಕಲ್ಪಿಸಲಾಗಿದೆ ನವೀನ್‌ ಮಠದ ಜಿಲ್ಲಾ ಅಧಿಕಾರಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

14 ಹಾಸ್ಟೆಲ್‌ಗೆ ಪ್ರಸ್ತಾವ

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್‌ಪೂರ್ವ ಮತ್ತು ಮೆಟ್ರಿಕ್‌ ನಂತರದ 14 ನೂತನ ಹಾಸ್ಟೆಲ್‌ಗಳಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಇದರಲ್ಲಿ 6 ಹಾಸ್ಟೆಲ್‌ಗಳನ್ನು ದಾವಣಗೆರೆ ನಗರದಲ್ಲಿ ಕಾರ್ಯಾರಂಭ ಮಾಡಲು ಇಲಾಖೆ ತೀರ್ಮಾನಿಸಿದೆ. ‘ಜಿಲ್ಲೆಯಲ್ಲಿ 12 ಹಾಸ್ಟೆಲ್‌ಗಳಿದ್ದು ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಮತ್ತೆ 14 ಹಾಸ್ಟೆಲ್‌ಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ದಾವಣಗೆರೆಯಲ್ಲಿ 6 ಚನ್ನಗಿರಿ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ತಲಾ 4 ವಿದ್ಯಾರ್ಥಿನಿಲಯ ಹಂಚಿಕೆಯಾಗಿದೆ. ಇದರಲ್ಲಿ ಒಂದು ಮಂಜೂರಾತಿ ಆಗಿದ್ದು ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ’ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನವೀನ್‌ ಮಠದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.