ಸುರಹೊನ್ನೆ (ನ್ಯಾಮತಿ): ನ್ಯಾಮತಿ ತಾಲ್ಲೂಕಿನ ಹೊಸಕೊಪ್ಪ ಗ್ರಾಮದ ಎಚ್.ಎಸ್. ರುದ್ರಪ್ಪ ಅವರು ನಾಡು ಕಂಡ ಮೇರು ವ್ಯಕ್ತಿಯಾಗಿದ್ದರು ಎಂದು ಸಾಹಿತಿ, ವೈದ್ಯ ಎಚ್.ಎಸ್.ರುದ್ರೇಶ್ ಅಭಿಪ್ರಾಯಪಟ್ಟರು.
ರೈತ ಸಂಘ, ಹಸಿರುಸೇನೆ ಹಾಗೂ ಸುರಹೊನ್ನೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನ್ಯಾಮತಿ ಹೊರವಲಯದ ಸುರಹೊನ್ನೆ–ಬೆಳಗುತ್ತಿ ರಸ್ತೆಯಲ್ಲಿ ‘ಎಚ್.ಎಸ್.ರುದ್ರಪ್ಪ ಸರ್ಕಲ್’ ಹೆಸರಿನ ನಾಮಫಲಕ ಅನಾವರಣ ಮಾಡಿ ಮಾತನಾಡಿದರು.
ರುದ್ರಪ್ಪ ಅವರು ಮೈಸೂರು ರಾಜ್ಯದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1954ರಲ್ಲಿ ಸಭಾಪತಿ, 1956ರಲ್ಲಿ ಕಡಿದಾಳ್ ಮಂಜಪ್ಪ ಅವರ ಮಂತ್ರಿಮಂಡಲದಲ್ಲಿ ಅರಣ್ಯ, ಕೃಷಿ ಖಾತೆಗಳ ಜೊತೆ ನಾಲ್ಕು ಸಣ್ಣ ಖಾತೆಗಳನ್ನು ನಿರ್ವಹಿಸಿದ್ದರು. ಎಸ್.ನಿಜಲಿಂಗಪ್ಪ, ಎಸ್.ಆರ್.ಕಂಠಿ, ಬಿ.ಡಿ.ಜತ್ತಿ ಅವರ ಮಂತ್ರಿಮಂಡಲಗಳಲ್ಲಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು ಎಂದರು.
‘ರುದ್ರಪ್ಪ ಅವರು ರೈತರ ಏಳಿಗೆಗಾಗಿ ಶ್ರಮಿಸಿದ ರೈತ ಸೇನಾನಿ ಆಗಿದ್ದರು. ರೈತರಿಗೆ ಸಿಗಬೇಕಾದ ಮಾನ್ಯತೆ, ಗೌರವ, ಪ್ರತಿಫಲ ಎಲ್ಲವೂ ದೊರಕುವಂತೆ ಮಾಡಿದರು. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂಬ ಉದ್ದೇಶದಿಂದ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಿದ್ದೇವೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಜಿ.ಬಸವರಾಜಪ್ಪ ಹೇಳಿದರು.
ಸುರಹೊನ್ನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶೀಲ, ರೈತ ಮುಖಂಡರಾದ ಕೋಡಿಕೊಪ್ಪ ಶಿವಪ್ಪ, ಸಾಲಬಾಳು ಗೋಪಾಲನಾಯ್ಕ, ಜಿ.ಆರ್.ಮಂಜುನಾಥ, ಬಿ.ಜಿ.ಷಣ್ಮುಖಪ್ಪ ಗೊರಟ್ಟಿ ಮಂಜಪ್ಪ, ಟಿ.ನಾಗರಾಜಪ್ಪ, ಜಿ.ಎಚ್.ಬಸವರಾಜಪ್ಪ, ನಿವೃತ್ತ ಪ್ರಾಂಶುಪಾಲ ಜೋಗದ ವೀರಪ್ಪ, ಶಿವಮೊಗ್ಗ ಚನ್ನೇಶ, ಉಮೇಶ ಮರಿಗೌಡ, ರಂಗನಾಥ ನಾಗವ್ವರ, ನಾಗಣ್ಣ ಗೋಪೇನಹಳ್ಳಿ, ಹಾಲೇಶ, ಕೆ.ವೀರೇಶ, ಕೆ.ರುದ್ರಪ್ಪ, ವೈ.ಕರಿಬಸಪ್ಪ, ಪರಮೇಶ್ವರಪ್ಪ ಹಾಗೂ ಎಚ್.ಎಸ್.ರುದ್ರಪ್ಪ ಅಭಿಮಾನಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.