ADVERTISEMENT

ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರುತಿಸಿ: ಎಸ್.ಎಸ್.ಮಲ್ಲಿಕಾರ್ಜುನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 15:52 IST
Last Updated 3 ಜೂನ್ 2025, 15:52 IST
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್ ಮಾತನಾಡಿದರು
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್ ಮಾತನಾಡಿದರು   

ದಾವಣಗೆರೆ: ‘ನಗರವನ್ನು ಸುಂದರವಾಗಿಸಲು ಸುತ್ತಲೂ ವರ್ತುಲ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಸುಗಮ ಸಂಚಾರ ಮತ್ತು ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ಆದಷ್ಟು ಶೀಘ್ರವೇ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 4 ರಿಂದ 5 ಎಕರೆ ಜಾಗವನ್ನು ಗುರುತಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಅತ್ಯಾಧುನಿಕವಾಗಿ ನಗರದ ವಿನ್ಯಾಸವನ್ನು ನಿರ್ಮಾಣ ಮಾಡುವುದು ಮತ್ತು ಒಳಚರಂಡಿ, ನೀರಿನ ಸಂಪರ್ಕ, ರಸ್ತೆ ಸಂಪರ್ಕ, ವಾಯುವಿಹಾರಕ್ಕೆ ಉದ್ಯಾನಗಳ ನಿರ್ಮಾಣದಲ್ಲಿ ಪ್ರಾಧಿಕಾರದ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿನ್ಯಾಸಗಳನ್ನು ಪರಿಶೀಲನೆ ನಡೆಸಿ, ಭವಿಷ್ಯದ ದೃಷ್ಟಿಯಿಂದ ನೂತನ ಬಡಾವಣೆಗಳಿಗೆ ಅನುಮೋದನೆ ನೀಡಬೇಕು’ ಎಂದು ಸೂಚಿಸಿದರು.

ADVERTISEMENT

‘ನಗರದಲ್ಲಿ ಬಡವರು, ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಮನೆ ನಿರ್ಮಿಸಿಕೊಳ್ಳಲು ಮತ್ತು ವಾಸಿಸಲು ಅನುಕೂಲವಾಗುವಂತೆ ಪ್ರಾಧಿಕಾರದಿಂದ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಾಣ ಮಾಡಲು ಡಿಪಿಆರ್ ತಯಾರಿಸಲು ಸೂಚಿಸಲಾಗಿದೆ. ಖಾಸಗಿಯವರ ಸಹಭಾಗಿತ್ವದಲ್ಲಿಯೂ ಪ್ರಾಧಿಕಾರದಿಂದ ಹೊಸ ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಸುರಕ್ಷತೆಗೆ ಆದ್ಯತೆ:

‘ಸ್ಮಾರ್ಟ್‍ಸಿಟಿ ಯೋಜನೆಯಡಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನಗರದಲ್ಲಿ ನಡೆಯುತ್ತಿದ್ದ ಅನೇಕ ಕಳವು ಪ್ರಕರಣಗಳ ಆರೋಪಿಗಳ ಪತ್ತೆಗೆ ಇದು ಸಹಕಾರಿಯಾಗಿದೆ. ರಾಜ್ಯದ 6 ನಗರಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಲು ಸರ್ಕಾರ ಉದ್ದೇಶಿಸಿದ್ದು, ಇದರಲ್ಲಿ ದಾವಣಗೆರೆಯೂ ಸೇರಿದೆ’ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. 

ಶಾಸಕರಾದ ಕೆ.ಎಸ್.ಬಸವಂತಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಾಶಾಂತ್, ಪ್ರಾಧಿಕಾರದ ಸದಸ್ಯರಾದ ವಾಣಿ ಎಂ.ಆರ್., ಎಂ.ಮಂಜುನಾಥ್, ಗಿರೀಶ್ ಎಚ್ ಹಾಗೂ ಇನ್ನಿತರೆ ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಭೇಟಿ 16ರಂದು 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 16ರಂದು ದಾವಣಗೆರೆಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಅಂದು ಶಾಸಕ ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮ ದಿನಾಚರಣೆ ಅಂಗವಾಗಿ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅವರ ಅಭಿಮಾನಿಗಳು ಆಯೋಜಿಸುತ್ತಿದ್ದಾರೆ ಎಂದು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ತಿಳಿಸಿದರು.

ವಸತಿ ಯೋಜನೆ

ಹಳೇ ಕುಂದುವಾಡದ ಬಳಿ 53 ಎಕರೆ ಜಮೀನಿನಲ್ಲಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲು ಯೋಜಿಸಿದ್ದ ವಸತಿ ಯೋಜನೆಯನ್ನು ಕೈಬಿಡಲಾಗಿದೆ. ಅದರ ಬದಲಾಗಿ ದಾವಣಗೆರೆ ತಾಲ್ಲೂಕಿನ ವಡ್ಡನಹಳ್ಳಿ ಬಳಿ 5 ಎಕರೆಯಲ್ಲಿ 50:50ರ ಅನುಪಾತದಲ್ಲಿ ವಸತಿ ಯೋಜನೆ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಭೂಮಿ ನೀಡಲು ರೈತರು ಒಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.