ADVERTISEMENT

ಕಲಾವಿದ ಉಳಿದರೆ ಕಲೆಗೆ ಉಳಿಗಾಲ

ಸಿಜಿಕೆ ಬೀದಿ ರಂಗ ದಿನಾಚರಣೆಯಲ್ಲಿ ಗುರುಬಸವ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 14:28 IST
Last Updated 27 ಜೂನ್ 2018, 14:28 IST
ದಾವಣಗೆರೆಯಲ್ಲಿ ಬುಧವಾರ ನಡೆದ ಸಿಜಿಕೆ ಬೀದಿ ರಂಗ ದಿನಾಚರಣೆಯಲ್ಲಿ ಕಲಾವಿದರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು
ದಾವಣಗೆರೆಯಲ್ಲಿ ಬುಧವಾರ ನಡೆದ ಸಿಜಿಕೆ ಬೀದಿ ರಂಗ ದಿನಾಚರಣೆಯಲ್ಲಿ ಕಲಾವಿದರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು   

ದಾವಣಗೆರೆ: ಕಲೆಗೆ ಜೀವಂತಿಕೆ ತಂದು ಕೊಡುವವರು ಕಲಾವಿದರು. ನಾಟಕವೂ ಸೇರಿದಂತೆ ಹಲವು ಕಲೆಗಳು ಈಗ ಅಳಿವಿನಂಚಿನಲ್ಲಿ ಇವೆ. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಕಲೆ ಉಳಿಸುವ ಜವಾಬ್ದಾರಿ ಜನ, ಮತ್ತು ಸರ್ಕಾರದ ಮೇಲಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಸರ್ಕಾರದ ಗುರುಬಸವ ಸ್ವಾಮೀಜಿ ಹೇಳಿದರು.

ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡ ಸಿಜಿಕೆ ಬೀದಿ ರಂಗ ದಿನಾಚರಣೆ, ಕಲಾವಿದರಿಗೆ ಪ್ರಶಸ್ತಿ ಪ್ರದಾನ, ಮಹಿಳೆಯರಿಗೆ ಉಚಿತ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಟಿ.ವಿ. ಮಾಧ್ಯಮದ ಹಾವಳಿಯಿಂದ ಹಳ್ಳಿ ಭಾಷೆಯಲ್ಲಿ, ಕನ್ನಡ ಭಾಷೆಯಲ್ಲಿ ಇದ್ದ ಕಲೆಗಳು ನಾಶವಾಗಿ ಹೋಗುತ್ತಿವೆ. ಕೋಲಾಟದ ಕತೆಗಳು, ಪೌರಾಣಿಕ ಕತೆಗಳು ಈಗ ಕೇಳುವವರಿಲ್ಲ. ಕಲೆ ನಾಶವಾದರೆ ನಮ್ಮ ಸಾಂಸ್ಕೃತಿಕ ಸಂಪತ್ತು ನಾಶವಾದಂತೆ, ನಾವು ದರಿದ್ರರಾದಂತೆ. ಆರ್ಥಿಕವಾಗಿ ಬಡವರಾದರೂ ಕಲೆಗೆ ಶ್ರೀಮಂತಿಕೆ ತಂದುಕೊಟ್ಟ ಕಲಾವಿದರನ್ನು ಗುರುತಿಸುವ ಕೆಲಸಗಳಾಗಬೇಕು ಎಂದು ವಿಶ್ಲೇಷಿಸಿದರು.

ADVERTISEMENT

ಸಿಜಿಕೆ ಅವರು ಅರ್ಥಶಾಸ್ತ್ರದ ಪ್ರಾಧ್ಯಾಪಕ. ಆದರೆ ಅವರು ಗಮನ ಹರಿಸಿದ್ದು ರಂಗಭೂಮಿ ಕಡೆಗೆ. ಸಾಧನೆಗೆ ಅಂಗ ವೈಕಲ್ಯ ಅಡ್ಡಿಯಲ್ಲ ಎಂದು ತೋರಿಸಿದವರು ಅವರು. ಸಹಸ್ರಾರು ಶಿಷ್ಯರನ್ನು ನಾಡಿಗೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಯಲಾಟ ವಿದ್ವಾಂಸ ಡಾ.ಕೆ. ರುದ್ರಪ್ಪ ಮಾತನಾಡಿ, ರಂಗಭೂಮಿ ಅಳಿವಿನಂಚಿನಲ್ಲಿದೆ. ಇದಕ್ಕೆ ಕಾರಣವನ್ನು ಕಂಡು ಹಿಡಿದು ಆತ್ಮಾವಲೋಕನ ಮಾಡಿದರೆ ಸಿಜಿಕೆ ಬೀದಿ ರಂಗ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ಹವ್ಯಾಸಿ ರಂಗಭೂಮಿ, ವೃತ್ತಿ ರಂಗಭೂಮಿ, ಜನಪದ ರಂಗಭೂಮಿ, ಬೀದಿ ರಂಗಭೂಮಿ ಹೀಗೆ ಹಲವು ವಿಭಾಗಗಳಿವೆ. ಎಲ್ಲಾ ವಿಭಾಗಗಳಲ್ಲಿ ಸಿಜಿಕೆ ಕೆಲಸ ಮಾಡಿದ್ದಾರೆ. ಹಾಗಾಗಿಯೇ ರಂಗಭೂಮಿ ಅಂದರೆ ಸಿಜಿಕೆ, ಸಿಜಿಕೆ ಅಂದರೆ ರಂಗಭೂಮಿ ಎಂದು ಗುರುತಿಸಲಾಗುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆಯರಿಗೆ ಮಧುರ ಭಕ್ತಿ ಭವನದ ಕಲ್ಪನಾ ರಾಜ್‌ ಉಚಿತ ಸೀರೆ ವಿತರಿಸಿದರು.

ಕಮ್ಯುನಿಸ್ಟ್‌ ಮುಖಂಡ ಕೆ.ಜಿ. ಶಿವಮೂರ್ತಿ, ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ದಿಳ್ಳೆಪ್ಪ, ಕಸಾಪ ಹರಿಹರ ತಾಲ್ಲೂಕು ಕೋಶಾಧಿಕಾರಿ ಕೆ.ಎನ್‌. ಹನುಮಂತಪ್ಪ, ಚನ್ನಗಿರಿ ಹವ್ಯಾಸಿ ಗ್ರಾಮೀಣ ಕಲಾವಿದರ ಸಂಘದ ಅಧ್ಯಕ್ಷ ಬಿ.ಇ. ತಿಪ್ಪೇಸ್ವಾಮಿ, ಹರಪನಹಳ್ಳಿ ಹವ್ಯಾಸಿ ಗ್ರಾಮೀಣ ಕಲಾವಿದರ ಸಂಘದ ಅಧ್ಯಕ್ಷ ಕೆ.ಬಿ. ಷಣ್ಮುಖಪ್ಪ, ಜಗಳೂರು ಹವ್ಯಾಸಿ ಗ್ರಾಮೀಣ ಕಲಾವಿದರ ಸಂಘದ ಅಧ್ಯಕ್ಷ ಪಿ.ಜಿ. ಪರಮೇಶ್ವರಪ್ಪ, ಉಕ್ಕುಡಗಾತ್ರಿ ಕರಿಬಸವೇಶ್ವರ ಗಾನ ಕಲಾವೃಂದದ ಅಧ್ಯಕ್ಷ ಜಿ. ಸಿದ್ದನಗೌಡ, ಹೊನ್ನಾಳಿ ಹವ್ಯಾಸಿ ಗ್ರಾಮೀಣ ಕಲಾವಿದರ ಸಂಘದ ಅಧ್ಯಕ್ಷ ಎಚ್‌.ಬಿ. ಬಸವರಾಜ್‌ ಉಪಸ್ಥಿತರಿದ್ದರು.

ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್‌.ಎಸ್‌. ರಾಜು ಸ್ವಾಗತಿಸಿದರು. ಲಲಿತ್‌ ಕುಮಾರ್‌ ಜೈನ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪ್ರದಾನ

ರಂಗಭೂಮಿ ಕಲಾವಿದ ಕೆ.ಎಂ. ಕೊಟ್ರಯ್ಯ ಅರಸೀಕೆರೆ ಅವರಿಗೆ ಸಿಜಿಕೆ ಪ್ರಶಸ್ತಿ, ಮೈಸೂರಿನ ಕಲಾವಿದೆ ಸರಸ್ವತಿ ಜುಲೇಕಾ ಬೇಗಂ ಶೇಖ್‌ಚಾಂದ್‌ ಮತ್ತು ಕೆ.ರಂಗಸ್ವಾಮಿ ಅವರಿಗೆ ರಂಗ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಮೀಣ ಕಲಾವಿದರಾದ ಟಿ.ಕೆ. ರುದ್ರಪ್ಪ ತ್ಯಾವಣಿಗೆ, ಕೆ.ಎಚ್‌. ಬ್ರಹ್ಮಾಚಾರಿ ಹೊಸಮಳಲಿ, ಬಿ. ಹನುಮಂತಾಚಾರಿ ಸಾರಥಿ, ಗೋಂದಳಿ ಗೋಪಾಲ ಅರಸೀಕೆರೆ, ಬಸವರಾಜಪ್ಪ ಬೆಳಕೆರೆ, ಒ. ಸಿದ್ದೇಶಪ್ಪ ಕೊಂಡಜ್ಜಿ, ಬಸವರಾಜ ಬೆನ್ನೂರು, ಕೆ.ಬಿ. ನರಸಿಂಹಪ್ಪ ಅರಸೀಕೆರೆ, ಡಿ.ಶಾಂತಪ್ಪ ಕನಕನಬಸಾಪುರ, ಕೆ. ಲಕ್ಷ್ಮಪ್ಪ ಅಡವಿಮಲ್ಲಾಪುರ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.