ADVERTISEMENT

ದಾವಣಗೆರೆ: ಫಾಸ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ದರದ ಬಿಸಿ

ಹೆಬ್ಬಾಳು ಟೋಲ್ ಪ್ಲಾಜಾದಲ್ಲಿ ಚಾಲಕರ ವಾಗ್ವಾದ

ಡಿ.ಕೆ.ಬಸವರಾಜು
Published 17 ಫೆಬ್ರುವರಿ 2021, 2:23 IST
Last Updated 17 ಫೆಬ್ರುವರಿ 2021, 2:23 IST
ಫಾಸ್ಟ್ಯಾಗ್ ಕಡ್ಡಾಯಗೊಳಿಸಿರುವುದರಿಂದ ದಾವಣಗೆರೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ–4ರ ಹೆಬ್ಬಾಳು ಟೋಲ್ ಪ್ಲಾಜಾದ ಬಳಿ ಮಂಗಳವಾರ ಕಂಡು ಬಂದ ವಾಹನದಟ್ಟಣೆ.        –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಫಾಸ್ಟ್ಯಾಗ್ ಕಡ್ಡಾಯಗೊಳಿಸಿರುವುದರಿಂದ ದಾವಣಗೆರೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ–4ರ ಹೆಬ್ಬಾಳು ಟೋಲ್ ಪ್ಲಾಜಾದ ಬಳಿ ಮಂಗಳವಾರ ಕಂಡು ಬಂದ ವಾಹನದಟ್ಟಣೆ.        –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಕೇಂದ್ರ ಸರ್ಕಾರ ಸೋಮವಾರ ರಾತ್ರಿಯಿಂದಲೇ ಫಾಸ್ಟ್ಯಾಗ್ ಕಡ್ಡಾಯ ಮಾಡಿದ್ದು, ನಗರದ ಹೊರವಲಯದ ಹೆಬ್ಬಾಳು ಟೋಲ್ ಪ್ಲಾಜಾದಲ್ಲಿ ಫಾಸ್ಟ್ಯಾಗ್ ಇಲ್ಲದ ವಾಹನ ಚಾಲಕರು ದುಪ್ಪಟ್ಟು ದರ ತೆತ್ತು ಟೋಲ್‌ಗಳಲ್ಲಿ ಸಂಚರಿಸಬೇಕಾಯಿತು.

ಮಧ್ಯಾಹ್ನದ ವೇಳೆ ಟೋಲ್‌ನಲ್ಲಿ ಫಾಸ್ಟ್ಯಾಗ್ ಲೇನ್‌ಗಳಲ್ಲಿ ಸಂಚಾರ ಸಲೀಸಾದರೂ ನಗದು ‌ಲೇನ್‌ನಲ್ಲಿ ವಾಹನಗಳ ದಟ್ಟಣೆ ಏರ್ಪಟ್ಟಿತ್ತು. ಫಾಸ್ಟ್ಯಾಗ್‌ಗಾಗಿ ನಾಲ್ಕು ಕೌಂಟರ್‌ಗಳನ್ನು ತೆರೆದಿದ್ದು, ಸರ್ವರ್ ಸಮಸ್ಯೆಯಿಂದಾಗಿ ಒಂದೊಂದು ಫಾಸ್ಟ್ಯಾಗ್ ಪಡೆಯಲು ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಯಿತು.

ಫಾಸ್ಟ್ಯಾಗ್ ಇಲ್ಲದಿದ್ದರೆ ದು‌ಪ್ಪಟ್ಟು ಹಣ ತೆರುವ ವಿಷಯ ಗೊತ್ತಿಲ್ಲದೇ ಕೆಲವು ಚಾಲಕರು ಹೆಚ್ಚಿನ ಹಣ ಕೇಳಿದಾಗ ಕಕ್ಕಾಬಿಕ್ಕಿಯಾದರು. ಕೆಲವರು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು.

ADVERTISEMENT

ಹೆಬ್ಬಾಳ್ ಟೋಲ್‌ನಲ್ಲಿ 12 ಲೇನ್‌ಗಳು ಇದ್ದು, ಮೊದಲ ಎರಡು ಲೇನ್‌ಗಳನ್ನು ನಗದು ಪಾವತಿಗೆ ಮೀಸಲಿರಿಸಲಾಗಿದೆ. ಒಂದು ಲೇನ್‌ ಅನ್ನು ವಿಐಪಿ/ಆಂಬುಲೆನ್ಸ್‌ಗೆ ಮೀಸಲಿಡಲಾಗಿದೆ. ವಿಐಪಿ ಲೇನ್‌ನಲ್ಲೂ ಕೆಲವರು ಗಲಾಟೆ ಮಾಡಿದರು.

ಹಳ್ಳಿಯ ಒಳರಸ್ತೆಗಳಲ್ಲಿ ಸಂಚಾರ: ‘ಶುಲ್ಕ ದುಪ್ಪಟ್ಟಾಗಿರುವುದರಿಂದ ಎಷ್ಟೋ ಮಂದಿ ಟೋಲ್‌ ಬಿಟ್ಟು ಬೇರೆ ದಾರಿಗಳಲ್ಲಿ ಸಂಚರಿಸುತ್ತಿದ್ದಾರೆ. ದಾವಣಗೆರೆಯಿಂದ ಬರುವವರು ಹಾಲುವರ್ತಿ, ಗುಡಾಳು, ಹುಣಸೇಕಟ್ಟೆ ಮಾರ್ಗಗಳ ಮೂಲಕ ಕಣ್ಣು ತಪ್ಪಿಸಿ ಸಂಚರಿಸುತ್ತಿದ್ದಾರೆ’ ಎಂದು ಟೋಲ್ ಸಿಬ್ಬಂದಿ ಹೇಳುತ್ತಾರೆ.

ಶೇ 10ರಷ್ಟು ವಾಹನಗಳಿಗೆ ದುಪ್ಪಟ್ಟು ವಸೂಲಿ: ‘ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಶೇ 10ರಷ್ಟು ವಾಹನಗಳು ನಗದು ಲೇನ್‌ನಲ್ಲಿ ಸಂಚರಿಸಿದ್ದು, 800ಕ್ಕೂ ಹೆಚ್ಚು ವಾಹನಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗಿದೆ’ ಎಂದು ಟೋಲ್‌ನ ಉಸ್ತುವಾರಿ ಮಾರುತಿ ಕೆ.ಎನ್. ತಿಳಿಸಿದರು.

‘ನಾನು ಮಂಗಳೂರಿನಿಂದ ಬರುವಾಗ ಸುರತ್ಕಲ್ ಬಳಿ ಫಾಸ್ಟ್ಯಾಗ್ ರೀಡ್ ಆಗಲಿಲ್ಲ. ಅಲ್ಲಿ ನಾನೇ ಹಣ ಪಾವತಿಸಿ ಬಂದೆ. ಇಲ್ಲೂ ರೀಡ್ ಆಗುತ್ತಿಲ್ಲ. ನಾವು ಏನು ಮಾಡಬೇಕು’ ಎಂದು ಚಿತ್ರದುರ್ಗದ ಲಾರಿ ಚಾಲಕ ಮುರುಳಿಮೂರ್ತಿ ಅಳಲು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.