ADVERTISEMENT

ಎರೆ ಹುಳು ಇಲ್ಲದಿದ್ದರೆ ಸೂಕ್ಷ್ಮಾಣು ಜೀವಿಗಳಿಲ್ಲ

ಅತ್ತಿಗೆರೆಯಲ್ಲಿ ನಡೆದ ಕ್ಷೇತ್ರೋತ್ಸವ; ಮೈಕ್ರೋಬಿ ಸಂಸ್ಥೆ ಅಧ್ಯಕ್ಷ ಹುಲ್ಲುನಾಚೇಗೌಡ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 7:17 IST
Last Updated 14 ಮಾರ್ಚ್ 2024, 7:17 IST
ಮೈಕ್ರೋಬಿ
ಮೈಕ್ರೋಬಿ   

ದಾವಣಗೆರೆ: ರೈತರ ಜಮೀನಿನಲ್ಲಿ ಎರೆ ಹುಳುಗಳು ಇಲ್ಲದಿದ್ದರೆ ಭೂಮಿಯ ಫಲವತ್ತತೆಗೆ ನೆರವಾಗುವ ಸೂಕ್ಷ್ಮಾಣು ಜೀವಿಗಳೇ ಇರುವುದಿಲ್ಲ. ಎರೆ ಹುಳುಗಳು ಒಂದು ಗುಂಟೆ ಜಮೀನಿನಲ್ಲಿ ಒಂದು ವರ್ಷದ ಅವಧಿಯಲ್ಲಿ 1,800 ಕೆ.ಜಿ. ಗೊಬ್ಬರರ ತಯಾರಿಸುತ್ತವೆ ಎಂದು ಸಾವಯವ ಕೃಷಿ ತಜ್ಞ, ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಆರ್‌. ಹುಲ್ಲುನಾಚೇಗೌಡ ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಮೈಕ್ರೋಬಿ ಫೌಂಡೇಷನ್, ಶಿವನಾರದಮುನಿ ಕೃಷಿ ಮಾಹಿತಿ ಕೇಂದ್ರ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ತಾಲ್ಲೂಕಿನ ಅತ್ತಿಗೆರೆ ಗ್ರಾಮದ ಪೂಜಾರ್ ಬಸವರಾಜಪ್ಪ ಅವರ ತೋಟದಲ್ಲಿ ಬುಧವಾರ ಆಯೋಜಿಸಿದ್ದ ಅಡಿಕೆ ಬೆಳೆ ಕ್ಷೇತ್ರೋತ್ಸವದಲ್ಲಿ ಅವರು ರೈತರನ್ನು ಸತ್ಕರಿಸಿ ಮಾತನಾಡಿದರು.

ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರೋಗ ನಿಯಂತ್ರಣ ಶಕ್ತಿ ಹೆಚ್ಚಿಸುವುದಕ್ಕೂ ಎರೆಹುಳು ಸಹಕಾರಿ. ಮಣ್ಣನ್ನು ರಾಸಾಯನಿಕ ಸಿಂಪಡಿಸಿ ಮಲಿನಗೊಳಿಸದಿದ್ದರೆ ಪ್ರಾಕೃತಿಕ ಸಮತೋಲನ ಇರುತ್ತದೆ. ಎರೆಹುಳುವಿನಂತೆಯೇ ಜೇನು ಹುಳುಗಳೂ ರೈತನಿಗೆ ಸಹಕಾರಿ. ಬೆಳೆಯನ್ನು ತಿಂದು ನಾಶ ಮಾಡುವ ಕೀಟಗಳನ್ನು ಜೇಡರ ಹುಳುವಿನಂತೆಯೇ ಭಕ್ಷಿಸುವ ಪರಭಕ್ಷಕ ಕೀಟಗಳು ರೈತರಿಗೆ ನೆರವಾಗುತ್ತವೆ. ಕೀಟನಾಶಕ ಸಿಂಪಡಿಸಿದರೆ ರೈತಸ್ನೇಹಿ ಕೀಟಗಳೂ ಸಾಯುತ್ತವೆ ಎಂದು ಅವರು ಹೇಳಿದರು.

ADVERTISEMENT

ಅಡಿಕೆ ಬೆಳೆಯ ನಡುವೆ ಬೆಳೆಯುವ ಕಳೆಯನ್ನು ತೆಗೆದು ಸ್ವಚ್ಛವಾಗಿ ಇಟ್ಟರೆ ಕಳೆನಾಶ ಸಿಂಪಡಿಸಿದರೆ ಬೆಳೆಯು ಪ್ರಾಕೃತಿಕ ಸಂಪನ್ಮೂಲ ಬಳಸಿಕೊಳ್ಳಲು ಆಗದು. ಇದರಿಂದ ಇಳುವರಿ ಕುಂಠಿತವಾಗುವುದಲ್ಲದೇ ಆದಾಯ ಕಡಿಮೆಯಾಗಿ, ಖರ್ಚು ಹೆಚ್ಚುತ್ತದೆ. ರೈತರು ಇದನ್ನು ಗಮನಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಅನೇಕ ಸವಾಲುಗಳಿದ್ದು, ಕೃಷಿಗೆ ನೆರವಾಗುವ ಅನೇಕ ಸಂಸ್ಥೆಗಳ ಸಹಕಾರದಿಂದ ರೈತರ ಜೀವನ ಹಸನಾಗುತ್ತಿದೆ ಎಂದು ಕೃಷಿ ಇಲಾಖೆಯ ಉಪ ನಿದೇ೯ಶಕ ಅಶೋಕಕುಮಾರ್ ಹೇಳಿದರು. ತೋಟಗಾರಿಕೆ ಇಲಾಖೆಯ ಅರುಣ್ ರಾಜ್, ಪತ್ರಕತ೯ರಾದ ನಾಗರಾಜ್ ಬಡದಾಳ್, ಸಿದ್ದಯ್ಯ ಹಿರೇಮಠ, ದಾವಣಗೆರೆ ವಿ.ವಿ.ಯ ನಿವೃತ್ತ ಕುಲಸಚಿವ ಎನ್‌.ಕೆ. ಗೌಡ, ಮೈಕ್ರೋಬಿ ಫೌಂಡೇಧಷನ್‌ ಸಂಚಾಲಕ ದಿದ್ದಿಗೆ ಮಹದೇವಪ್ಪ, ವಿಶ್ವನಾಥ್, ಹಷ೯, ಹರೀಶ್, ವಿಜಯಕುಮಾರ್ ಹಾಗೂ ಕೃಷಿಕರು ಭಾಗವಹಿಸಿದ್ದರು.

ರೈತರಾದ ಪೂಜಾರ್ ಬಸವರಾಜಪ್ಪ, ತಾರೇಹಳ್ಳಿ ಮಹದೇವಪ್ಪ, ನೀರ್ಥಡಿಯ ಚಿತ್ರಲೇಖ, ಗುಮ್ಮನೂರು ಕಲ್ಲೇಶ, ಎ.ಬಿ. ಕರಿಬಸಪ್ಪ, ಚಂದ್ರಶೇಖರ್‌, ಮಾಗಾನಹಳ್ಳಿ ಬಸವಲಿಂಗಪ್ಪ, ಪೋತಲಘಟ್ಟಿ ಮಂಜುನಾಥ, ನೀರ್ಥಡಿ ಯೋಗರಾಜು, ಹಾಲುವರ್ತಿ ಸಂದೀಪ ಅವರನ್ನು ಇದೇ ವೇಳೆ ಸತ್ಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.