
ಹರಿಹರ: ತಾಲ್ಲೂಕಿನ ಗುತ್ತೂರು ಗ್ರಾಮದ ಪಟ್ಟಾ ಜಮೀನೊಂದರಲ್ಲಿ ನಿಯಮ ಬಾಹಿರವಾಗಿ ಮಣ್ಣು ಗಣಿಗಾರಿಕೆ ನಡೆಸಲಾಗಿದೆ. ಇದರಿಂದ ಹಲವು ಸಮುದಾಯಗಳ ಸ್ಮಶಾನ, ರಸ್ತೆ ಹಾಗೂ ಮಠದ ಅವಸಾನಕ್ಕೆ ಮುನ್ನುಡಿ ಬರೆದಂತಾಗಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ನದಿಗೆ ಸಮೀಪ ಇರುವ ಪಟ್ಟಾ ಜಮೀನಿನಲ್ಲಿ 15 ದಿನಗಳಿಂದ ಅಸಹಜವಾಗಿ ಮಣ್ಣು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ದಡದಲ್ಲಿರುವ ಶತಮಾನಕ್ಕೂ ಪುರಾತನವಾದ ಸಾಧು ಸಿದ್ದಪ್ಪಜ್ಜನ ಹೊಳೆ ಮಠ, ಗ್ರಾಮದಿಂದ ನದಿಯತ್ತ ತೆರಳುವ ರಸ್ತೆ, ಮುಸ್ಲಿಂ ಹಾಗೂ ಹಿಂದೂ ಸಮುದಾಯದ ಸ್ಮಶಾನಗಳ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದೆ ಎಂದು ಆರೋಪಿಸಿದ್ದಾರೆ.
ಈ ಜಮೀನಿನಲ್ಲಿ ಕೆಲವು ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ. ಈ ಬಾರಿಯೂ 15 ದಿನಗಳಿಂದ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ದೂರಿರುವ ಗ್ರಾಮಸ್ಥರು, ಅವೈಜ್ಞಾನಿಕವಾಗಿ ಕೈಗೊಂಡಿರುವ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಜಮೀನಿನ ಪಕ್ಕದಲ್ಲೇ ಸರ್ವೆ ನಂ.13ರಲ್ಲಿ ಮುಸ್ಲಿಂ ಹಾಗೂ ಹಿಂದೂ ಸಮುದಾಯಗಳಿಗೆ ಸೇರಿದ ಸ್ಮಶಾನಗಳಿವೆ. ಸ್ಮಶಾನ ಸ್ಥಳ ಹಾಗೂ ಮಠಕ್ಕೆ ಹೋಗುವ ದಾರಿ ಕುಸಿಯುವ ಭೀತಿ ಕಾಡುತ್ತಿದೆ.
ನದಿ ತೀರದ ಈ ಭಾಗದ ಜಮೀನುಗಳಲ್ಲಿ ಕೆಂಪುಬಣ್ಣದ ಮಿದುವಾದ ಮಣ್ಣು ಇದ್ದು, ಮಳೆಗೆ ಕುಸಿಯುವ ಸ್ವಭಾವದ್ದಾಗಿದೆ. ಒಂದು ಜಮೀನಿನಲ್ಲಿ ಹತ್ತಾರು ಅಡಿಯಷ್ಟು ಮಣ್ಣು ಅಗೆದರೆ, ಪಕ್ಕದ ಜಮೀನುಗಳ ಮಣ್ಣು ಸಹಜವಾಗಿಯೇ ಕುಸಿಯುತ್ತಾ ಹೋಗುತ್ತದೆ ಎನ್ನಲಾಗಿದೆ. ನದಿ ಮಾರ್ಗದ ಇನ್ನೊಂದು ಬದಿಯ ಜಮೀನುಗಳಲ್ಲಿಯೂ ಈ ಹಿಂದೆ ನಡೆಸಿದ ಮಣ್ಣು ಗಣಿಗಾರಿಕೆಯಿಂದ 20 ಅಡಿ ಆಳದವರೆಗೆ ಕಂದಕ ಸೃಷ್ಟಿಯಾಗಿದೆ. ಈಗ ಮತ್ತೊಂದು ಬದಿಯ ಜಮೀನುಗಳಲ್ಲಿ ಆಳದ ಗಣಿಗಾರಿಕೆ ನಡೆಸುತ್ತಿರುವುದರಿಂದ, ಒಂಟಿಯಾಗುವ ರಸ್ತೆಯೂ 2–3 ವರ್ಷಗಳಲ್ಲಿ ಕಳಚಿ ಬೀಳುವ ಆತಂಕ ಎದುರಾಗಿದೆ.
ಅಕ್ರಮ ಗಣಿಗಾರಿಕೆಯಿಂದ ನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ಬಲಾಢ್ಯರ ಎದುರು ನಮ್ಮ ಧ್ವನಿಗೆ ಬಲ ಇಲ್ಲದಂತಾಗಿದೆ ಎಂದೂ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪಟ್ಟಾ ಅಥವಾ ಸರ್ಕಾರಿ ಜಮೀನುಗಳಲ್ಲಿನ ಮಣ್ಣು ಅಕ್ರಮ ಗಣಿಗಾರಿಕೆ ತಡೆಯಬೇಕಾದ ಕಂದಾಯ ಹಾಗೂ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜನರಿಂದ ದೂರು ಬಂದಾಗ ದಂಡ ವಿಧಿಸಿ ನೋಟಿಸ್ ನೀಡಿ ಸುಮ್ಮನಾಗುತ್ತವೆ-ಪಿ.ಜೆ.ಮಹಾಂತೇಶ್, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಸಂಚಾಲಕ
ಸ್ಥಳ ಪರಿಶೀಲನೆ ನಡೆಸಿ ಅಕ್ರಮವಾಗಿ ಮಣ್ಣು ಸಾಗಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು-ಗುರುಬಸವರಾಜ್, ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.